ಬೆಂಗಳೂರು, ನ.17- ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಇದೇ 30ರಂದು ರಾಜ್ಯದ ಎಲ್ಲಾ ಜಿಲ್ಲಾ ಕಚೇರಿಗಳು ಹಾಗೂ ಬೆಂಗಳೂರಿನ ಟೌನ್ಹಾಲ್ ಮುಂದೆ ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಮಹಾಮಂಡಳಿ ಪ್ರತಿಭಟನೆ ಹಮ್ಮಿಕೊಂಡಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಂಡಳಿಯ ಅಧ್ಯಕ್ಷ ಶಿವಶಂಕರ್, ಆರು ತಿಂಗಳಿನಿಂದ ಅಂಗನವಾಡಿ ಕಾರ್ಯಕರ್ತೆಯರಿಗೆ ಮತ್ತು ಸಹಾಯಕಿಯರಿಗೆ ವೇತನ ನೀಡದ ಕಾರಣ ನಾವು ಈ ಪ್ರತಿಭಟನೆ ಮಾಡಲು ನಿರ್ಧರಿಸಿದ್ದೇವೆ ಎಂದರು.
ಪ್ರತಿಭಟನೆಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು, ನಿವೃತ್ತ ಮಹಿಳೆಯರ ಪಿಂಚಣಿ ಮತ್ತು ವೈದ್ಯಕೀಯ ಸವಲತ್ತು ಜಾರಿಗೆ ತರಬೇಕು, ಬಾಲ ವಿಕಾಸ ಸಮಿತಿ ಪುನರಚಿಸುವಲ್ಲಿ ಗ್ರಾಮ, ನಗರ, ಪಟ್ಟಣ ಪಂಚಾಯ್ತಿ ಸದಸ್ಯರಿಗೆ ಬ್ಯಾಂಕ್ ಖಾತೆ ತೆರೆಯಲು ಕಡ್ಡಾಯ ಮಾಡಿರುವುದನ್ನು ಕೂಡಲೇ ವಾಪಸ್ ಪಡೆಯಬೇಕು, ಅಂಗನವಾಡಿ ಕೇಂದ್ರಗಳ ಕೆಲಸದ ವೇಳೆಯನ್ನು ಹಿಂದಿನಂತೆ ಜಾರಿಗೆ ತರಬೇಕು ಎಂಬುದೂ ಸೇರಿದಂತೆ ಆರು ಬೇಡಿಕೆಗಳನ್ನು ಮುಂದಿಟ್ಟುಕೊಂಡು ಪ್ರತಿಭಟನೆ ನಡೆಸಲಾಗುತ್ತಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಮಂಡಳಿಯ ಕಾರ್ಯಾಧ್ಯಕ್ಷೆ ನಾಗರತ್ನಮ್ಮ, ಕೋಲಾರ ಜಿಲ್ಲಾ ಕಾರ್ಯದರ್ಶಿ ಚಿನ್ನಮ್ಮ, ಪದಾಧಿಕಾರಿಗಳಾದ ಗೀತಾ, ಸರಸ್ವತಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.