ಶಾಲಾ-ಕಾಲೇಜಿಗೆ ಸರ್ಕಾರಿ ರಜೆ; ರಾಜ್ಯದ ಎಲ್ಲ ವಿವಿ ಪರೀಕ್ಷೆ ಮುಂದೂಡಿಕೆ

ಬೆಂಗಳೂರು: ಕೇಂದ್ರ ಸಚಿವ ಅನಂತಕುಮಾರ್ ನಿಧನದ ಹಿನ್ನಲೆಯಲ್ಲಿ ಇಂದು ಎಲ್ಲ ಸರ್ಕಾರಿ ಮತ್ತು ಖಾಸಗಿ ಶಾಲಾ-ಕಾಲೇಜಿಗೆ ಸರ್ಕಾರಿ ರಜೆಯನ್ನು ಘೋಷಣೆ ಮಾಡಲಾಗಿದೆ. ಅಂತೆಯೇ ರಾಜ್ಯ ವಿಶ್ವವಿದ್ಯಾಲಯಗಳಲ್ಲಿ ನಡೆಯಬೇಕಿದ್ದ ಪರೀಕ್ಷೆಗಳನ್ನೂ ಮುಂದೂಡಿಕೆ ಮಾಡಲಾಗಿದೆ.

ಕೇಂದ್ರ ಸಚಿವರಾಗಿರುವ ಹಿನ್ನೆಲೆಯಲ್ಲಿ ದೇಶದಾದ್ಯಂತ ಶೋಕಾಚರಣೆ ಮಾಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸಂತಾಪ‌ ಸೂಚಕವಾಗಿ ರಾಜ್ಯ ಸರ್ಕಾರ ಸರ್ಕಾರ ರಜೆ ಘೋಷಿಸಿದೆ. ಈ ವೇಳೆ ಯಾವುದೇ ಸರ್ಕಾರಿ ಕಾರ್ಯಕ್ರಮಗಳು, ಸಮಾರಂಭಗಳ ಆಯೋಜನೆ ಮಾಡದಂತೆ‌ ಸುತ್ತೋಲೆ ಹೊರಡಿಸಿದೆ.
ಈ ನಡುವೆ ಮೈಸೂರು ವಿವಿ ಪದವಿ ಪರೀಕ್ಷೆಗಳನ್ನು ಮುಂದೂಡಿಕೆ ಮಾಡಿ ಮೈಸೂರು ವಿವಿ ಆದೇಶ ಹೊರಡಿಸಿದೆ. ಇತರೆ ವಿವಿಗಳ ಪರೀಕ್ಷೆಗಳು ಇದ್ದರೂ ಮುಂದೂಡುವಂತೆ ಶಿಕ್ಷಣ ಇಲಾಖೆ ವಿವಿಗಳಿಗೆ ಸೂಚನೆ ನೀಡಿದೆ.
ಇನ್ನು ಧಾರವಾಡ ಕರ್ನಾಟಕ ವಿವಿ ಪದವಿ ಪರೀಕ್ಷೆಗಳನ್ನು ಕೂಡ ಮುಂದೂಡಲಾಗಿದೆ. ಕರ್ನಾಟಕ ವಿವಿ ವ್ಯಾಪ್ತಿಯ ಕಾಲೇಜುಗಳಿಗೆ ಅನ್ವಯವಾಗುವಂತೆ ಕವಿವಿ ಕುಲಸಚಿವ ಕೆ ಎಂ ಹೊಸಮನಿ ಈ ಬಗ್ಗೆ ತಿಳಿಸಿದ್ದಾರೆ. ಮುಂದೂಡಲ್ಪಟ್ಟ ಪರೀಕ್ಷೆಯ ದಿನಾಂಕವನ್ನು ಮುಂದಿನ ದಿನಗಳಲ್ಲಿ ತಿಳಿಸಲಾಗುವುದು ಎಂದು ಕುಲಸಚಿವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅಲ್ಲದೆ ಮಂಗಳೂರು ವಿಶ್ವವಿದ್ಯಾನಿಲಯದ ಪದವಿ ಪರೀಕ್ಷೆಯನ್ನು ಕೂಡಾ ಮುಂದೂಡಲಾಗಿದೆ. ಮಂಗಳೂರು ವಿಶ್ವವಿದ್ಯಾನಿಲಯದ ಪದವಿ ಸೆಮಿಸ್ಟರ್ ಪರೀಕ್ಷೆಗಳು ನಡೆಯುತ್ತಿದ್ದು, ಪರೀಕ್ಷೆಗಳನ್ನು ಮುಂದೂಡಲಾಗಿದೆ ಎಂದು ಕುಲಸಚಿವ ಎ ಎಂ ಖಾನ್ ತಿಳಿಸಿದ್ದಾರೆ. ಮುಂದೂಡಲಾದ ಪರೀಕ್ಷಾ ದಿನಾಂಕವನ್ನು ಶೀಘ್ರವೇ ಪ್ರಕಟಿಸುವುದಾಗಿ ತಿಳಿಸಿದ್ದಾರೆ.
ಇನ್ನು ಕುವೆಂಪು ವಿಶ್ವವಿದ್ಯಾನಿಲಯ ವ್ಯಾಪ್ತಿಯಲ್ಲಿ ಇಂದು ನಡೆಯಬೇಕಿದ್ದ ಎಲ್ಲಾ ಪರೀಕ್ಷೆಗಳನ್ನು  ಮುಂದೂಡಲಾಗಿದೆ ಎಂದು ವಿವಿ ಕುಲಪತಿ ಪ್ರೊ. ಜೋಗನ್ ಶಂಕರ್ ತಿಳಿಸಿದ‌್ದಾರೆ. ಇಂದು ನಡೆಯಬೇಕಿದ್ದ ಕುವೆಂಪು ವಿಶ್ವವಿದ್ಯಾಲಯದ ಎಲ್ಲಾ ಪದವಿ ಪರೀಕ್ಷೆಯನ್ನು ಮುಂದೂಡಲಾಗಿದೆ. ಮುಂದಿನ ಪರೀಕ್ಷಾ ದಿನಾಂಕ ಶೀಘ್ರವಾಗಿ ಪ್ರಕಟಿಸಲಾಗುತ್ತದೆ ಎಂದು ತಿಳಿಸಿದ್ದಾರೆ.
ಹಾಗೆಯೇ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಕಚೇರಿಗಳಿಗೆ (ತುರ್ತು ಸೇವೆ ಹೊರತು ಪಡಿಸಿ – ಆರೋಗ್ಯ, ಮಾರುಕಟ್ಟೆ) ಮೃತರ ಗೌರವಾರ್ಥ ರಜೆಯನ್ನು ಮಹಾಪೌರರು ಹಾಗೂ  ಆಯುಕ್ತರು ಘೋಷಿಸಿದ್ದಾರೆ.
ಅಲ್ಲದೆ ಇಂದು ಬೆಂಗಳೂರಿನ ಜ್ಞಾನಭಾರತಿ ಕ್ಯಾಂಪಸ್​ನಲ್ಲಿ ನಡೆಯಬೇಕಿದ್ದ ಎಂಬಿಎ ಸೀಟು ಹಂಚಿಕೆ ಮತ್ತು ಕೌನ್ಸಿಲಿಂಗ್ ಪ್ರಕ್ರಿಯೆಯನ್ನ ನಾಳೆಗೆ ಮುಂದೂಡಲಾಗಿದೆ. ಈ ಸಂಬಂಧ ಸಿಬಿಎಸ್​ಎಂಎಸ್ ಪ್ರಕಟಣೆಯಲ್ಲಿ ತಿಳಿಸಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ