ಮೂರ್ನಾಲ್ಕು ಪ್ರಮುಖ ವೃತ್ತಗಳಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ಮೇಲ್ಸೇತುವೆ ನಿರ್ಮಾಣ

ಬೆಂಗಳೂರು, ನ.15- ವಾಹನ ಮತ್ತು ಜನಸಂದಣಿ ಹೆಚ್ಚಿರುವ ನಗರದ ಮೂರ್ನಾಲ್ಕು ಪ್ರಮುಖ ವೃತ್ತಗಳಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ಮೇಲ್ಸೇತುವೆ ನಿರ್ಮಾಣ ಮಾಡಲು ಬಿಬಿಎಂಪಿ ತೀರ್ಮಾನಿಸಿದೆ ಎಂದು ಮೇಯರ್ ಗಂಗಾಂಬಿಕೆ ತಿಳಿಸಿದರು.
ಕೋರಮಂಗಲ, ಮಡಿವಾಳ ಜಂಕ್ಷನ್ ಸಮೀಪ ಖಾಸಗಿ ಸಹಭಾಗಿತ್ವದಲ್ಲಿ ನಿರ್ಮಿಸಲಾಗಿರುವ ಮೇಲ್ಸೇತುವೆ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡುತ್ತಿದ್ದರು.

ಹೊಸೂರು ರಸ್ತೆಯಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ನಿರ್ಮಿಸಿರುವ ಈ ಸೇತುವೆಯಿಂದ ಸಾಕಷ್ಟು ದಟ್ಟಣೆ ಕಡಿಮೆಯಾಗಲಿದೆ. ಈ ಮೇಲ್ಸೇತುವೆಯಲ್ಲಿ ಸಂಚರಿಸಿದರೆ ಏಳು ದಿಕ್ಕಿಗೆ ಸಂಪರ್ಕಿಸಬಹುದು. ಹಾಗಾಗಿ ಜನರಿಗೆ ಸಾಕಷ್ಟು ಅನುಕೂಲವಾಗಲಿದೆ. ಜನದಟ್ಟಣೆ , ವಾಹನ ದಟ್ಟಣೆ ತಪ್ಪಲಿದೆ ಎಂದು ತಿಳಿಸಿದರು.

ಇಲ್ಲಿನ ಮೇಲ್ಸೇತುವೆ ನಿರ್ಮಾಣಕ್ಕೆ ಪಾಲಿಕೆಯಿಂದ ಒಂದು ಪೈಸೆ ವೆಚ್ಚವಾಗಿಲ್ಲ. ಎಲ್ಲವನ್ನು ಖಾಸಗಿಯವರೇ ನಿರ್ವಹಿಸಿದ್ದಾರೆ. ವಾಹನ ದಟ್ಟಣೆ ಹೆಚ್ಚಾಗಿರುವ ನಗರದ ಪ್ರಮುಖ ಪ್ರದೇಶಗಳಲ್ಲಿ ಈ ರೀತಿಯ ಮೇಲ್ಸೇತುವೆ ನಿರ್ಮಾಣ ಕೈಗೆತ್ತಿಕೊಳ್ಳಲು ನಿರ್ಧರಿಸಲಾಗಿದೆ.
2019ರ ಜನವರಿ ತಿಂಗಳಲ್ಲಿ ಇಂತಹ ಸೇತುವೆ ನಿರ್ಮಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಮಾಜಿ ಸಚಿವ ಹಾಗೂ ಶಾಸಕ ರಾಮಲಿಂಗಾರೆಡ್ಡಿ ಅವರು ಸೇತುವೆ ಲೋಕಾರ್ಪಣೆ ಮಾಡಿದರು. ಮಾಜಿ ಮೇಯರ್ ಮಂಜುನಾಥ ರೆಡ್ಡಿ ಹಾಗೂ ಸ್ಥಳೀಯ ಬಿಬಿಎಂಪಿ ಸದಸ್ಯರು ಪಾಲ್ಗೊಂಡಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ