ಛತ್ತೀಸ್​ಗಢ ಚುನಾವಣೆ: 18 ಕ್ಷೇತ್ರಗಳ ಮತದಾನಕ್ಕೆ 1 ಲಕ್ಷ ಭದ್ರತಾ ಸಿಬ್ಬಂದಿ, ಡ್ರೋನ್​ಗಳಿಂದ ಬಿಗಿಪಹರೆ

ರಾಯಪುರ್: ಛತ್ತೀಸ್​ಗಡ ವಿಧಾನಸಭೆ ಚುನಾವಣೆಯ ಮೊದಲ ಹಂತದ ಮತದಾನ ಸೋಮವಾರ ನಡೆಯುತ್ತಿದೆ. ನಕ್ಸಲ್​ಪೀಡಿತ ಪ್ರದೇಶಗಳಲ್ಲಿನ 18 ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ. ಚುನಾವಣೆ ಬಹಿಷ್ಕರಿಸುವಂತೆ ಜನರಿಗೆ ಕರೆಕೊಟ್ಟಿರುವ ನಕ್ಸಲರು, ಭಾನುವಾರ ಘೋರ ದಾಳಿ ನಡೆಸಿ ಒಬ್ಬ ಬಿಎಸ್​ಎಫ್ ಯೋಧನನ್ನು ಬಲಿತೆಗೆದುಕೊಂಡು ಜನರಿಗೆ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ. ಕಳೆದ ಹಲವು ದಿನಗಳಿಂದಲೂ ಮಾವೋವಾದಿಗಳು ಅಲ್ಲಲ್ಲಿ ದಾಳಿಗಳನ್ನ ಮಾಡುತ್ತಲೇ ಬಂದಿದ್ದಾರೆ. 13ಕ್ಕೂ ಹೆಚ್ಚು ಜನರು ಬಲಿಯಾಗಿದ್ದಾರೆ. ಕಳೆದ 10 ದಿನಗಳಲ್ಲಿ ರಾಜನಂದಗಾಂವ್ ಮತ್ತು ಬಸ್ತಾರ್ ಪ್ರದೇಶಗಳಲ್ಲಿ 300ಕ್ಕೂ ಹೆಚ್ಚು ಐಇಡಿ ಬಾಂಬ್​ಗಳು ಪತ್ತೆಯಾಗಿವೆ.

ನಕ್ಸಲ್ ಪೀಡಿತ 8 ಜಿಲ್ಲೆಗಳ 18 ಕ್ಷೇತ್ರಗಳಲ್ಲಿ ಭದ್ರತೆಯನ್ನು ಸಾಕಷ್ಟು ಬಿಗಿಗಳಿಸಲಾಗಿದೆ. ಒಂದು ಲಕ್ಷದಷ್ಟು ಭದ್ರತಾ ಸಿಬ್ಬಂದಿಯಲ್ಲಿ ಈ ಕ್ಷೇತ್ರಗಳಿಗೆ ನಿಯೋಜನೆ ಮಾಡಲಾಗಿದೆ. ಅರೆಸೇನಾ ಪಡೆಗಳಾದ ಸಿಆರ್​ಪಿಎಫ್, ಬಿಎಸ್​ಎಫ್, ಇಂಡೋ-ಟಿಬೆಟ್ ಗಡಿ ಪೊಲೀಸರನ್ನು ಬಳಕೆ ಮಾಡಲಾಗುತ್ತಿದೆ. ನೆರೆ ರಾಜ್ಯದ ಪೊಲೀಸರನ್ನೂ ರಕ್ಷಣೆಗೆ ಕರೆತರಲಾಗಿದೆ. ಡ್ರೋನ್​ಗಳ ಮೂಲಕ ನಿರಂತರವಾಗಿ ಪರಿಸ್ಥಿತಿಯನ್ನು ಅವಲೋಕಿಸಲಾಗುತ್ತಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ