ಬಿಜೆಪಿ ಆಡಳಿತಾವಧಿಯಲ್ಲಿ ಅಡಮಾನವಿಟ್ಟಿದ್ದ ಎರಡು ಕಟ್ಟಡಗಳ ಋಣಮುಕ್ತ

ಬೆಂಗಳೂರು, ನ.14-ಬಿಜೆಪಿ ಆಡಳಿತಾವಧಿಯಲ್ಲಿ ಅಡಮಾನ ಇಡಲಾಗಿದ್ದ ಮತ್ತೆರಡು ಪಾರಂಪರಿಕ ಕಟ್ಟಡಗಳನ್ನು ಋಣಮುಕ್ತಗೊಳಿಸುವ ಮಹತ್ವದ ತೀರ್ಮಾನಕ್ಕೆ ಬಿಬಿಎಂಪಿ ಬಂದಿದೆ.

ಅಡಮಾನ ಇಡಲಾಗಿದ್ದ ರಾಜಾಜಿನಗರ ಆರ್‍ಟಿಒ ಕಚೇರಿ ಸಂಕೀರ್ಣ ಹಾಗೂ ಸ್ಲಾಟರಿ ಹೌಸ್ ಕಟ್ಟಡಗಳನ್ನು ಋಣಮುಕ್ತಗೊಳಿಸಲಾಗುತ್ತಿದೆ.
ಶುಕ್ರವಾರ ಶಕ್ತಿಸೌಧದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಹುಡ್ಕೋ ಅಧಿಕಾರಿಗಳ ಸಮ್ಮುಖದಲ್ಲಿ ಎರಡು ಪಾರಂಪರಿಕ ಕಟ್ಟಡಗಳ ಋಣಮುಕ್ತ ಪತ್ರವನ್ನು ಡಿಸಿಎಂ ಹಾಗೂ ಬೆಂಗಳೂರು ಅಭಿವೃದ್ಧಿ ಸಚಿವರಾದ ಡಾ.ಜಿ.ಪರಮೇಶ್ವರ್ ಅವರು ಸ್ವೀಕರಿಸಲಿದ್ದಾರೆ.

ಬಿಜೆಪಿ ಆಡಳಿತಾವಧಿಯಲ್ಲಿ ನಗರದ 11 ಪ್ರಮುಖ ಪಾರಂಪರಿಕ ಕಟ್ಟಡಗಳನ್ನು ಅಡಮಾನ ಇಡಲಾಗಿತ್ತು.ಬಿಜೆಪಿ ಅವಧಿ ಪೂರ್ಣಗೊಂಡು ಪಾಲಿಕೆಯಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ನೇತೃತ್ವದ ಆಡಳಿತ ಬಂದ ನಂತರ ಅಡಮಾನ ಇಡಲಾಗಿದ್ದ ಪಾರಂಪರಿಕ ಕಟ್ಟಡಗಳನ್ನು ಋಣಮುಕ್ತಗೊಳಿಸುವ ತೀರ್ಮಾನ ಕೈಗೊಳ್ಳಲಾಗಿತ್ತು.

ಮಂಜುನಾಥ್‍ರೆಡ್ಡಿ ಅವರು ಮೇಯರ್ ಆಗಿದ್ದ ಅವಧಿಯಲ್ಲಿ ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷರಾಗಿದ್ದ ಎಂ.ಶಿವರಾಜ್ ಅವರು ಅಡಮಾನ ಇಡಲಾಗಿದ್ದ 11 ಕಟ್ಟಡಗಳ ಪೈಕಿ ಕೆಂಪೇಗೌಡ ಮ್ಯೂಜಿಯಂ ಹಾಗೂ ಮೇಯೋಹಾಲ್ ಕಟ್ಟಡವನ್ನು ಋಣಮುಕ್ತಗೊಳಿಸಿದ್ದರು.
ನಂತರದ ಅವಧಿಯಲ್ಲಿ ಮಲ್ಲೇಶ್ವರಂ ಹಾಗೂ ಜಾನ್ಸನ್ ಮಾರುಕಟ್ಟೆಗಳನ್ನು ಋಣಮುಕ್ತಗೊಳಿಸಲಾಗಿತ್ತು.ಇದೀಗ ಸ್ಲಾಟರಿ ಹೌಸ್ ಮತ್ತು ರಾಜಾಜಿನಗರ ಆರ್‍ಟಿಒ ಕಚೇರಿಗಳನ್ನು ಋಣಮುಕ್ತಗೊಳಿಸಲಾಗುತ್ತಿದೆ.

ಅಡಮಾನ ಇಡಲಾಗಿದ್ದ 11 ಆಸ್ತಿಗಳ ಪೈಕಿ ಈಗಾಗಲೇ ಆರು ಕಟ್ಟಡಗಳನ್ನು ಋಣಮುಕ್ತಗೊಳಿಸಲಾಗಿದ್ದು, ಶೀಘ್ರದಲ್ಲೇ ಉಳಿದ ಐದು ಪಾರಂಪರಿಕ ಕಟ್ಟಡಗಳನ್ನು ಋಣಮುಕ್ತಗೊಳಿಸಲಾಗುವುದು ಎಂದು ಬಿಬಿಎಂಪಿ ಆಡಳಿತ ಪಕ್ಷದ ನಾಯಕ ಎಂ.ಶಿವರಾಜ್ ತಿಳಿಸಿದ್ದಾರೆ.

ವಿಧಾನಸೌಧದ ಬ್ಯಾಂಕೆಟ್ ಹಾಲ್ಮಲ್ಲಿ ಇದೇ 18ರಂದು ಪ್ರಕೃತಿ ಚಿಕಿತ್ಸೆ ದಿನಾಚರಣೆ:
ಬೆಂಗಳೂರು, ನ.14-ಕೇಂದ್ರ ಸರ್ಕಾರದ ಆಯುಷ್ ಇಲಾಖೆ ವತಿಯಿಂದ ಇದೇ 18 ರಂದು ಪ್ರಕೃತಿ ಚಿಕಿತ್ಸೆ ದಿನಾಚರಣೆಯನ್ನು ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‍ನಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಎನಿಗ್ಮಾ ರಾಷ್ಟ್ರೀಯ ಅಧ್ಯಕ್ಷ ಡಾ.ನವೀನ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಕೃತಿ ಚಿಕಿತ್ಸೆಯನ್ನು ಭಾರತದ ಹಳ್ಳಿ ಹಳ್ಳಿಗಳಿಗೆ ತಲುಪಿಸುವ ದೃಷ್ಟಿಯಿಂದ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮವನ್ನು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಉದ್ಘಾಟಿಸಲಿದ್ದು, ಇನ್ನಿತರ ಗಣ್ಯರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಕರ್ನಾಟಕದಲ್ಲಿ ನಡೆಯುವ ಪ್ರಥಮ ರಾಷ್ಟ್ರೀಯ ಪ್ರಕೃತಿ ಚಿಕಿತ್ಸಾ ದಿನಾಚರಣೆ ಹಾಗೂ ಪ್ರಕೃತಿ ಚಿಕಿತ್ಸೆಯ ಮಹತ್ವವನ್ನು ಸಾರ್ವಜನಿಕರಿಗೆ ತಲುಪಿಸುವುದು ನಮ್ಮ ಉದ್ದೇಶವಾಗಿದೆ ಎಂದು ಹೇಳಿದರು.

ಬೆಂಗಳೂರು, ನ.14-ಉತ್ತರ ಭಾರತದ ಹತ್ತು ಸಾವಿರಕ್ಕೂ ಹೆಚ್ಚು ಮಂದಿ ಅಲ್ಲಿನ ವಿಶಿಷ್ಟ ಆಚರಣೆಯಾದ ಛಠ್ ಪೂಜಾವನ್ನು ಪ್ರತಿವರ್ಷ ಆಚರಿಸುತ್ತಾ ಬಂದಿದ್ದಾರೆ. ಇದಕ್ಕೆ ಎಲ್ಲಾ ರೀತಿಯ ಅನುಕೂಲ ಕಲ್ಪಿಸಲಾಗುತ್ತಿದೆ ಎಂದು ಶಾಸಕ ಅರವಿಂದ ಲಿಂಬಾವಳಿ ತಿಳಿಸಿದರು.
ಜನ್ ಸಹಯೋಗ್ ಸಂಘಟನೆಯಿಂದ ಮಹದೇವಪುರದ ಹೂಡಿಯಲ್ಲಿ ಹಮ್ಮಿಕೊಂಡಿದ್ದ 13ನೇ ವರ್ಷದ ಛಠ್ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಈ ಪೂಜೆಗಾಗಿ ಕೊಡಿಗೇಹಳ್ಳಿ ಕೆರೆ ಪಕ್ಕದಲ್ಲೇ ಕಲ್ಯಾಣಿಯನ್ನು ನಿರ್ಮಿಸಿಕೊಡಲಾಗಿದೆ. ಪ್ರತಿವರ್ಷ ಇಲ್ಲಿ ಛಠ್ ಪೂಜೆ ನಡೆಸಲಾಗುತ್ತಿದೆ.ಇದೇ ಕಲ್ಯಾಣಿಯನ್ನು ಗಣೇಶ ವಿಸರ್ಜನೆಗೂ ಬಳಸಬಹುದಾಗಿದೆ ಎಂದು ಹೇಳಿದರು.

ಈ ಬಾರಿ ಬೇಸಿಗೆಯಲ್ಲಿ ಸೂರ್ಯ ಪ್ರಖರವಾಗಿರದಂತೆ ಕೋರಿ ಪೂಜೆ ಸಲ್ಲಿಸಲಾಗುತ್ತಿದೆ.ಸೂರ್ಯನಿಗೆ ಮಾಡುವ ಪೂಜೆ ಇದಾಗಿದೆ ಎಂದು ಹೇಳಿದರು.
ಸಂಸದ ಪಿ.ಸಿ.ಮೋಹನ್ ಮಾತನಾಡಿ, ಐಟಿ-ಬಿಟಿ ಕ್ಷೇತ್ರವಾದ ಮಹದೇವಪುರದಲ್ಲಿ ಬಿಹಾರದಿಂದ ಬಂದವರು ಇಲ್ಲೇ ನೆಲೆಸಿದ್ದು, ಇಲ್ಲೇ ಮಕ್ಕಳು ಹುಟ್ಟಿ ಬೆಳೆದಿದ್ದಾರೆ. ಇವರ ಈ ಪ್ರದೇಶಕ್ಕೆ ಮೂಲಭೂತ ಸೌಲಭ್ಯ ಕಲ್ಪಿಸಬೇಕಿರುವುದು ನಮ್ಮ ಕರ್ತವ್ಯ.ಅವರು ಆಚರಿಸುವ ಈ ಛಠ್ ಪೂಜೆಯನ್ನು ನಾವು ಆಚರಿಸುತ್ತಾ ಬಂದಿದ್ದೇವೆ ಎಂದರು.
ಕಾರ್ಯಕ್ರಮದಲ್ಲಿ ಬೀರ್‍ಬಹದ್ದೂರ್ ಸಿಂಗ್, ಸುನೀಲ್ ಪಂಡಿತ್ ಪಂಕಜ್ ಠಾಕೂರ್, ಕಬಡ್ಡಿ ಪಿಳ್ಳಪ್ಪ, ನಟರಾಜು ಮತ್ತಿತರರು ಉಪಸ್ಥಿತರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ