ಬರ ಪರಿಸ್ಥಿತಿ ಅಧ್ಯಯನಕ್ಕೆ ಕೇಂದ್ರದ ತಂಡ ಆಗಮಿಸುವ ನಿರೀಕ್ಷೆ

ಬೆಂಗಳೂರು, ನ.13-ರಾಜ್ಯದಲ್ಲಿನ ಬರ ಪರಿಸ್ಥಿತಿ ಅಧ್ಯಯನಕ್ಕೆ ಈ ವಾರದಲ್ಲಿ ಕೇಂದ್ರದ ಅಧ್ಯಯನ ತಂಡ ಆಗಮಿಸುವ ನಿರೀಕ್ಷೆ ಇದೆ. ಮುಂಗಾರು ಹಂಗಾಮಿನಲ್ಲಿ ರಾಜ್ಯದ 100 ತಾಲೂಕುಗಳು ಬರ ಪೀಡಿತವಾಗಿದ್ದು, ತೀವ್ರ ಸಂಕಷ್ಟವನ್ನು ರೈತ ಸಮುದಾಯ ಎದುರಿಸುತ್ತಿದೆ.
ರಾಜ್ಯದಲ್ಲಿ ಸುಮಾರು 16 ಸಾವಿರ ಕೋಟಿ ರೂಪಾಯಿಗೂ ಹೆಚ್ಚು ಬೆಳೆ ಹಾನಿಯಾಗಿದೆ. ಬರಪೀಡಿತ ಪ್ರದೇಶಗಳ ಜನರಿಗೆ ಪರಿಹಾರ ಧನ ನೀಡುವಂತೆ ರಾಜ್ಯ ಸರ್ಕಾರ ಇತ್ತೀಚೆಗಷ್ಟೆ ಮನವಿ ಮಾಡಿತ್ತು.

ರಾಜ್ಯ ಸರ್ಕಾರದ ಮನವಿಯ ಹಿನ್ನೆಲೆಯಲ್ಲಿ ಬರಪೀಡಿತ ಪ್ರದೇಶಗಳ ವಾಸ್ತವ ಸ್ಥಿತಿ ಅರಿಯಲು ಕೇಂದ್ರ ಸರ್ಕಾರ ಅಧ್ಯಯನ ತಂಡವನ್ನು ಇದೇ ವಾರದಲ್ಲಿ ಕಳುಹಿಸಿಕೊಡಲಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಬರಪೀಡಿತ ಪ್ರದೇಶಗಳಿಗೆ 2432 ಕೋಟಿ ರೂ. ಪರಿಹಾರ ನೀಡುವಂತೆ ರಾಜ್ಯಸರ್ಕಾರ ಕೇಂದ್ರಸರ್ಕಾರಕ್ಕೆ ಮನವಿ ಮಾಡಿತ್ತು. ಜಿಲ್ಲಾವಾರು ಮತ್ತು ತಾಲೂಕು ವಾರು ಮಳೆ, ಬೆಳೆ ಪರಿಸ್ಥಿತಿ, ಹಾನಿಯ ಪ್ರಮಾಣ ಒಳಗೊಂಡ ಮನವಿ ಪತ್ರವನ್ನು ಕೇಂದ್ರ ಸರ್ಕಾರಕ್ಕೆ ರಾಜ್ಯ ಸಲ್ಲಿಸಿದೆ. ಅಲ್ಲದೆ, ಬೆಳೆ ಪರಿಸ್ಥಿತಿ ಬಗ್ಗೆ ಸಚಿತ್ರ ಸಹಿತ ಮಾಹಿತಿಯನ್ನೂ ಕೂಡ ನೀಡಲಾಗಿದೆ.

ತೀವ್ರ ಬರಪರಿಸ್ಥಿತಿ ಇರುವ ಜಿಲ್ಲೆಗಳನ್ನು ಆಯ್ಕೆ ಮಾಡಿ ಕೇಂದ್ರದ ಅಧ್ಯಯನ ತಂಡ ಸ್ಥಳ ಪರಿಶೀಲನೆ ನಡೆಸಿ ಕೇಂದ್ರ ಸರ್ಕಾರಕ್ಕೆ ವರದಿ ನೀಡಿದೆ. ಅಧ್ಯಯನ ತಂಡ ನೀಡುವ ವರದಿಯನ್ನು ಆಧರಿಸಿ ಕೇಂದ್ರ ಸರ್ಕಾರ ಬರಪೀಡಿತ ಪ್ರದೇಶಗಳಿಗೆ ಪರಿಹಾರ ಧನ ಮಂಜೂರು ಮಾಡಲಿದೆ ಎಂದು ತಿಳಿಸಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ