ಬೆಂಗಳೂರು, ನ.14-ಮಾಜಿ ಸಚಿವ ಜನಾರ್ಧನರೆಡ್ಡಿ ಪ್ರಕರಣದಲ್ಲಿ ಸರ್ಕಾರ ಯಾವುದೇ ರೀತಿಯ ಹಸ್ತಕ್ಷೇಪ ಅಥವಾ ದ್ವೇಷದ ರಾಜಕಾರಣ ಮಾಡುತ್ತಿಲ್ಲ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.
ಪಂಡಿತ್ ಜವಹರಲಾಲ್ ನೆಹರೂ ಅವರ ಹುಟ್ಟುಹಬ್ಬದ ಅಂಗವಾಗಿ ವಿಧಾನಸೌಧದ ಬಳಿ ಇರುವ ಅವರ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿ ಸುದ್ದಿಗಾರರೊಂದಿಗೆ ಮಾತನಾಡಿದರು.
ಈ ಪ್ರಕರಣದಲ್ಲಿ ಸರ್ಕಾರದ ಹಸ್ತಕ್ಷೇಪವೂ ಇಲ್ಲ. ಅಧಿಕಾರದ ದುರ್ಬಳಕೆಯೂ ಮಾಡಲಾಗುತ್ತಿಲ್ಲ. ಅಧಿಕಾರಿಗಳು ಕರ್ತವ್ಯ ನಿರ್ವಹಿಸಲು ಮುಕ್ತ ವಾತಾವರಣ ಕಲ್ಪಿಸಲಾಗಿದೆ ಎಂದು ಸ್ಪಷ್ಟಪಡಿಸಿದರು.
ಜನಾರ್ಧನರೆಡ್ಡಿ ಅಪ್ತರೊಬ್ಬರು 18 ಕೋಟಿ ರೂ.ಗಳನ್ನು ತಿರುಪತಿ ಹುಂಡಿಗೆ ಹಾಕಿದ್ದಾರೆ ಎಂದು ಹೇಳುತ್ತಿರುವುದು ವ್ಯಂಗ್ಯವೋ, ಗಂಭೀರವೋ ಅರ್ಥವಾಗುತ್ತಿಲ್ಲ. ಇದರ ಮರ್ಮವೇನು ಎಂಬುದನ್ನು ಅವರೇ ಹೇಳಬೇಕು ಎಂದರು.
ಈ ಪ್ರಕರಣದಲ್ಲಿ ಸಚಿವರ ಪಾತ್ರವಿದೆ ಎಂಬ ವಿಷಯ ಕುರಿತು ಯಾವುದೇ ಮಾಹಿತಿ ಇಲ್ಲ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ಟಿಪ್ಪು ಜಯಂತಿ ಆಚರಣೆ ವಿಚಾರದಲ್ಲಿ ಯಾವುದೇ ಹೊಸ ಬದಲಾವಣೆ ಇಲ್ಲ. ರದ್ದು ಮಾಡುವ ವಿಚಾರವೂ ನಮ್ಮ ಮುಂದಿಲ್ಲ ಎಂದು ಮುಖ್ಯಮಂತ್ರಿ ತಿಳಿಸಿದರು.
ಪ್ರತಿಯೊಂದು ಕಾರ್ಯಕ್ರಮದಲ್ಲೂ ಮುಖ್ಯಮಂತ್ರಿಗಳು ಭಾಗಿಯಾಗಬೇಕು ಎಂದೇನೂ ಇಲ್ಲ.
ಸರ್ಕಾರದ ಪ್ರತಿನಿಧಿಯಿಂದ ಕಾರ್ಯಕ್ರಮ ನಡೆಯುತ್ತದೆ. ಸರ್ಕಾರದ ವತಿಯಿಂದ ಹಲವಾರು ಜಯಂತಿ, ಉತ್ಸವಗಳು ನಡೆಯುತ್ತವೆ. ಟಿಪ್ಪು ಜಯಂತಿ ಒಂದರಲ್ಲಿ ಮಾತ್ರ ಈ ಗೊಂದಲ ಸೃಷ್ಟಿಯಾಗಿದೆ. ಅದರಲ್ಲೂ ರಾಜಕೀಯವಾಗಿ ಗೊಂದಲ ನಿರ್ಮಾಣವಾಗುತ್ತಿದೆ ಎಂದು ವಿಷಾದಿಸಿದರು.
ಸಂತೋಷ್ ತಮ್ಮಯ್ಯ ಬಂಧನದ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ. ಇದು ಜಿಲ್ಲಾ ಮತ್ತು ಅಧಿಕಾರಿಗಳ ಮಟ್ಟದಲ್ಲಿ ಕೈಗೊಂಡ ಕ್ರಮ.ಮಾಹಿತಿ ಪಡೆದ ನಂತರ ಪ್ರತಿಕ್ರಿಯಿಸುತ್ತೇನೆ ಎಂದು ಉತ್ತರಿಸಿದರು.
ನೆಹರೂ ಅವರ ಹುಟ್ಟುಹಬ್ಬವನ್ನು ಮಕ್ಕಳ ದಿನಾಚರಣೆಯಾಗಿ ಆಚರಿಸಲಾಗುತ್ತದೆ.ಚಾಚಾ ನೆಹರು ಎಂದೇ ಪ್ರೀತಿಯಿಂದ ಅವರನ್ನು ಕರೆಯಲಾಗುತ್ತದೆ.ಮಕ್ಕಳ ಬಗ್ಗೆ ಅಪಾರ ಪ್ರೀತಿ ಹೊಂದಿದ್ದ ಅವರನ್ನು ಗೌರವಿಸಲು ಜಯಂತಿ ಆಚರಿಸಲಾಗುತ್ತದೆ ಎಂದರು.
ದೇಶದ ಅಭಿವೃದ್ಧಿಯಲ್ಲಿ ನೆಹರೂ ಅವರ ಕೊಡುಗೆ ಅಪಾರ. ಅಂದಿನ ಸಂಕಷ್ಟದ ಪರಿಸ್ಥಿತಿಯಲ್ಲೂ ಅಭಿವೃದ್ಧಿಗೆ ಹೆಚ್ಚಿನ ಮಹತ್ವ ನೀಡಿ ದೇಶವನ್ನು ಮುನ್ನಡೆಸಿದವರು ನೆಹರೂ ಎಂದು ಸ್ಮರಿಸಿದರು.