ಬೆಂಗಳೂರು, ನ.14- ನಿಗದಿತ ದಿನಾಂಕದಲ್ಲಿ ಬಿಬಿಎಂಪಿ ಸ್ಥಾಯಿ ಸಮಿತಿ ಸದಸ್ಯರ ಚುನಾವಣೆ ನಡೆಸದ ಪ್ರಾದೇಶಿಕ ಆಯುಕ್ತ ಶಿವಯೋಗಿ ಕಳಸದ್ ಅವರ ನಡೆ ಹಲವು ಅನುಮಾನಗಳಿಗೆ ಎಡೆಮಾಡಿದೆ.
ಮೇಯರ್, ಉಪಮೇಯರ್ ಚುನಾವಣೆ ಸಂದರ್ಭದಲ್ಲೇ ಸ್ಥಾಯಿ ಸಮಿತಿಗಳಿಗೂ ಚುನಾವಣೆ ನಡೆಯಬೇಕು.ಆದರೆ, ಈ ಬಾರಿ ಒಂದು ತಿಂಗಳು ಮುಂದೂಡಲಾಗಿತ್ತು.
ನ.9ರಂದೇ ಸ್ಥಾಯಿ ಸಮಿತಿ ಸದಸ್ಯರ ಅವಧಿ ಪೂರ್ಣಗೊಂಡಿದೆ. ಹಾಗಾಗಿ ತಕ್ಷಣವೇ ಚುನಾವಣೆ ನಡೆಯಬೇಕಿತ್ತು. ಉಪಮೇಯರ್ ರಮಿಳಾ ಅವರ ನಿಧನದಿಂದಾಗಿ ಅವರ ಸ್ಥಾನಕ್ಕೂ ಮತ್ತು ಸದಸ್ಯತ್ವ ಸ್ಥಾನಕ್ಕೂ ಚುನಾವಣೆ ನಡೆಯಬೇಕಿದೆ.
ಸ್ಥಾಯಿ ಸಮಿತಿ ಸದಸ್ಯರ ಅವಧಿ ಪೂರ್ಣಗೊಂಡಿರುವುದರಿಂದ ಯಾವುದೇ ಕಡತಗಳಿಗೆ ಅವರು ಸಹಿ ಮಾಡುವ ಅಧಿಕಾರ ಇರುವುದಿಲ್ಲ. ಚುನಾವಣೆ ನಡೆದು ಹೊಸ ಸದಸ್ಯರು ಆಯ್ಕೆಯಾಗಿ ಬರುವತನಕ ಕಡತಗಳು ಕೊಳೆಯಬೇಕಾಗಿದೆ.
ಮೇಯರ್ ಅವರು ಏಕಾಏಕಿ ಯಾವುದೇ ನಿರ್ಣಯಗಳನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲ. ಸ್ಥಾಯಿ ಸಮಿತಿ ಅಧ್ಯಕ್ಷರು, ಸದಸ್ಯರೊಂದಿಗೆ ಚರ್ಚಿಸಿಯೇ ತೀರ್ಮಾನ ತೆಗೆದುಕೊಳ್ಳಬೇಕು.ಈಗ ಹೊಸಬರು ಬರುವ ತನಕ ಎಲ್ಲದಕ್ಕೂ ಕಾಯುವಂತಾಗಿದೆ.
ಇನ್ನೇನು ಚುನಾವಣೆ ನಡೆಯಲಿದೆ.ಸ್ಥಾಯಿ ಸಮಿತಿಗಳಿಗೆ ಹೊಸ ಸದಸ್ಯರು ಬರುತ್ತಾರೆ ಎಂದೇ ಊಹಿಸಲಾಗಿತ್ತು.ಈ ಚುನಾವಣೆಯಲ್ಲಿ ಮತದಾನದ ಹಕ್ಕು ಹೊಂದಿರುವ ವಿ.ಎಸ್.ಉಗ್ರಪ್ಪ ಈಗ ಬಳ್ಳಾರಿ ಲೋಕಸಭೆ ಉಪ ಚುನಾವಣೆಯಲ್ಲಿ ಚುನಾಯಿತರಾಗಿದ್ದಾರೆ.ಕೇಂದ್ರ ಸಚಿವ ಅನಂತ್ಕುಮಾರ್ ನಿಧನರಾಗಿರುವುದರಿಂದ ಮತದಾರರ ಪಟ್ಟಿಯಿಂದ ಇವರುಗಳ ಹೆಸರು ತೆಗೆಯಬೇಕಿದೆ. ಹಾಗಾಗಿ ಮತದಾರರ ಪಟ್ಟಿ ಪರಿಷ್ಕರಣೆ ಮಾಡಬೇಕೆಂದು ಬಿಬಿಎಂಪಿ ಆಯುಕ್ತರಿಗೆ ಪ್ರಾದೇಶಿಕ ಆಯುಕ್ತ ಶಿವಯೋಗಿ ಕಳಸದ್ ನಿನ್ನೆ ಪತ್ರ ಬರೆದಿದ್ದಾರೆ. ಇದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಮೇಯರ್, ಉಪಮೇಯರ್ ಚುನಾವಣೆ ನಡೆದದ್ದಾಗಿದೆ.ಮತದಾರರ ಪಟ್ಟಿ ಕೂಡ ಪರಿಷ್ಕರಣೆಯಾಗಿದೆ.ಈಗ ಮತ್ತೆ ಪರಿಷ್ಕರಣೆ ಮಾಡಬೇಕೆಂದು ಪ್ರಾದೇಶಿಕ ಆಯುಕ್ತರು ಸೂಚಿಸಿದ್ದಾರೆ.ಇತ್ತ ಸ್ಥಾಯಿ ಸಮಿತಿ ಸದಸ್ಯರ ಅವಧಿ ನ.9ರಂದೇ ಮುಗಿದಿದೆ.ಇದೇ 23ಕ್ಕೆ ಚುನಾವಣೆ ನಡೆಯಬೇಕಿತ್ತು.ಚುನಾವಣೆಗೆ 7ದಿನ ಮೊದಲು ನೋಟಿಸ್ ಕೊಟ್ಟು ಅಧಿಸೂಚನೆ ಹೊರಡಿಸಬೇಕಿತ್ತು.ಆದರೆ, ಇದ್ಯಾವುದೂ ಆಗಿಲ್ಲ. ಏಕಾಏಕಿ ಮತದಾರರ ಪಟ್ಟಿ ಪರಿಷ್ಕರಣೆ ಮಾಡಿ ಎಂದು ಕಳಸದ್ ಹೇಳಿದ್ದಾರೆ. ಹಾಗಾಗಿ ಸದ್ಯಕ್ಕೆ ಉಪಮೇಯರ್ ಸ್ಥಾನ ಮತ್ತು ಸ್ಥಾಯಿ ಸಮಿತಿ ಸದಸ್ಯರ ಆಯ್ಕೆಗೆ ಚುನಾವಣೆ ನಡೆಯುವ ಲಕ್ಷಣ ಕಾಣುತ್ತಿಲ್ಲ.