ಬೆಂಗಳೂರು, ನ.15-ವಿಶ್ವವಿದ್ಯಾಲಯಗಳ ಸಂಶೋಧಕರು ಗ್ರಾಮೀಣ ಭಾಗದ ಕೃಷಿಕರ ನಡುವೆ ಹೋಗಿ ತಮ್ಮ ಅವಿಷ್ಕಾರಗಳ ಬಗ್ಗೆ ತಿಳುವಳಿಕೆ ನೀಡಿ ಅದನ್ನು ಅಳವಡಿಸಿಕೊಳ್ಳಲು ಪ್ರೇರೇಪಿಸಬೇಕು ಎಂದು ರಾಜ್ಯಪಾಲ ವಿ.ಆರ್.ವಾಲಾ ಕರೆ ನೀಡಿದರು.
ನಗರದ ಕೃಷಿ ವಿಶ್ವವಿದ್ಯಾನಿಲಯದಲ್ಲಿ ನಡೆದ ಕೃಷಿ ಮೇಳ ಉದ್ಘಾಟಿಸಿ ಮಾತನಾಡಿದ ಅವರು, ಬೆಂಗಳೂರು ಕೃಷಿ ವಿವಿಗೆ ದೇಶದಲ್ಲೇ ಉತ್ತಮ ಹೆಸರಿದೆ. ಇಲ್ಲಿನ ಸಂಶೋಧನೆಗಳು ಕೂಡ ಅತ್ಯಂತ ಪರಿಣಾಮಕಾರಿಯಾಗಿ ಹೆಸರು ಮಾಡಿವೆ. ಇದರ ನಡುವೆ ಕಾಲಕಾಲಕ್ಕೆ ಈ ರೀತಿಯ ಕೃಷಿ ಮೇಳಗಳನ್ನು ಏರ್ಪಡಿಸುತ್ತಿರುವುದರಿಂದ ಮತ್ತಷ್ಟು ಅನುಕೂಲಗಳಾಗುತ್ತವೆ ಎಂದು ಅವರು ಅಭಿಪ್ರಾಯಪಟ್ಟರು.
ಭಾರತ ಕೃಷಿ ಪ್ರಧಾನ ರಾಷ್ಟ್ರ. ಇಲ್ಲಿ ರೈತರು ಆರ್ಥಿಕವಾಗಿ ಸದೃಢರಾದಾಗ ಮಾತ್ರ ದೇಶದ ಅಭಿವೃದ್ಧಿಯಾಗುತ್ತದೆ. ಕೃಷಿ ವಿವಿಗಳ ಪ್ರಾಧ್ಯಾಪಕರು, ಸಂಶೋಧಕರು, ವಿಜ್ಞಾನಿಗಳು ಕೇವಲ ವಿದ್ಯಾರ್ಥಿಗಳಿಗಷ್ಟೇ ಪಾಠ ಹೇಳಿಕೊಡುವುದಲ್ಲ, ಗ್ರಾಮೀಣ ಭಾಗಕ್ಕೆ ಹೋಗಬೇಕು, ರೈತರನ್ನು ಭೇಟಿ ಮಾಡಬೇಕು, ಹೊಸ ತಂತ್ರಜ್ಞಾನ,ತಳಿಗಳ ಬಗ್ಗೆ ಮಾಹಿತಿ ನೀಡಬೇಕು. ಅದನ್ನು ಅಳವಡಿಸಿಕೊಳ್ಳಲು ಉತ್ತೇಜಿಸಬೇಕು. ಹೊಸ ಮಾದರಿಯನ್ನು ಅಳವಡಿಸಿಕೊಂಡು ಕೃಷಿ ಮಾಡಿದಾಗ ರೈತರು ಕೂಡ ಹೆಚ್ಚಿನ ಲಾಭ ಪಡೆಯಲು ಸಾಧ್ಯ ಎಂದು ಹೇಳಿದರು.
ಇಸ್ರೇಲ್ ಹಾಗೂ ಇತರ ರಾಷ್ಟ್ರಗಳಿಗೆ ಹೋಲಿಸಿಕೊಂಡರೆ ಭಾರತ ಕೃಷಿ ಸಂಶೋಧನೆಗಳಲ್ಲಿ ಸಾಕಷ್ಟು ಹಿಂದೆ ಉಳಿದಿದೆ. ಸಂಶೋಧನೆಗಳು ವಿಶ್ವವಿದ್ಯಾನಿಲಯಗಳ ಮಟ್ಟಕ್ಕಷ್ಟೇ ಸೀಮಿತಗೊಂಡಿವೆ. ರೈತರ ಕೃಷಿ ಕ್ಷೇತ್ರಗಳನ್ನು ತಲುಪುತ್ತಿಲ್ಲ ಎಂದು ವಿಷಾದಿಸಿದರು.
ನೀರಿನ ಮಿತವ್ಯಯದಂತಹ ಹಲವಾರು ವಿಷಯಗಳ ಬಗ್ಗೆ ರೈತರಲ್ಲಿ ಜಾಗೃತಿ ಮೂಡಿಸಬೇಕು
ಕೃಷಿ ಸಚಿವ ಎನ್.ಎಚ್.ಶಿವಶಂಕರ್ರೆಡ್ಡಿ ಮಾತನಾಡಿ, ರಾಜ್ಯ ಸರ್ಕಾರ ಕೃಷಿಗೆ ಸಾಕಷ್ಟು ಯೋಜನೆಗಳನ್ನು ಹಮ್ಮಿಕೊಂಡಿದೆ. ಹೊಸದಾಗಿ ಸಂಪುಟದಲ್ಲಿ ಕೃಷಿ ಕ್ಯಾಬಿನೆಟ್ ನಡೆಸಲು ನಿರ್ಧರಿಸಲಾಗಿದೆ. ಅಂದು ಕೃಷಿ ಪದ್ಧತಿ ಸುಧಾರಣೆ ಮತ್ತು ಕೃಷಿ ಕ್ಷೇತ್ರದ ಸಮಸ್ಯೆಗಳ ಬಗ್ಗೆ ಅಷ್ಟೇ ಚರ್ಚೆ ನಡೆಯಲಿದೆ ಎಂದು ಹೇಳಿದರು.
ರಾಜ್ಯದಲ್ಲಿ ಖಾಸಗಿ ವಿವಿಗಳು ಕೃಷಿ ಬೋಧನೆಗೆ ಅವಕಾಶ ನೀಡುವುದಿಲ್ಲ. ರೈತರ ಪರವಾಗಿ ಸರ್ಕಾರ ಸದಾ ಕೆಲಸ ಮಾಡುತ್ತದೆ ಎಂದು ಹೇಳಿದರು.
ಕೃಷಿ ಮೇಳದಲ್ಲಿ 600 ಮಳಿಗೆಗಳನ್ನು ಸ್ಥಾಪಿಸಲಾಗಿದೆ. ಹೊಸ ತಳಿಗಳು, ತಂತ್ರಜ್ಞಾನ, ವಿವಿಧ ಅವಿಷ್ಕಾರಗಳನ್ನು ಪರಿಚಯಿಸಲಾಗಿದೆ ಎಂದರು.
ಇದೇ ವೇಳೆ ಪ್ರಗತಿಪರ ರೈತರನ್ನು ಸನ್ಮಾನಿಸಲಾಯಿತು. ಕೃಷಿ ಕ್ಯಾಲೆಂಡರ್ಗಳನ್ನು ಬಿಡುಗಡೆ ಮಾಡಲಾಯಿತು.
ನಾಲ್ಕು ಹೊಸ ತಳಿಗಳನ್ನು ಇದೇ ಸಂದರ್ಭದಲ್ಲಿ ಲೋಕಾರ್ಪಣೆ ಮಾಡಲಾಯಿತು.