ಸಂಪುಟ ವಿಸ್ತರಣೆಗೆ ಕಾಂಗ್ರೆಸ್ ಹೈಕಮಾಂಡ್‍ಮೀನಾಮೇಷ

ಬೆಂಗಳೂರು, ನ.15-ಸಚಿವ ಸಂಪುಟ ವಿಸ್ತರಣೆ ಕಾಂಗ್ರೆಸ್‍ಗೆ ಅತ್ತ ಧರಿ, ಇತ್ತ ಪುಲಿ ಎನ್ನುವಂತಾಗಿದೆ. ಸಂಪುಟ ವಿಸ್ತರಣೆ ಮಾಡಿದರೂ ಕಷ್ಟ, ಮಾಡದಿದ್ದರೂ ಕಷ್ಟ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ.

ಸಚಿವಾಕಾಂಕ್ಷಿಗಳು ಸಂಪುಟ ಸೇರಲು ತೀವ್ರ ಕಾತುರರಾಗಿದ್ದು, ಪ್ರತ್ಯೇಕ ಸಭೆ ನಡೆಸಿ ಹೈಕಮಾಂಡ್ ಮೊರೆ ಹೋಗಲು ನಿರ್ಧರಿಸಿದ್ದಾರೆ. ಉಪ ಚುನಾವಣೆ ನಂತರ ಸಂಪುಟ ವಿಸ್ತರಣೆ ಮಾಡುವುದಾಗಿ ಹೇಳಿದ್ದ ಕಾಂಗ್ರೆಸ್ ಹೈಕಮಾಂಡ್ ಈಗ ಮೀನಾಮೇಷ ಎಣಿಸುತ್ತಿರುವುದು ಆಕಾಂಕ್ಷಿಗಳಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ.

ಸದ್ಯ ಪಂಚರಾಜ್ಯಗಳ ಚುನಾವಣೆ ಘೋಷಣೆಯಾಗಿದ್ದು, ಚುನಾವಣೆ ನಂತರ ಸಚಿವ ಸಂಪುಟ ವಿಸ್ತರಣೆ ಪ್ರಕ್ರಿಯೆ ಕೈಗೊಳ್ಳುವುದಾಗಿ ಕಾಂಗ್ರೆಸ್ ವರಿಷ್ಠರು ಸೂಚನೆ ನೀಡಿರುವುದು ಆಕಾಂಕ್ಷಿಗಳಲ್ಲಿ ನಿರಾಶೆ ಮೂಡಿಸಿದೆ.

ಲೋಕಸಭೆ ಚುನಾವಣೆ ಎದುರಾಗುತ್ತಿರುವ ಹಿನ್ನೆಲೆಯಲ್ಲಿ ಸಂಪುಟದಲ್ಲಿ ಖಾಲಿ ಇರುವ ಆರು ಸ್ಥಾನಗಳನ್ನು ಭರ್ತಿ ಮಾಡಬೇಕೆಂದು ಎಐಸಿಸಿ ಪ್ರಧಾನಕಾರ್ಯದರ್ಶಿ ಹಾಗೂ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಅವರು ಹೈಕಮಾಂಡ್ ಮೇಲೆ ಒತ್ತಡ ತಂದಿದ್ದಾರೆ.
ಸಚಿವಾಕಾಂಕ್ಷಿಗಳಾದ ಬಿ.ಸಿ.ಪಾಟೀಲ್, ಎಂ.ಬಿ.ಪಾಟೀಲ್, ಎಂ.ಟಿ.ಬಿ.ನಾಗರಾಜ್, ಸುಧಾಕರ್, ಸಿ.ಎಸ್.ಶಿವಳ್ಳಿ, ತುಕಾರಾಮ್, ಸಂಗಮೇಶ್, ರಾಮಲಿಂಗಾರೆಡ್ಡಿ, ಎಚ್.ಕೆ.ಪಾಟೀಲ್ ಸೇರಿದಂತೆ 30ಕ್ಕೂ ಹೆಚ್ಚು ಆಕಾಂಕ್ಷಿಗಳಿದ್ದಾರೆ.
ಖಾಲಿ ಇರುವ ಆರು ಸ್ಥಾನಗಳಲ್ಲಿ ನಾಲ್ಕು ಸ್ಥಾನಗಳನ್ನು ಭರ್ತಿ ಮಾಡುವ ಸಾಧ್ಯತೆ ಇದೆ. 30ರಲ್ಲಿ 4 ಸ್ಥಾನವನ್ನು ಯಾರಿಗೆ ನೀಡಬೇಕೆಂಬ ಜಿಜ್ಞಾಸೆ ಹೈಕಮಾಂಡ್‍ಗೆ ಎದುರಾಗಿದೆ.

ಈ ಬಾರಿ ಸಂಪುಟ ವಿಸ್ತರಣೆ ಮಾಡದಿದ್ದಾರೆ ಪಕ್ಷದಲ್ಲಿ ಅಸಮಾಧಾನ ಭುಗಿಲೇಳುವ ಸಾಧ್ಯತೆ ಹೆಚ್ಚಾಗಿದೆ. ಈವರೆಗೂ ಸಂಪುಟ ವಿಸ್ತರಣೆ ಮಾಡುತ್ತೇವೆ ಎಂದು ವರಿಷ್ಠರು ಮೂಗಿಗೆ ತುಪ್ಪ ಸವರಿಕೊಂಡು ಬಂದಿದ್ದರು. ಈಗಾಗಲೇ ಸಚಿವಾಕಾಂಕ್ಷಿಗಳು ಹಲವಾರು ಬಾರಿ ಪಕ್ಷದ ವಿರುದ್ಧ ಬಹಿರಂಗವಾಗಿಯೇ ಸಿಡಿದೆದಿದ್ದರು. ಅವಕಾಶ ಸಿಗದಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದರು.

ಈಗ ಸಂಪುಟ ವಿಸ್ತರಣೆಗೆ ನೆಪಗಳನ್ನು ಕೇಳಲು ತಯಾರಿಲ್ಲ. ನಮಗೆ ಅವಕಾಶ ನೀಡಬೇಕೆಂದು ಹಲವರು ಪ್ರತ್ಯೇಕ ಸಭೆ ನಡೆಸಿ ದೆಹಲಿಗೆ ತೆರಳಲು ಮುಂದಾಗಿದ್ದಾರೆ. ಆದರೆ, ದೆಹಲಿ ನಾಯಕರು ಚುನಾವಣೆಯಲ್ಲಿ ಬ್ಯುಸಿಯಾಗಿದ್ದಾರೆ.

ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರು ಈಗಾಗಲೇ ದೆಹಲಿಯಲ್ಲಿದ್ದು, ಸಂಪುಟ ವಿಸ್ತರಣೆ ಕುರಿತು ವರಿಷ್ಠರೊಂದಿಗೆ ಚರ್ಚಿಸುವುದಾಗಿ ಹೇಳಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ದಿನೇಶ್‍ಗುಂಡೂರಾವ್ ಅವರು ತಿಂಗಳಾಂತ್ಯದಲ್ಲಿ ಸಚಿವ ಸಂಪುಟ ವಿಸ್ತರಣೆ ಮಾಡುವುದಾಗಿ ತಿಳಿಸಿದ್ದಾರೆ. ಈಗ ಐದು ರಾಜ್ಯಗಳಲ್ಲಿ ಚುನಾವಣೆ ನಡೆಯಲಿದ್ದು, ಡಿಸೆಂಬರ್‍ನಲ್ಲಿ ಚಳಿಗಾಲದ ಅಧಿವೇಶನ ನಡೆಯಲಿದೆ. ಫೆಬ್ರವರಿಯಲ್ಲಿ ಲೋಕಸಭೆ ಚುನಾವಣೆಗೆ ಅಧಿಸೂಚನೆ ಪ್ರಕಟಿಸುವ ಸಾಧ್ಯತೆ ಇದೆ. ಹೀಗಾಗಿ ಸಂಪುಟ ವಿಸ್ತರಣೆ ಸದ್ಯಕ್ಕೆ ಆಗುವುದೋ ಇಲ್ಲವೋ ಎಂಬ ಅನುಮಾನ ಕಾಡತೊಡಗಿದೆ. ಹಾಗಾಗಿ ಸಚಿವಾಕಾಂಕ್ಷಿಗಳು ಹೈಕಮಾಂಡ್ ಮೇಲೆ ಒತ್ತಡ ತರಲು ನಿರ್ಧರಿಸಿದ್ದಾರೆ.

ಈ ಸಂದರ್ಭ ಹೊರತುಪಡಿಸಿದರೆ ಮತ್ತೆ ನಾವು ಸಂಪುಟಕ್ಕೆ ಸೇರಲು ಸಾಧ್ಯವಿಲ್ಲ ಎಂಬ ತೀರ್ಮಾನಕ್ಕೆ ಬಂದಿರುವ ಆಕಾಂಕ್ಷಿಗಳು ಪ್ರತ್ಯೇಕ ಸಭೆ ನಡೆಸಲು ಮುಂದಾಗಿದ್ದಾರೆ. ಲೋಕಸಭೆ ಚುನಾವಣೆ ಎದುರಾಗಿರುವುದರಿಂದ ಹಿರಿಯ ನಾಯಕರಿಗೂ ಸಂಪುಟದಲ್ಲಿ ಅವಕಾಶ ನೀಡಬೇಕು. ಕೆಲವು ಸಚಿವರು ಕಾರ್ಯ ನಿರ್ವಹಿಸುತ್ತಿಲ್ಲ. ಅಂತಹವರನ್ನು ಬದಲಾವಣೆ ಮಾಡಬೇಕು ಎಂಬ ಮಾತು ಕೇಳಿ ಬಂದಿದೆ. ಇಂತಹ ಸಾಹಸಕ್ಕೆ ಸರ್ಕಾರ ಕೈ ಹಾಕಲಿದೆಯೇ ಎಂಬ ಅನುಮಾನ ಕಾಡತೊಡಗಿದೆ.

ಒಟ್ಟಾರೆ ಸಚಿವ ಸಂಪುಟ ವಿಸ್ತರಣೆ ಮಾಡಿದರೂ ಕಷ್ಟ, ಮಾಡದಿದ್ದರೂ ಕಷ್ಟ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ. ಸಂದಿಗ್ಧ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ಯಾವ ನಿರ್ಧಾರ ಕೈಗೊಳ್ಳುತ್ತದೆ, ಸಂಪುಟ ವಿಸ್ತರಣೆ ಮಾಡುತ್ತದೆಯೇ ಇಲ್ಲವೆ ಆಕಾಂಕ್ಷಿಗಳ ಮನವೊಲಿಸಲಿದೆಯೇ ಎಂಬುದನ್ನು ಕಾದು ನೋಡಬೇಕು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ