ಬೆಂಗಳೂರು,ನ.16- ಸರ್ಕಾರದ ಯಾವುದೇ ಇಲಾಖೆಗಳು ಬಾಡಿಗೆ ಅಥವಾ ಸ್ವಂತಕ್ಕೆ ಪಡೆಯುವ ವಾಹನಗಳಲ್ಲಿ ಶೇ.50ರಷ್ಟು ಬ್ಯಾಟರಿ ಚಾಲಿತ ವಿದ್ಯುತ್ ವಾಹನಗಳ ಬಳಕೆಗೆ ಆದ್ಯತೆ ಕೊಡುವಂತೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕರೆ ನೀಡಿದರು.
ವಿಧಾನಸೌಧದ ಆವರಣದಲ್ಲಿ ನೂತನವಾಗಿ ಆರಂಭಿಸಿರುವ ವಿದ್ಯುತ್ ಚಾಲಿತ ವಾಹನಗಳ ಚಾರ್ಜಿಂಗ್ ಕೇಂದ್ರಕ್ಕೆ ಚಾಲನೆ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪರಿಸರಕ್ಕೆ ಪೂರಕವಾದ ವಿದ್ಯುತ್ ಚಾಲಿತ ವಾಹನಗಳಿಗೆ ಅನುಕೂಲವಾಗುವಂತೆ ವಿಧಾನಸೌಧದ ಆವರಣದಲ್ಲಿ ವಿದ್ಯುತ್ ಚಾರ್ಜಿಂಗ್ ಕೇಂದ್ರವನ್ನು ಬೆಸ್ಕಾಂ ಸಹಯೋಗದೊಂದಿಗೆ ಈ ಕೇಂದ್ರವನ್ನು ತೆರೆಯಲಾಗಿದೆ ಎಂದರು.
ನಗರದಲ್ಲಿನ ವಾಯುಮಾಲಿನ್ಯ ತಗ್ಗಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಬೆಸ್ಕಾಂ ಸಹಯೋಗದಲ್ಲಿ ಪ್ರಾಯೋಗಿಕವಾಗಿ ಬ್ಯಾಟರಿ ಚಾಲಿತ ವಿದ್ಯುತ್ ವಾಹನಗಳಿಗೆ ಉತ್ತೇಜನ ನೀಡಲಾಗುತ್ತಿದ್ದು, ಇನ್ನು ಮುಂದೆ ಇಂತಹ ವಾಹನಗಳನ್ನು ಹೆಚ್ಚಾಗಿ ಬಳಸಬೇಕಿದೆ ಎಂದು ಹೇಳಿದರು.
ಬ್ಯಾಟರಿ ಚಾಲಿತ ಕಾರನ್ನು ಚಾರ್ಜ್ ಮಾಡಿದ ನಂತರ 100ರಿಂದ 120 ಕಿ.ಮೀ ಕ್ರಮಿಸಬಹುದಾಗಿದ್ದು, ಇದರಿಂದ ಪೆಟ್ರೋಲ್,ಡೀಸೆಲ್ ಬೆಲೆ ಏರಿಕೆಯಿಂದ ಆಗುವ ಅನಾನುಕೂಲವನ್ನು ತಪ್ಪಿಸಬಹುದಾಗಿದೆ. ವಿದ್ಯುತ್ ಚಾಲಿತ ವಾಹನಗಳ ನಿರ್ವಹಣಾ ವೆಚ್ಚವೂ ಶೇ.15ರಿಂದ 20ರಷ್ಟು ಮಾತ್ರ ಇದ್ದು, ಪರಿಸರಕ್ಕೆ ಉಪಯುಕ್ತವಾಗಿದೆ ಎಂದು ಮಾಹಿತಿ ನೀಡಿದರು.
ಸದ್ಯಕ್ಕೆ ಚಾರ್ಜಿಂಗ್ ಕೇಂದ್ರದಲ್ಲಿ ಉಚಿತವಾಗಿ ಚಾರ್ಜಿಂಗ್ ಸೌಲಭ್ಯ ಕಲ್ಪಿಸಲಾಗಿದೆ. ಚಾರ್ಜಿಂಗ್ ವಾಹನಗಳನ್ನು ಬಳಸುವವರಿಗೆ ಸಹಾಯಧನದ ನೆರವು ನೀಡಲು ಸರ್ಕಾರ ಚಿಂತನೆ ನಡೆಸಿದೆ. ಇಂತಹ ವಾಹನಗಳ ಖರೀದಿಗೆ ಪೆÇ್ರೀ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದರು.