ಮೀ ಟೂ ಅಭಿಯಾನಕ್ಕೆ ನನ್ನ ಬೆಂಬಲವಿಲ್ಲ: ಮಾಜಿ ಸಚಿವೆ ಬಿ.ಟಿ.ಲಲಿತಾನಾಯಕ್

ಬೆಂಗಳೂರು, ನ.18-ಮೀ ಟೂ ಅಭಿಯಾನಕ್ಕೆ ನನ್ನ ಬೆಂಬಲವಿಲ್ಲ ಎಂದು ಮಾಜಿ ಸಚಿವೆ ಬಿ.ಟಿ.ಲಲಿತಾನಾಯಕ್ ತಿಳಿಸಿದರು.
ನಗರದ ಪುರಭವನದ ಎದುರು ಕುಮಾರ್ ಜಾಗೀರ್‍ದಾರ್ ಅಧ್ಯಕ್ಷತೆಯಲ್ಲಿ ಕ್ರಿಸ್ಪ್ ಸಂಸ್ಥೆ ಹಾಗೂ ಕರ್ನಾಟಕ ರಾಜ್ಯ ವಿಶ್ವಕರ್ಮ ಯುವಜನ ಪರಿಷತ್ ಮತ್ತು ರಾಷ್ಟ್ರೀಯ ಪುರುಷರ ಆಯೋಗ ಜನಾಂದೋಲನ ಸಹಯೋಗದಲ್ಲಿ ಕರ್ನಾಟಕ-ಭಾರತ ಕಾಲ್ನಡಿಗೆ ವಿಜಯೋತ್ಸವ ಹಾಗೂ ಅಂತಾರಾಷ್ಟ್ರೀಯ ಪುರುಷರ ದಿನಾಚರಣೆ ಸಮಾರಂಭದಲ್ಲಿ ಪಾಲ್ಗೊಂಡ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

ಇತ್ತೀಚೆಗೆ ಭಾರೀ ಸುದ್ದಿ ಮಾಡಿರುವ ಮೀ ಟೂ ಅಭಿಯಾನದಲ್ಲಿ ಯಾವುದೇ ಸತ್ಯ ಹೊರಬರುತ್ತಿಲ್ಲ. ಕೇವಲ ಆರೋಪ-ಪ್ರತ್ಯಾರೋಪದಲ್ಲೇ ಮುಂದುವರಿದಿದೆ. ಇದರ ಬಗ್ಗೆ ಸುಪ್ರೀಂಕೋರ್ಟ್ ಸಹ ಸರಿಯಾಗಿ ತೀರ್ಪು ನೀಡಿಲ್ಲ. ಆದ್ದರಿಂದ ಇದಕ್ಕೆ ನನ್ನ ಬೆಂಬಲವಿಲ್ಲ ಎಂದು ಹೇಳಿದರು.
ಇತ್ತೀಚೆಗೆ ಮಹಿಳೆಯರ ಮೇಲೆ ದೌರ್ಜನ್ಯ ಎಂಬುದು ಸಹಜ ಪ್ರಕ್ರಿಯೆ. ಪುರುಷರ ಮೇಲೂ ದೌರ್ಜನ್ಯ ನಡೆಯುತ್ತಿದೆ. ಇದಕ್ಕೆ ಮಹಿಳೆಯರೂ ಕಾರಣವಾಗಿದ್ದಾರೆ ಎಂದರು.
ಕೋರ್ಟ್ ತೀರ್ಪು ನೀಡುವಾಗ ಮಹಿಳೆಯರದ್ದು ತಪ್ಪಿದೆಯಾ, ಪುರುಷರ ತಪ್ಪಿರುತ್ತದೋ ಎಂಬುದನ್ನು ತಿಳಿಯದೆ ಮಹಿಳೆಯರ ಪರವಾಗಿ ತೀರ್ಪು ನೀಡುತ್ತದೆ, ಇದು ಸರಿಯಲ್ಲ. ತೀರ್ಪಿನಿಂದ ಪುರುಷನ ಜತೆಗೆ ಅವರ ತಂದೆ-ತಾಯಿ, ಅಕ್ಕ-ತಂಗಿಯರೂ ದೌರ್ಜನ್ಯಕ್ಕೆ ಒಳಗಾಗುವಂತಾಗುತ್ತದೆ. ಇದು ಒಳ್ಳೆಯ ಬೆಳವಣಿಗೆಯಲ್ಲ ಎಂದು ಹೇಳಿದರು.
ಸ್ವಾರ್ಥಕ್ಕಾಗಿ ಪುರುಷನ ಮೇಲೆ ದೌರ್ಜನ್ಯ ಸಲ್ಲದು. ಇಬ್ಬರಲ್ಲೂ ಸಮಾನತೆ ಕಾಯ್ದುಕೊಳ್ಳುವುದು ಬಹಳ ಮುಖ್ಯ ಎಂದು ಬಿ.ಟಿ.ಲಲಿತಾನಾಯಕ್ ತಿಳಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ