ಬೆಂಗಳೂರು, ನ.16-ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಜನಸಂಪರ್ಕ ಕಾರ್ಯಕ್ರಮಗಳನ್ನು ಚುರುಕುಗೊಳಿಸಲು ಮುಂದಾಗಿರುವ ಕೆಪಿಸಿಸಿ ಅಧ್ಯಕ್ಷ ದಿನೇಶ್‍ಗುಂಡೂರಾವ್ ಅವರು ಜಿಲ್ಲಾಧ್ಯಕ್ಷರೊಂದಿಗೆ ಸರಣಿ ಸಭೆಗಳನ್ನು ಆರಂಭಿಸಿದ್ದಾರೆ.
ಮೊದಲ ದಿನವಾದ ಇಂದು ಮೈಸೂರು ಕಂದಾಯ ವಿಭಾಗದ ಹಾಸನ, ಮಂಡ್ಯ, ಚಿಕ್ಕಮಗಳೂರು, ಚಾಮರಾಜನಗರ ಸೇರಿದಂತೆ ಆಯಾ ಜಿಲ್ಲಾ ವ್ಯಾಪ್ತಿಯ ಕಾಂಗ್ರೆಸ್ ಜಿಲ್ಲಾಧ್ಯಕ್ಷರು, ಕೆಪಿಸಿಸಿ ಪದಾಧಿಕಾರಿಗಳ ಜೊತೆ ಸಮಾಲೋಚನೆ ನಡೆಸಿದರು.
ಹಾಸನ ಜಿಲ್ಲಾ ಕಾಂಗ್ರೆಸ್‍ನಲ್ಲಿ ಅಸಮಾಧಾನ ಹೆಚ್ಚಾಗಿ ಕಂಡುಬಂದಿದ್ದು, ಲೋಕಸಭೆ ಚುನಾವಣೆಯಲ್ಲಿ ಈ ಕ್ಷೇತ್ರವನ್ನು ಜೆಡಿಎಸ್‍ಗೆ ಬಿಟ್ಟುಕೊಟ್ಟರೆ ಕಾಂಗ್ರೆಸ್‍ಗೆ ಹಿನ್ನಡೆಯಾಗಲಿದೆ. ನಾವು ಸ್ಪರ್ಧೆ ಮಾಡಲೇಬೇಕೆಂಬ ಅಭಿಪ್ರಾಯ ವ್ಯಕ್ತವಾಗಿದೆ.
ಮಂಡ್ಯ ಜಿಲ್ಲೆಯ ಕಾಂಗ್ರೆಸ್ ಮುಖಂಡರು ಕೂಡ ಜೆಡಿಎಸ್ ಜೊತೆಗಿನ ಮೈತ್ರಿಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ವೋಟರ್ ಐಡಿಯನ್ನು ಶಕ್ತಿ ಅಭಿಯಾನದ ಟೋಲ್‍ಫ್ರೀ ನಂಬರ್‍ಗೆ ಮೆಸೇಜ್ ಮಾಡಿ ನೋಂದಣಿ ಮಾಡಿಕೊಳ್ಳುವ ಅಭಿಯಾನಕ್ಕೆ ರಾಜ್ಯ ಕಾಂಗ್ರೆಸ್‍ನಲ್ಲಿ ನಿರೀಕ್ಷಿತ ಯಶಸ್ಸು ಸಿಕ್ಕಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್‍ಗುಂಡೂರಾವ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ರಾಜ್ಯಾದ್ಯಂತ ಕೇವಲ 2 ಲಕ್ಷ ಮಾತ್ರ ನೋಂದಣಿಯಾಗಿದೆ. ಅದು ಅತ್ಯಂತ ಕನಿಷ್ಠವಾದ ಪ್ರಗತಿ. ಇದನ್ನು ಚುರುಕುಗೊಳಿಸಬೇಕು. ಕಾಂಗ್ರೆಸ್ ಪಕ್ಷ ಮೈತ್ರಿ ಹೊರತಾಗಿಯೂ ಸಂಘಟನೆಯಲ್ಲಿ ಬಲಪಡಿಸಿಕೊಳ್ಳಬೇಕಿದೆ. ಜನಸಂಪರ್ಕ ಅಭಿಯಾನ ಕಾರ್ಯಕ್ರಮಗಳಿಗೆ ಒತ್ತು ಕೊಡಬೇಕು ಎಂದು ಅವರು ತಿಳಿಸಿದ್ದಾರೆ.
ತಮ್ಮ ಏಕೈಕ ಗುರಿ ಕೇಂದ್ರದಲ್ಲಿ ಕಾಂಗ್ರೆಸ್ ಮರುಸ್ಥಾಪಿಸಿ ರಾಹುಲ್‍ಗಾಂಧಿಯವರನ್ನು ಪ್ರಧಾನಿ ಮಾಡುವುದೇ ಆಗಿದೆ. ಈ ನಿಟ್ಟಿನಲ್ಲಿ ತಮ್ಮೆಲ್ಲ ಮನಸ್ತಾಪಗಳನ್ನು ಮರೆತು ಒಟ್ಟಾಗಿ ಕೆಲಸ ಮಾಡಬೇಕು ಎಂದು ಕಿವಿಮಾತು ಹೇಳಿದರು.
ಪಕ್ಷ ಸಂಘಟನೆಗಳಲ್ಲಿ ತೊಡಗಿಸಿಕೊಂಡು ಕೆಲಸ ಮಾಡದಿರುವ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರನ್ನು ಮುಲಾಜಿಲ್ಲದೆ ಬದಲಾವಣೆ ಮಾಡಲಾಗುವುದು. ಅದಕ್ಕೆ ಅವಕಾಶ ಕೊಡದಂತೆ ಪ್ರತಿಯೊಂದು ಜಿಲ್ಲಾ ಘಟಕಗಳ ಅಧ್ಯಕ್ಷರು ಮುನ್ನೆಚ್ಚರಿಕೆಯಿಂದ ಕೆಲಸ ಮಾಡಬೇಕೆಂದು ದಿನೇಶ್ ಗುಂಡೂರಾವ್ ಎಚ್ಚರಿಕೆ ನೀಡಿದರು.
ರಾಜ್ಯ ಸರ್ಕಾರದ ಸಾಧನೆಗಳು ಹಾಗೂ ಸಿದ್ದರಾಮಯ್ಯ ಅವರ ಜನಪರ ಯೋಜನೆಗಳನ್ನು ರಾಜ್ಯದ ಪ್ರತಿಯೊಂದು ಮನೆಗೂ ತಲುಪಿಸಬೇಕು. ಕೇಂದ್ರ ಸರ್ಕಾರದ ವೈಫಲ್ಯಗಳನ್ನು ಜನರಿಗೆ ಮನವರಿಕೆ ಮಾಡಿಕೊಡಬೇಕು ಎಂದು ದಿನೇಶ್ ಗುಂಡೂರಾವ್ ಕರೆ ನೀಡಿದರು.
ಇಂದಿನ ಕಾಲದಲ್ಲಿ ಎಲ್ಲರ ಕೈಯಲ್ಲೂ ಮೊಬೈಲ್ ಇದೆ. ಈ ತಂತ್ರಜ್ಞಾನ ಬಳಸಿಕೊಂಡು ಶಕ್ತಿ ಅಭಿಯಾನಕ್ಕೆ ಪ್ರತಿಯೊಬ್ಬರ ಜೊತೆ ಸಂಪರ್ಕದಲ್ಲಿರಬೇಕು. ಈ ಅಭಿಯಾನಕ್ಕೆ ಹೆಚ್ಚಿನ ಬೆಂಬಲ ದೊರೆಯಬೇಕು. ಕನಿಷ್ಠ 2 ಕೋಟಿ ಸದಸ್ಯರನ್ನು ನೋಂದಾಯಿಸಬೇಕು. ಈ ನಿಟ್ಟಿನಲ್ಲಿ ಈಗಿನಿಂದಲೇ ಪಕ್ಷದ ಮುಖಂಡರು ಹೆಚ್ಚಾಗಿ ಅಭಿಯಾನದಲ್ಲಿ ತೊಡಗಿಸಿಕೊಳ್ಳಬೇಕೆಂದು ದಿನೇಶ್ ಗುಂಡೂರಾವ್ ಸಲಹೆ ಮಾಡಿದರು.