ಬಿಬಿಎಂಪಿ ಅಧಿಕಾರಿಗಳ ನಿರ್ಲಕ್ಷ್ಯ; ಪಾಲಿಕೆಯ ಖಜಾನೆಗೆ 300 ಕೋಟಿ ರೂ. ನಷ್ಟ

ಬೆಂಗಳೂರು, ನ.13- ಬಿಬಿಎಂಪಿ ಅಧಿಕಾರಿಗಳ ನಿರ್ಲಕ್ಷ್ಯ, ಬೇಜವಾಬ್ದಾರಿತನದಿಂದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಖಜಾನೆಗೆ ಬರೋಬ್ಬರಿ 300 ಕೋಟಿ ರೂ. ನಷ್ಟವಾಗಿದೆ ಎಂಬುದು ವಾರ್ಷಿಕ ಲೆಕ್ಕಪರಿಶೋಧಕ ವರದಿಯಿಂದ ಬಹಿರಂಗವಾಗಿದೆ.

2015-16ರ ಸಿಎಜಿ ವರದಿಯಲ್ಲಿ ಈ ಅಂಶ ಬಹಿರಂಗವಾಗಿದ್ದು, ಈ ಸಾಲಿನಲ್ಲಿ ಸಹಾಯಕ ಕಂದಾಯ ಕಚೇರಿಯ ಅಧಿಕಾರಿಗಳ ನಿರ್ಲಕ್ಷ್ಯ ಮತ್ತು ಬೇಜವಾಬ್ದಾರಿತನದಿಂದ 300 ಕೋಟಿಯಷ್ಟು ಹಣ ನಷ್ಟವಾಗಿದೆ ಎಂಬುದು ಅಂಶ ಬೆಳಕಿಗೆ ಬಂದಿದೆ.

ಬಿಬಿಎಂಪಿ ವ್ಯಾಪ್ತಿಯ ವಿವಿಧ ಎಆರ್‍ಒ ಕಚೇರಿಗಳಲ್ಲಿ 2015-16ನೆ ಸಾಲಿನಲ್ಲಿ ಸುಧಾರಣಾ ವೆಚ್ಚವನ್ನೇ ಸ್ವೀಕರಿಸಿಲ್ಲ. ಮತ್ತೆ ಕೆಲವೆಡೆ ನಿಗದಿತ ದರಕ್ಕಿಂತ ಕಡಿಮೆ ಸ್ವೀಕರಿಸಿ ಖಾತೆ ಮಾಡಿಕೊಡಲಾಗಿದೆ. ಬ್ಯಾಟರಾಯನಪುರ ಎಆರ್‍ಒ ಕಚೇರಿ ಥಣಿಸಂದ್ರ ಉಪವಿಭಾಗದಲ್ಲಿ ಸುಮಾರು 79 ಕೋಟಿಯನ್ನು ಅಧಿಕಾರಿಗಳು ವಸೂಲಿ ಮಾಡದೆ ಹಾಗೆಯೇ ಬಿಟ್ಟಿದ್ದಾರೆ. ಅದೇ ರೀತಿ ಕೆಂಗೇರಿ ಉಪವಿಭಾಗದ ಸಹಾಯಕ ಕಂದಾಯ ಅಧಿಕಾರಿಗಳ ಕಚೇರಿಯಲ್ಲಿ 42,44,05,926ರೂ. ವಸೂಲಿ ಮಾಡದೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ.

ಮಾರತ್ತಹಳ್ಳಿ ವಿಭಾಗದಲ್ಲಿ 66 ಕೋಟಿ, ಮಹದೇವಪುರದಲ್ಲಿ 31 ಕೋಟಿ ರೂ.ಗಳನ್ನು ಕಂದಾಯ ಅಧಿಕಾರಿಗಳು ವಸೂಲಿ ಮಾಡದಿರುವುದು ಸಿಎಜಿ ವರದಿಯಲ್ಲಿ ಬಹಿರಂಗವಾಗಿದೆ.

ಇನ್ನು ರಾಜರಾಜೇಶ್ವರಿ ನಗರದಲ್ಲಿ 19 ಕೋಟಿ ರೂ.ಗಳನ್ನು ವಸೂಲಿ ಮಾಡಬೇಕಾಗಿದೆ. ಮಾಡಿರುವ ಕಂದಾಯದ ಎಂಆರ್ (ಮೆಜರ್‍ಮೆಂಟ್ ರಿಜಿಸ್ಟ್ರೇಷನ್) ಕಡತದಲ್ಲಿ ಸುಮಾರು 27 ಲಕ್ಷದಷ್ಟು ಪಾವತಿ ಮಾಡಿರುವುದು ನಮೂದಾಗಿಲ್ಲ. ಯಲಹಂಕ, ಹೇರೋಹಳ್ಳಿ, ಕೂಡಿಗಿಹಳ್ಳಿ, ಮಾರುತಿಸೇವಾ ನಗರ, ಎಚ್‍ಎಸ್‍ಆರ್ ನಗರ, ಪೀಣ್ಯ, ಅಂಜನಾಪುರ ಮುಂತಾದ ಕಡೆ ನಿಗದಿತ ದರಕ್ಕಿಂತ ಕಡಿಮೆ ಪಡೆದು ಖಾತೆ ಮಾಡಿಕೊಡಲಾಗಿದೆ. ಈ ಮೂಲಕ ಸುಮಾರು 300 ಕೋಟಿ ರೂ.ಗಳಷ್ಟು ಹಣವನ್ನು ಬಿಬಿಎಂಪಿ ಖಜಾನೆಗೆ ಅಧಿಕಾರಿಗಳು ನಷ್ಟ ಉಂಟುಮಾಡಿದ್ದಾರೆ ಎಂದು ಸಿಎಜಿ ವರದಿಯಲ್ಲಿ ಉಲ್ಲೇಖ ಮಾಡಲಾಗಿದೆ.

ಬಿಬಿಎಂಪಿ ಆರ್ಥಿಕ ಸಂಕಷ್ಟದಿಂದ ನಲುಗುತ್ತಿದೆ. ಗುತ್ತಿಗೆದಾರರಿಗೆ ಹಣ ಪಾವತಿಸಲಾಗದೆ ಪರಿತಪಿಸುತ್ತಿದೆ. ಹಣಕ್ಕಾಗಿ ಗುತ್ತಿಗೆದಾರರು ನ್ಯಾಯಾಲಯದ ಮೊರೆ ಹೋಗಿರುವ ಸಾಕಷ್ಟು ಉದಾಹರಣೆಗಳು ನಮ್ಮ ಮುಂದಿವೆ. ತೆರಿಗೆ ಪಾವತಿಸಲು ನಗರದ ಜನತೆ ಸಿದ್ಧವಾಗಿದ್ದರೂ ಸಮರ್ಪಕವಾಗಿ ಶುಲ್ಕ ವಸೂಲಿ ಮಾಡಲು ಅಧಿಕಾರಿಗಳು ತಯಾರಿಲ್ಲ.
ಬರೋಬ್ಬರಿ 300 ಕೋಟಿಯಷ್ಟು ತೆರಿಗೆ ವಸೂಲಿ ಮಾಡಿಲ್ಲದಿರುವುದು ಸಿಎಜಿ ವರದಿಯಲ್ಲಿ ಬಹಿರಂಗವಾಗಿರುವುದು ದುರದೃಷ್ಟಕರ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ