ಬೆಂಗಳೂರು, ನ.14-ಕಳೆದ ನಾಲ್ಕೂವರೆ ವರ್ಷಗಳ ಆಡಳಿತದಲ್ಲಿ ಮೋದಿಯವರ ಸರ್ಕಾರ ಹೇಳಿಕೊಳ್ಳುವಂತಹ ಯಾವ ಸಾಧನೆಯನ್ನೂ ಮಾಡದಿರುವುದರಿಂದ ಚುನಾವಣೆ ಕಾಲದಲ್ಲಿ ಜನರನ್ನು ಭಾವನಾತ್ಮಕವಾಗಿ ಪ್ರಚೋದಿಸಲು ಭಾಷೆ, ಧರ್ಮದಂತಹ ಸೂಕ್ಷ್ಮ ವಿಷಯಗಳನ್ನು ಪ್ರಸ್ತಾಪಿಸಲಾಗುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ಗುಂಡೂರಾವ್ ಕಿಡಿಕಾರಿದರು.
ಕೆಪಿಸಿಸಿ ಕಚೇರಿಯಲ್ಲಿಂದು ನೆಹರೂ ಜನ್ಮದಿನಾಚರಣೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೋದಿ ಅವರ ಆಡಳಿತ ಕೊಟ್ಟ ಯಾವ ಭರವಸೆಗಳನ್ನೂ ಈಡೇರಿಸಿಲ್ಲ. ಆಡಳಿತ ಸಂಪೂರ್ಣ ವೈಫಲ್ಯ ಕಂಡಿದೆ. ಹಲವು ಹಗರಣಗಳಲ್ಲಿ ಸರ್ಕಾರ ಸಿಲುಕಿಕೊಂಡಿದೆ. ಇದೆಲ್ಲದರಿಂದ ಜನರ ಗಮನ ಬೇರೆಡೆ ಸೆಳೆಯಲು ಭಾವನಾತ್ಮಕ ವಿಷಯಗಳನ್ನು ಪ್ರಸ್ತಾಪಿಸಲಾಗುತ್ತಿದೆ ಎಂದು ಹೇಳಿದರು.
ಹೈದರಾಬಾದ್ನ ಶಾಸಕರೊಬ್ಬರು ವಂದೇ ಮಾತರಂ ಹೇಳದವರು ದೇಶ ಬಿಟ್ಟು ಪಾಕಿಸ್ತಾನಕ್ಕೆ ಹೋಗಲಿ ಎಂದು ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿದ ದಿನೇಶ್ ಗುಂಡೂರಾವ್, ಜನರ ಗಮನವನ್ನು ಬೇರೆಡೆ ಸೆಳೆಯುವ ಸಲುವಾಗಿಯೇ ಚುನಾವಣೆಯ ಕಾಲದಲ್ಲಿ ಈ ರೀತಿಯ ಹೇಳಿಕೆಗಳು ಕೇಳಿ ಬರುತ್ತಿದೆ. ಇದರ ಹಿಂದೆ ಇನ್ಯಾವ ಘನಾಂಧಾರಿ ಉದ್ದೇಶಗಳು ಇಲ್ಲ. ತಮ್ಮ ಲೋಪಗಳು ಮುಚ್ಚಿಕೊಳ್ಳಲು ಕಷ್ಟವಾಗಿರುವುದರಿಂದ ಬಿಜೆಪಿಯವರು ಜಾತಿ, ಧರ್ಮ, ಭಾಷೆ ಹೆಸರಿನಲ್ಲಿ ಪ್ರಚೋದನೆ ಉಂಟು ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ರಫೇಲ್ ಯುದ್ಧ ವಿಮಾನ ಖರೀದಿ ಹಗರಣದಲ್ಲಿ ಫ್ರಾನ್ಸ್ನ ಡೆಸಾಲ್ಟ್ ಸಂಸ್ಥೆಯ ಸಿಇಒ ಹೇಳಿಕೆ ಬಗ್ಗೆ ಕೇಂದ್ರ ಸರ್ಕಾರವೇ ಸ್ಪಷ್ಟನೆ ನೀಡಬೇಕು. ಕಾಂಗ್ರೆಸ್ ಮೊದಲಿನಿಂದಲೂ ರಫೇಲ್ ಯುದ್ಧ ವಿಮಾನ ಖರೀದಿಯ ಬಗ್ಗೆ ಕೆಲವು ಪ್ರಶ್ನೆಗಳನ್ನು ಮುಂದಿಟ್ಟಿದೆ.ಯಾವ ಮೊತ್ತಕ್ಕೆ ವಿಮಾನಗಳನ್ನು ಖರೀದಿಸಲಾಗುತ್ತಿದೆ, ಒಪ್ಪಂದ ನಡೆದಿರುವುದೆಲ್ಲಿ?ಅದಕ್ಕೆ ಅಧಿಕೃತ ಸಹಿ ಮಾಡಿದವರು ಯಾರು ಎಂಬುದೂ ಸೇರಿದಂತೆ ಕೆಲವು ಪ್ರಶ್ನೆಗಳನ್ನು ನಾವು ಕೇಳಿದ್ದೇವೆ. ಅದಕ್ಕೆ ಕೇಂದ್ರ ಸರ್ಕಾರದಿಂದ ಈವರೆಗೂ ಉತ್ತರ ಬಂದಿಲ್ಲ.
ವಿಮಾನ ಖರೀದಿಯ ಮೊತ್ತವನ್ನು ಕೇಂದ್ರ ಸರ್ಕಾರ ಮುಚ್ಚಿಡುವ ಅಗತ್ಯವೇನಿದೆ?ರಿಲಯನ್ಸ್,ಡೆಸಾಲ್ಟ್ ಕಂಪೆನಿ ಸೇರಿದಂತೆ ಖಾಸಗಿ ಕಂಪೆನಿಗಳು ತಮ್ಮ ವಾರ್ಷಿಕ ಹಣಕಾಸು ವಹಿವಾಟಿನ ಪತ್ರದಲ್ಲಿ ನಾನಾ ರೀತಿಯ ಉಲ್ಲೇಖಗಳನ್ನು ಮಾಡಿವೆ. ಅದನ್ನು ಅಧಿಕೃತವಾಗಿ ಕೇಂದ್ರ ಸರ್ಕಾರವೇ ಘೋಷಣೆ ಮಾಡಿದರೆ ಎಲ್ಲಾ ಗೊಂದಲಗಳು ಬಗೆಹರಿಯುತ್ತವೆ. ತಪ್ಪು ಮಾಡದೆ ಇದ್ದರೆ ಕೇಂದ್ರ ಸರ್ಕಾರಕ್ಕೆ ಪ್ರತಿ ವಿಮಾನ ಖರೀದಿಯ ಬೆಲೆಯನ್ನು ಬಹಿರಂಗ ಪಡಿಸಲು ಇರುವ ಸಮಸ್ಯೆಯಾದರೂ ಏನು ಎಂದು ಪ್ರಶ್ನಿಸಿದರು.
ಪತ್ರಕರ್ತ ಸಂತೋಷ್ ತಿಮ್ಮಯ್ಯ ಅವರ ಬಂಧನವನ್ನು ನೆಪವಾಗಿಟ್ಟುಕೊಂಡು ಬಿಜೆಪಿ ನಾಯಕರು ಹೇಳಿಕೆಗಳನ್ನು ನೀಡುತ್ತಿರುವುದಕ್ಕೆ ಪ್ರತಿಕ್ರಿಯಿಸಿದ ದಿನೇಶ್ ಗುಂಡೂರಾವ್, ಕೋಮು ಪ್ರಚೋದನೆ ನೀಡುವುದು ಮತ್ತು ಒಂದು ಸಮುದಾಯವನ್ನು ಅವಹೇಳನ ಮಾಡಿದ ಹಿನ್ನೆಲೆಯಲ್ಲಿ ಪೆÇಲೀಸರು ಕಾನೂನು ರೀತಿ ಕ್ರಮ ಕೈಗೊಂಡಿದ್ದಾರೆ. ಇಂತಹ ವಿಚಾರಗಳಲ್ಲಿ ರಾಜಕೀಯ ಮಾಡುವುದು ಒಳ್ಳೆಯದಲ್ಲ ಎಂದರು.