ಇಂದು ಅನಂತ್​ ಕುಮಾರ್​ ಅಂತ್ಯಕ್ರಿಯೆ; ಅಂತಿಮ ದರ್ಶನ ಪಡೆಯಲಿರುವ ಶಾ, ರಾಜನಾಥ್​ ಸಿಂಗ್​

ಬೆಂಗಳರು: ಸೋಮವಾರ ವಿಧಿವಶರಾದ ಕೇಂದ್ರ ಸಚಿವ ಅನಂತ್​ ಕುಮಾರ್​ ಅವರ ಪಾರ್ಥಿವ ಶರೀರದ ಅಂತ್ಯಸಂಸ್ಕಾರ ಇಂದು ನಗರದ ಚಾಮರಾಜಪೇಟೆ ರುದ್ರಭೂಮಿಯಲ್ಲಿ ನೆರವೇರಲಿದೆ.
ಸಾರ್ವಜನಿಕರ ದರ್ಶನಕ್ಕೆ ಅನಂತ್​ ಕುಮಾರ್​ ಪಾರ್ಥಿವ ಶರೀರವನ್ನು ಅವರ ನಿವಾಸದಲ್ಲೇ ಇಡಲಾಗಿತ್ತು. ಮುಖ್ಯಮಂತ್ರಿ ಹೆಚ್​.ಡಿ. ಕುಮಾರಸ್ವಾಮಿ, ಪ್ರಧಾನಿ ನರೇಂದ್ರ ಮೋದಿ ಸೇರಿ ಅನೇಕ ಗಣ್ಯರು ಅವರ ಅಂತಿಮ ದರ್ಶನ ಪಡೆದಿದ್ದರು. ಇಂದು ಅನಂತ್​ ಕುಮಾರ್​ ಪಾರ್ಥಿವ ಶರೀರವನ್ನು ಬೆಳಗ್ಗೆ 8ರಿಂದ 10 ಹತ್ತು ಗಂಟೆಯವರೆಗೆ ಬಿಜೆಪಿ ಕಚೇರಿಯಲ್ಲಿ ಇಡಲಾಗುತ್ತದೆ. ಕಾರ್ಯಕರ್ತರು, ಮುಖಂಡರು ಅಂತಿಮ ನಮನ ಸಲ್ಲಿಸಿದ ಬಳಿಕ‌ ಬಸವನಗುಡಿ ನ್ಯಾಷನಲ್ ‌ಕಾಲೇಜು ಮೈದಾನಕ್ಕೆ ಪಾರ್ಥಿವ ಶರೀರ ರವಾನೆಯಾಗುತ್ತದೆ. ಅಲ್ಲಿ ಸಾರ್ವಜನಿಕರು ಅಂತಿಮ ದರ್ಶನ ಪಡೆದ ನಂತರ ಪಾರ್ಥಿವ ಶರೀರವನ್ನು ಮಧ್ಯಾಹ್ನ 1 ಗಂಟೆಗೆ ರುದ್ರಭೂಮಿಗೆ ಕೊಂಡೊಯ್ಯಲಾಗುತ್ತದೆ.
ಅಮಿತ್​ ಷಾ, ರಾಜನಾಥ್​ ಸಿಂಗ್​ ಅವರು ಇಂದು ಬೆಂಗಳೂರಿಗೆ ಆಗಮಿಸಲಿದ್ದಾರೆ. ಅವರು ಅಂತ್ಯಸಂಸ್ಕಾರದಲ್ಲೂ ಪಾಲ್ಗೊಳ್ಳಲಿದ್ದಾರೆ. ಸ್ಮಾರ್ತ ಬ್ರಾಹ್ಮಣ ಸಂಪ್ರದಾಯದ ಪ್ರಕಾರ ವಿಧಿ ವಿಧಾನಗಳು ನೆರವೇರಲಿವೆ. ಕೆಲ ತಿಂಗಳಿಂದ ಕ್ಯಾನ್ಸರ್​ನಿಂದ ಬಳಲುತ್ತಿದ್ದ ಅನಂತ್​ ಕುಮಾರ್​ ಸೋಮವಾರ ಮುಂಜಾನೆ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದರು.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ