ಸ್ವಾಮಿ ವಿವೇಕಾನಂದ ಉದ್ಯಾನವನ್ನು ಮೇಲ್ದರ್ಜೆಗೇರಿಸಿ ನವೀಕರಿಸಲಾಗಿದೆ

ಬೆಂಗಳೂರು,ನ.17- ಬಿಬಿಎಂಪಿ ವ್ಯಾಪ್ತಿಯ ನಾಗಪುರ ವಾರ್ಡ್‍ನಲ್ಲಿರುವ ಸ್ವಾಮಿ ವಿವೇಕಾನಂದ ಉದ್ಯಾನವನ್ನು ಮೇಲ್ದರ್ಜೆಗೇರಿಸಿ ನವೀಕರಿಸಲಾಗಿದ್ದು, ಪಾರ್ಕ್ ಹಸಿರಿನಿಂದ ಕಂಗೊಳಿಸುತ್ತಿದೆ.

ನವೀಕೃತ ಪಾರ್ಕ್‍ನ್ನು ನಾಳೆ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಉದ್ಘಾಟಿಸಲಿದ್ದಾರೆ. ಸುಮಾರು 10,865-93 ಚದರ ಅಡಿ ವಿಸ್ತೀರ್ಣ ಹೊಂದಿರುವ ಈ ಉದ್ಯಾನವನಕ್ಕೆ ಆಧುನಿಕ ಸ್ಪರ್ಶ ನೀಡಲಾಗಿದ್ದು, ಸುಸಜ್ಜಿತ ಸಲಕರಣಿಗಳನ್ನು ಅಳವಡಿಸಿ ಜನರನ್ನು ಆಕರ್ಷಿಸುವ ಕೆಲಸ ಮಾಡಲಾಗಿದೆ.

ಸುಮಾರು 2.23 ಕೋಟಿ ರೂ. ವೆಚ್ಚದಲ್ಲಿ ಪಾರ್ಕನ್ನು ಅಭಿವೃದ್ದಿಪಡಿಸಲಾಗಿದೆ. ಶಾಸಕ ಕೆ.ಗೋಪಾಲಯ್ಯ, ಪಾಲಿಕೆ ಸದಸ್ಯ ಬಿ.ಭದ್ರೇಗೌಡ ಅವರ ಪರಿಶ್ರಮದ ಫಲವಾಗಿ ಸ್ವಾಮಿ ವಿವಕಾನಂದ ಉದ್ಯಾನವನ ಅಭಿವೃದ್ದಿ ಹೊಂದಿದ್ದು ಅತ್ಯಾಧುನಿಕ ಜಿಮ್ ಸಲಕರಣೆಗಳನ್ನು ಅಳವಡಿಸಲಾಗಿದೆ.

ವಾಯುವಿಹಾರ ನಡೆಸುವಾಗ ಮೇಲುಧ್ವನಿಯಲ್ಲಿ ಸಂಗೀತದ ನಿನಾದ ಉದ್ಯಾನವನದಲ್ಲಿ ಕೇಳಿಬರುತ್ತದೆ. ಪಾರ್ಕ್‍ನ್ನು ಸದಾ ತಂಪಾಗಿರಿಸುವ ನೀರಿನ ಕಾರಂಜಿ ವ್ಯವಸ್ತೆ, ಮಳೆ ನೀರು ಭೂಮಿಗೆ ಇಂಗುವಂತೆ ಮಾಡುವ ನೀರಿಂಗಿಸುವ ವ್ಯವಸ್ಥೆ, ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ಎಲ್‍ಇಡಿ ಬಲ್ಪ್ ವ್ಯವಸ್ಥೆ, ಸುಮಾರು 25 ಕುಳಿತುಕೊಳ್ಳುವ ಬೆಂಚ್‍ಗಳನ್ನು ಅಳವಡಿಸಲಾಗಿದೆ.

ದಿನದ 24 ಗಂಟೆಯೂ ಭದ್ರತಾ ವ್ಯವಸ್ಥೆ ಹೊಂದಿರುವ ಈ ಪಾರ್ಕ್‍ನಲ್ಲಿ ಹಸರಿನ ನೆಲಹಾಸು, ಪಾರ್ಕಿನ ಸುತ್ತಲೂ ಹಸರಿನ ಸಸಿಗಳು ಗಮನ ಸೆಳೆಯುತ್ತವೆ.
ನಾಳೆ ಬೆಳಗ್ಗೆ 7.30ಕ್ಕೆ ಉದ್ಯಾನವನ ಲೋಕಾರ್ಪಣೆಗೊಳ್ಳಲಿದ್ದು, ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ, ಕೆ.ಗೋಪಾಲಯ್ಯ, ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ್, ಪಾಲಿಕೆ ಸದಸ್ಯ ಬಿ.ಭದ್ರೇಗೌಡ, ಲತಾ ಹಂಸಲೇಖ ಮತ್ತಿತರರು ಪಾಲ್ಗೊಳ್ಳಲಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ