ಬೆಂಗಳೂರು, ನ.14- ಹಾಲು ಕರೆಯುವ ಎಲ್ಲಾ ಹಸುಗಳಿಗೆ ಚಿಪ್ ಅಳವಡಿಕೆ.ಜತೆಗೆ ನಮ್ಮ ಇಲಾಖೆಯಿಂದ ಡಿಜಿಟಲೀಕರಣ ಗೊಳಿಸಲಾಗುತ್ತಿದೆ ಎಂದು ಪಶುಸಂಗೋಪನ ಸಚಿವ ವೆಂಕಟರಾವ್ ನಾಡಗೌಡ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೇರ ಸಂಪರ್ಕಕ್ಕೆ ಅನುಕೂಲವಾಗುವಂತೆ ಪಶುಸಂಗೀಪನಾ ಇಲಾಖೆ ಕಚೆರಿ ಮತ್ತು ಪಶು ಆಸ್ಪತ್ರೆಗಳನ್ನು ಡಿಜಟಲೀಕರಣಗೊಳಿಸಿ ನೇರ ಸಂಪರ್ಕಕ್ಕೆ ಮಾಡಲಾಗುವುದು ಎಂದರು
ಹಸುಗಳಿಗೆ ಚಿಪ್ ಅಳವಡಿಸುವುದರಿಂದ ಹಸು ಕಳ್ಳತನವಾದರೆ, ಕಾಲುಬಾಯಿ ರೋಗ ಬಂದರೂ ಗೊತ್ತಾಗಲಿದೆ. ಪಶುಭಾಗ್ಯ ಯೋಜನೆಯಡಿ ಮಾರಾಟ ಮಾಡಿದರೂ ಕೂಡ ತಿಳಿಯುತ್ತದೆ. ಇದರಿಂದ ಯೋಜನೆ ದುರ್ಬಳಕೆಯಾಗುವ ದೂರುಗಳಿಗೂ ಕಡಿವಾಣ ಬೀಳಲಿದೆ ಎಂದು ತಿಳಿಸಿದರು.
ರಾಜ್ಯದಲ್ಲಿ 1.3 ಕೋಟಿ ಹಸುಗಳಿವೆ. 71 ಲಕ್ಷ ಹಸುಗಳು ಹಾಲು ಕರೆಯುತ್ತಿವೆ. ಈ ಪೈಕಿ ಶೇ.80ರಷ್ಟು ಅಂದರೆ 86ಲಕ್ಷ ಹಸುಗಳಿಗೆ ಚಿಪ್ ಅಳವಡಿಸಲಾಗಿದೆ. ಪ್ರತಿ ಚಿಪ್‍ಗೂ 6 ರೂ.20ಪೈಸೆ ವೆಚ್ಚವಾಗಲಿದೆ ಎಂದು ಹೇಳಿದರು.
ಮೆಕ್ಕೆಜೋಳ ಖರೀದಿ ದರ ಹೆಚ್ಚಳಕ್ಕೆ ಪ್ರಸ್ತಾವನೆ:
ರೈತರಿಂದ ನೇರವಾಗಿ ಮೆಕ್ಕೆ ಜೋಳವನ್ನು ಕೆಎಂಎಫ್ ಖರೀದಿಸಲು ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಪ್ರತಿ ಕ್ವಿಂಟಾಲ್‍ಗೆ 1450ರೂ.ನಂತೆ ಖರೀದಿಸಲು ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.
ರಾಜ್ಯದಿಂದ ರಫ್ತಾಗುತ್ತಿದ್ದ ಮೀನಿಗೆ ಗೋವಾ ಸರ್ಕಾರ ನಿರ್ಬಂಧ ವಿಧಿಸಿರುವ ಸಂಬಂಧ ಅಲ್ಲಿನ ಸಿಎಂ ಜತೆ ಮಾತುಕತೆ ನಡೆಸಲಾಗುವುದು. ರಾಜ್ಯದ ಮೀನುಗಳಿಂದ ಆರೋಗ್ಯಕ್ಕೆ ಯಾವುದೇ ರೀತಿಯ ಮಾರಕವಿಲ್ಲ ಎಂಬುದನ್ನು ಪರೀಕ್ಷೆ ಮೂಲಕ ದೃಢಪಡಿಸಲಾಗಿದೆ ಎಂದು ಸಚಿವರು ಸ್ಪಷ್ಟಪಡಿಸಿದರು.
ರಾಜ್ಯದ ನಾಲ್ಕೈದು ಜಿಲ್ಲೆಗಳಲ್ಲಿ ಕಾಲುಬಾಯಿ ರೋಗ ಕಂಡು ಬಂದಿದ್ದರೂ ನಿಯಂತ್ರಣದಲ್ಲಿದೆ. ರೋಗ ನಿಯಂತ್ರಣದಲ್ಲಿ ರಾಜ್ಯ 11ನೇ ಹಂತದಲ್ಲಿದೆ. ರೋಗ ನಿರೋಧಕ ಲಸಿಕೆಗಳನ್ನು ಹಾಕಲಾಗುತ್ತಿದೆ ಎಂದರು.
ನಾರಿ ಸುವರ್ಣ ಟಗರು:
ನಾರಿ ಸುವರ್ಣ ಟಗರು ಎಂಬ ಹೊಸ ಟಗರನ್ನು ಸಂಶೋಧಿಸಲಾಗಿದ್ದು, ಇದರಿಂದ ಕುರಿಗಳು ಅವಳಿ ಮರಿಗಳನ್ನು ಹಾಕಲಿವೆ. ಇಸ್ರೇಲ್ ಕುರಿಗಳ ರೀತಿಯಲ್ಲಿ ಹಾಲಿನ ಪ್ರಮಾಣ ಹೆಚ್ಚಾಗಲಿದೆ.ತೂಕವೂ ಅಧಿಕವಾಗಲಿದೆ. ಬಂಡೂರು ಕುರಿಗಳ ರೀತಿ ಮಾಂಸದ ಗುಣಮಟ್ಟವೂ ಹೆಚ್ಚಾಗಲಿದೆ. ಶಿರಾದಲ್ಲಿ ಎಪಿಎಂಸಿ ಮಾದರಿಯಲ್ಲಿ ಮಾಂಸ ಮಾರುಕಟ್ಟೆ ತೆರೆಯಲು ಟೆಂಡರ್ ಕರೆಯಲಾಗಿದೆ ಎಂದು ಸಚಿವರು ತಿಳಿಸಿದರು.