–ರಾಜೇಶ ಗುಂಡಬಾಳ
ಸಾಮಾನ್ಯ ಜನರಿಗೆ ಭಾರತೀಯ ಅಂಚೆಯ ಹೊರತಾಗಿ ಬೇರಾವ ಸಂಹವನ ಮಾಧ್ಯಮದ ಸವಲತ್ತುಗಳು ಇಲ್ಲದ ಸಂದರ್ಭದಲ್ಲಿ, ಸಂಪರ್ಕವೇ ಪ್ರಧಾನವಾಗಿ, ಮನೆ ಮನೆಯ ಭೇಟಿ, ವ್ಯಕ್ತಿ ವ್ಯಕ್ತಿತ್ವದ ಸದ್ಭಳಕೆಯ ಮೂಲಕ ಒಂದು ಪಕ್ಷದ ಸಿದ್ಧಾಂತವನ್ನು ಪ್ರತಿ ಹಳ್ಳಿ ಹಳ್ಳಿಗೆ ಪರಿಚಯಿಸಿ, ಮನೆ ಮನಗಳಲ್ಲಿ ಭೇಟಿನೀಡಿ. ಕೇಸರಿ ಲುಂಗಿ ಸುತ್ತಿಕೊಂಡ ಕಾರ್ಯಕರ್ತರ ಪಡೆಯನ್ನು ಕಟ್ಟಿ. ಮೈದಾ ಹಿಟ್ಟನ್ನು ಹದವಾಗಿ ಕಾದ ಬಿಸಿ ನೀರಿಗೆ ಬೆರೆಸಿ ಅಂಟನ್ನು ತಯಾರಿಸಿ. ಗೋಡೆ,ಮರ, ಬಸ್ ನಿಲ್ದಾಣ, ಸಾರ್ವಜನಿಕ ಶೌಚಾಲಯ, ಸಿಮೆಂಟ್ ಕರೆಂಟ್ ಕಂಬವೂ ಸೇರಿದಂತೆ, ಜನರ ಕಣ್ಣಿಗೆ ರಾಚುವಂತೆ, ಕೆಲವೇ ಕೆಲವು ಬೆರಳೆಣಿಕೆಯ ನಾಯಕರ ಭಾವಚಿತ್ರದ ನಡುವೆ ದೊಡ್ಡದಾದ ಕಮಲದ ಗುರುತಿರುವ ಬಿತ್ತಿ ಪತ್ರಗಳನ್ನು ಹಚ್ಚಿ ಪಕ್ಷದ ಸಿದ್ದಾಂತವನ್ನು ಎಲ್ಲೆಡೆ ಸಾರುವಲ್ಲಿನ ಪರಿಶ್ರಮದ ಕೀರ್ತಿ ಭಾರತೀಯ ಜನತಾ ಪಕ್ಷದ ಒಂದು ಮತ್ತು ಎರಡನೇ ತಲೆಮಾರಿನ ನಾಯಕರಿಗೆ ಸಲ್ಲುತ್ತದೆ.
ಅತಿಯಾದ ಪಕ್ಷ ನಿಷ್ಠೆ, ನಿಸ್ವಾರ್ಥ ಸೇವೆ, ಮುಂದೆ ಯಾವತ್ತೋ ಫಲಕೊಡತ್ತೆ ಅನ್ನುವ ದೃಢ ವಿಶ್ವಾಸದಿಂದ ಹಗಲು ರಾತ್ರಿಯೆನ್ನದೆ, ಪರಿಶ್ರಮಿಸಿದ ಸಮರ್ಪಣಾ ಭಾವದ ಕಾರ್ಯಕರ್ತರ ಫಲವೇ ಇಂದು ಅಧಿಕಾರದ ಪರ್ವದಲ್ಲಿರುವ ಬಾ.ಜ.ಪ.
ಅಂದು ಇಂದಿನಂತೆ ಮೊಬೈಲ್, ಸಾಮಾಜಿಕ ಜಾಲ ತಾಣ ಇರಲಿಲ್ಲ. ಕಾಂಗ್ರೆಸ್ ಪ್ರಶ್ನಾತೀತ ಪಕ್ಷವಾಗಿ ದೇಶದಲ್ಲಿ ಸರ್ಕಾರವನ್ನು ನಡೆಸುತ್ತಿದ್ದ ಕಾಲ. ಇಂದಿರಮ್ಮನ ದತ್ತು ಮಕ್ಕಳಂತೆ ಕಾಂಗ್ರೆಸ್ಸಿಗೆ ಮಾರ್ಪಟ್ಟ ಮತದಾರರು. ಇಂತಹ ಕಾಲಘಟ್ಟದಲ್ಲಿ, ಪಕ್ಷವನ್ನು ಸೈದ್ಧಾಂತಿಕ ನೆಲೆಗಟ್ಟಿನಲ್ಲಿ ಎಲ್ಲಿಯೂ ರಾಜಿಯಾಗದಂತೆ, ಹಣದ ಆಮಿಷಗಲಿಲ್ಲದೆ, ತತ್ವಕ್ಕೆ ಮಣಿದು ಪಕ್ಷದ ಪ್ರಚಾರ ಕಾರ್ಯವನ್ನು ನಿಷ್ಠೆಯಿಂದ ಮಾಡಿದವರ ಸಾಲಿನಲ್ಲಿ ಅನೇಕಾನೇಕ ನಾಯಕರು ತೆರೆ ಮರೆಯಲ್ಲಿಯೇ ದುಡಿದವರು.
1951 ರಿಂದ ಶ್ಯಾಮ ಪ್ರಸಾದ್ ಮುಖರ್ಜಿಯವರ ಮುಂದಾಳತ್ವದಲ್ಲಿ ಜನಸಂಘವಾಗಿ ಪರಿಚಯಿಸಲ್ಪಟ್ಟ ಸಿದ್ಧಾಂತ, ಮುಂದೆ ಜನತಾ ಪಾರ್ಟಿಯಾಗಿ 1977 ರಲ್ಲಿ ದೇಶದಲ್ಲಿಯೇ ಪ್ರಥಮ ಬಾರಿಗೆ ಕಾಂಗ್ರೆಸೇತರ ಸರ್ಕಾರವನ್ನು ದೇಶಕ್ಕೆ ನೀಡಿತಾದರು. 1980 ರಲ್ಲಿ ಅಧಿಕೃತವಾಗಿ ಭಾರತೀಯ ಜನತಾ ಪಕ್ಷ ಪ್ರಾರಂಭವಾಯಿತು. ಅಂದಿನಿಂದ ಇಂದಿನವರೆಗೆ ಪಕ್ಷದಲ್ಲಿ ಶ್ರಮಿಸಿ, ಪಕ್ಷ ಸಂಘಟನೆಯನ್ನು ಭಲಪಡಿಸಿ, 1984 ರ ಲೋಕಸಭೆಯಲ್ಲಿ ಕೇವಲ 2 ಸೀಟನ್ನಷ್ಟೇ ಗೆದ್ದರೂ ಭವಿಷ್ಯತ್ತಿನ ಕನಸು ಕಟ್ಟಿಕೊಟ್ಟ ಅಟಲ್ ಬಿಹಾರಿ ವಾಜಪೇಯಿಯವರ ಮಾರ್ಗದರ್ಶನ ದಿಂದ ಮುಂದೆ ಪಕ್ಷ ಸಾಗಿದ್ದು ಮಾತ್ರ ಏರುಗತಿಯಲ್ಲಿ.
ಸುಭದ್ರ ಅಡಿಪಾಯವನ್ನಿಟ್ಟು ಇಂದಿನ ತಲೆಮಾರಿಗೆ ಪಕ್ಷದ ಏಳಿಗೆಯ ಜೊತೆಗೆ ಅಧಿಕಾರವನ್ನು ಧಾರೆಯೆರೆದು, ದೇಶದಲ್ಲಿ ಬಾ.ಜ.ಪ ನಿರ್ಧಾರಿಕ ಸ್ಥಾನದಲ್ಲಿರುವ ಸಂದರ್ಭದಲ್ಲಿ, ಪಕ್ಷವನ್ನು ತಳಮಟ್ಟದಿಂದ ಗಟ್ಟಿಗೊಳಿಸಿದ ನಾಯಕರನ್ನು ಕಳೆದುಕೊಳ್ಳುತ್ತಿರುವುದು ವಿಪರ್ಯಾಸವೇ ಸರಿ.
ಕಾಲ್ನಡಿಗೆಯಲ್ಲಿ ಪಕ್ಷವನ್ನು ಕಟ್ಟಿದ ಅಟಲ್ ಜೀ, ಕರ್ನಾಟಕದಲ್ಲಿ ಶ್ರಮಿಸಿದ ಶ್ರೀ ವಿ ಎಸ್ ಆಚಾರ್ಯ, ಶ್ರೀ ಬಿ ಏನ್ ವಿಜಯಕುಮಾರ್, ಅವರ ಸಾಲಿಗೆ ಶ್ರೀ ಅನಂತ ಕುಮಾರ್ ಇವರೆಲ್ಲ ಅವರೇ ಕಂಡ ಕನಸನ್ನು ಸಾಕಾರಗೊಳಿಸುವ ಹೊತ್ತಿಗೆ ಕಾಲವಾಗುತ್ತಿರುವುದಕ್ಕೆ ವಿಷಾದವೆನಿಸುತ್ತದೆ.
ಇವರ ಆತ್ಮಕ್ಕೆ ಶಾಂತಿ ಸಿಗಲೆಂದು, ಹಾಗೂ ಅವರ ಕುಟುಂಬ ಮತ್ತು ಕಾರ್ಯಕರ್ತರಿಗೆ ಇವರ ಅಗಲುವಿಕೆಯ ನೋವನ್ನು ಸಹಿಸಿ, ಹಿರಿಯರ ಕನಸನ್ನು ಸಾಕಾರ ಗೊಳಿಸಲು ಶಕ್ತಿ ಕೊಡಲೆಂದು ಪ್ರಾರ್ಥಿಸುತ್ತಾ, ನಮ್ಮನ್ನಗಲಿದ ಈ ಚೇತನಗಳಿಗೆ ನನ್ನದೊಂದು ಭಾವಪೂರ್ಣ ಅಕ್ಷರ ನಮನ.