ರಾಯಪುರ್: ಛತ್ತೀಸ್ಗಡ ವಿಧಾನಸಭೆ ಚುನಾವಣೆಯ ಮೊದಲ ಹಂತದ ಮತದಾನ ಸೋಮವಾರ ನಡೆಯುತ್ತಿದೆ. ನಕ್ಸಲ್ಪೀಡಿತ ಪ್ರದೇಶಗಳಲ್ಲಿನ 18 ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ. ಚುನಾವಣೆ ಬಹಿಷ್ಕರಿಸುವಂತೆ ಜನರಿಗೆ ಕರೆಕೊಟ್ಟಿರುವ ನಕ್ಸಲರು, ಭಾನುವಾರ ಘೋರ ದಾಳಿ ನಡೆಸಿ ಒಬ್ಬ ಬಿಎಸ್ಎಫ್ ಯೋಧನನ್ನು ಬಲಿತೆಗೆದುಕೊಂಡು ಜನರಿಗೆ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ. ಕಳೆದ ಹಲವು ದಿನಗಳಿಂದಲೂ ಮಾವೋವಾದಿಗಳು ಅಲ್ಲಲ್ಲಿ ದಾಳಿಗಳನ್ನ ಮಾಡುತ್ತಲೇ ಬಂದಿದ್ದಾರೆ. 13ಕ್ಕೂ ಹೆಚ್ಚು ಜನರು ಬಲಿಯಾಗಿದ್ದಾರೆ. ಕಳೆದ 10 ದಿನಗಳಲ್ಲಿ ರಾಜನಂದಗಾಂವ್ ಮತ್ತು ಬಸ್ತಾರ್ ಪ್ರದೇಶಗಳಲ್ಲಿ 300ಕ್ಕೂ ಹೆಚ್ಚು ಐಇಡಿ ಬಾಂಬ್ಗಳು ಪತ್ತೆಯಾಗಿವೆ.
ನಕ್ಸಲ್ ಪೀಡಿತ 8 ಜಿಲ್ಲೆಗಳ 18 ಕ್ಷೇತ್ರಗಳಲ್ಲಿ ಭದ್ರತೆಯನ್ನು ಸಾಕಷ್ಟು ಬಿಗಿಗಳಿಸಲಾಗಿದೆ. ಒಂದು ಲಕ್ಷದಷ್ಟು ಭದ್ರತಾ ಸಿಬ್ಬಂದಿಯಲ್ಲಿ ಈ ಕ್ಷೇತ್ರಗಳಿಗೆ ನಿಯೋಜನೆ ಮಾಡಲಾಗಿದೆ. ಅರೆಸೇನಾ ಪಡೆಗಳಾದ ಸಿಆರ್ಪಿಎಫ್, ಬಿಎಸ್ಎಫ್, ಇಂಡೋ-ಟಿಬೆಟ್ ಗಡಿ ಪೊಲೀಸರನ್ನು ಬಳಕೆ ಮಾಡಲಾಗುತ್ತಿದೆ. ನೆರೆ ರಾಜ್ಯದ ಪೊಲೀಸರನ್ನೂ ರಕ್ಷಣೆಗೆ ಕರೆತರಲಾಗಿದೆ. ಡ್ರೋನ್ಗಳ ಮೂಲಕ ನಿರಂತರವಾಗಿ ಪರಿಸ್ಥಿತಿಯನ್ನು ಅವಲೋಕಿಸಲಾಗುತ್ತಿದೆ.