ಬೆಂಗಳೂರು, ನ.12- ಇಂದು ನಿಧನರಾದ ಕೇಂದ್ರ ಸಚಿವ ಅನಂತಕುಮಾರ್ ರಾಜಕೀಯ ವಲಯದಲ್ಲಿ ಸೋಲಿಲ್ಲದ ಸರದಾರರಾಗಿದ್ದರು.
ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಿಂದ ಸತತ ಆರು ಬಾರಿ ಗೆದ್ದು ದಾಖಲೆ ನಿರ್ಮಿಸಿದ್ದ ಅನಂತಕುಮಾರ್, ಬಿಜೆಪಿಯಲ್ಲಿ ಭವಿಷ್ಯದಲ್ಲಿ ಇನ್ನೂ ದೊಡ್ಡ ಹುದ್ದೆಗೇರುವ ಲಕ್ಷಣಗಳಿದ್ದವು.
1996ರಿಂದ 2014ರವರೆಗೂ ಎದುರಿಸಿದ ಆರು ಚುನಾವಣೆಯಲ್ಲಿ ಗೆದ್ದು ಬಿಜೆಪಿಯಲ್ಲಿ ದಾಖಲೆಯಲ್ಲಿ ನಿರ್ಮಿಸಿದ್ದಾರೆ. ಈ ಹಿಂದೆ ಚಿಕ್ಕೋಡಿ ಲೋಕಸಭಾ ಕ್ಷೇತ್ರದಿಂದ ಮಾಜಿ ಸಚಿವ ಬಿ.ಶಂಕರಾನಂದ ಅವರು ಸತತ ಐದು ಬಾರಿ ಗೆದ್ದು ದಾಖಲೆ ನಿರ್ಮಿಸಿದ್ದರು. ಈ ದಾಖಲೆಯನ್ನು ಅವರದೇ ಪಕ್ಷದ ಅಭ್ಯರ್ಥಿ ಮುರಿದಿದ್ದು ಮತ್ತೊಂದು ವಿಶೇಷ.
ಕೋಲಾರ ಮೀಸಲು ಲೋಕಸಭಾ ಕ್ಷೇತ್ರದಿಂದ ಕೆ.ಎಚ್. ಮುನಿಯಪ್ಪ ಏಳು ಬಾರಿ ಗೆದ್ದಿದ್ದರೆ ನಂತರದ ಸ್ಥಾನ ಅವರಿಗೆ ಸಲ್ಲುತ್ತದೆ. 1996ರಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಜನತಾದಳ ಅಧಿಕಾರದಲ್ಲಿತ್ತು.
ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿ ಮಾಜಿ ಮುಖ್ಯಮಂತ್ರಿ ದಿ.ಗುಂಡೂರಾವ್ ಅವರ ಪತ್ನಿ ವರಲಕ್ಷ್ಮಿ ಗುಂಡೂರಾವ್ ಎದುರು ಅನಂತಕುಮಾರ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು. ಆ ಸಂದರ್ಭದಲ್ಲಿ ಅನಂತಕುಮಾರ್ ಅಷ್ಟೊಂದು ಮತದಾರರಿಗೆ ಚಿರಪರಿಚಿತರಾಗಿರಲಿಲ್ಲ.
ವರಲಕ್ಷ್ಮೀ ಗುಂಡೂರಾವ್ ಎದುರು ಅನಂತಕುಮಾರ್ ಸೋಲಲಿದ್ದಾರೆ ಎಂದು ಬಹುತೇಕರು ಭಾವಿಸಿದ್ದರು. ಇತ್ತ ಜನತಾ ದಳದ ಆರ್ಭಟ ಜೋರಾಗಿದ್ದರೆ, ಮತ್ತೊಂದೆಡೆ ಗುಂಡೂರಾವ್ ಹೆಸರು ಪತ್ನಿಯ ಬೆನ್ನಿಗಿತ್ತು.
ಆದರೆ ಚುನಾವಣಾ ಫಲಿತಾಂಶ ಪ್ರಕಟಗೊಂಡಾಗ ಅಚ್ಚರಿಯ ಫಲಿತಾಂಶ ಹೊರಬಿದ್ದಿತ್ತು. ಯಾರೂ ಕೂಡ ಊಹೆ ಮಾಡದ ರೀತಿಯಲ್ಲಿ ಅನಂತಕುಮಾರ್ ಮೊದಲ ಬಾರಿಗೆ ಗೆದ್ದು ಲೋಕಸಭೆ ಪ್ರವೇಶಿಸಿದರು. ಖುದ್ದು ಬಿಜೆಪಿಯವರು ಕೂಡ ಈ ಕ್ಷೇತ್ರದಿಂದ ಗೆಲ್ಲುತ್ತಾರೆ ಎಂದು ಭಾವಿಸಿರಲಿಲ್ಲ. ನಂತರ ಆನೆ ನಡೆದದ್ದೇ ದಾರಿ ಎಂಬಂತೆ ಹಿಂದಿರುಗಿ ನೋಡಲಿಲ್ಲ.
1998ರಲ್ಲಿ ಇದೇ ಕ್ಷೇತ್ರದಿಂದ 2ನೆ ಬಾರಿಗೆ ಕಾಂಗ್ರೆಸ್ ಅಭ್ಯರ್ಥಿ ಡಿ.ಪಿ. ಶರ್ಮಾ ಅವರನ್ನು ಪರಾಭವಗೊಳಿಸಿ 2ನೆ ಬಾರಿಗೆ ಲೋಕಸಭೆ ಪ್ರವೇಶಿಸಿದರು. ಅಂದು ಪ್ರಧಾನಿಯಾಗಿದ್ದ ಅಟಲ್ ಬಿಹಾರಿ ವಾಜಪೇಯಿ ಅವರು ಒಂದು ಮತಗಳ ಅಂತರದಿಂದ ಸರ್ಕಾರ ಪತನಗೊಂಡಿತ್ತು.
1999ರಲ್ಲಿ ಲೋಕಸಭೆ ಚುನಾವಣೆ ನಡೆದಾಗ 3ನೆ ಬಾರಿಗೆ ಇದೇ ಕ್ಷೇತ್ರದಿಂದ ಅದೃಷ್ಟವನ್ನು ಪಣಕ್ಕಿಟ್ಟು ಕಣಕ್ಕಿಳಿದವರು ಅನಂತಕುಮಾರ್. ಈ ವೇಳೆ ಕಾಂಗ್ರೆಸ್ನಿಂದ ಬಿ.ಕೆ.ಹರಿಪ್ರಸಾದ್ ಅವರು ಇಲ್ಲಿಂದ ಸ್ಪರ್ಧಿಸಿದ್ದರು. ಈ ಚುನಾವಣೆಯಲ್ಲಿಯೂ ಅನಂತಕುಮಾರ್ ಗೆದ್ದು ಹ್ಯಾಟ್ರಿಕ್ ಬಾರಿಸಿದ್ದರು.
2004ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಲೇಔಟ್ ಕೃಷ್ಣಪ್ಪ ಅವರನ್ನು ಸೋಲಿಸಿ ನಾಲ್ಕನೇ ಬಾರಿಗೆ ಅನಾಯಾಸವಾಗಿ ಲೋಕಸಭೆಗೆ ಆಯ್ಕೆಯಾದರು.
2009ರಲ್ಲಿ ಐದನೇ ಚುನಾವಣೆಯ ವೇಳೆ ಅನಂತಕುಮಾರ್ ಪರಾಭವಗೊಳ್ಳಬಹುದು ಎಂದು ನಿರೀಕ್ಷಿಸಲಾಗಿತ್ತು. ಅಂದು ಅವರೆದುರು ಕಾಂಗ್ರೆಸ್ ಅಭ್ಯರ್ಥಿ ಯುವ ನಾಯಕ ಕೃಷ್ಣಬೈರೇಗೌಡ ಸ್ಪರ್ಧಿಸಿದ್ದರು.
ಆದರೆ ಅಂದು ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದ ಕಾರಣ ಅನಂತಕುಮಾರ್ ತೀವ್ರ ಪೈಪೆÇೀಟಿ ನಡುವೆಯೂ ಐದನೇ ಬಾರಿ ಲೋಕಸಭೆ ಪ್ರವೇಶಿಸಿದರು.
2014ರಲ್ಲಿ ನಡೆದ ಆರನೇ ಚುನಾವಣೆಯಲ್ಲಿ ಅನಂತಕುಮಾರ್ ದಾಖಲೆ ಮತಗಳ ಅಂತರದಿಂದ ಗೆದ್ದರು. ಈ ಬಾರಿ ಕಾಂಗ್ರೆಸ್ನಿಂದ ಅವರು ಇನ್ಫೋಸಿಸ್ ಕಂಪನಿಯ ಸಂಸ್ಥಾಪಕರಲ್ಲಿ ಒಬ್ಬರಾದ ನಂದನ್ ನಿಲೇಕಣಿ ಅವರು ಪ್ರತಿಸ್ಪರ್ಧಿಯಾಗಿದ್ದರು. ಕೇಂದ್ರದಲ್ಲಿ ಯುಪಿಎ ಸರ್ಕಾರ ಅಧಿಕಾರದಲ್ಲಿರುವುದು ಒಂದೆಡೆಯಾದರೆ, ಆಧಾರ್ ಕಾರ್ಡ್ ಯೋಜನೆಯ ರೂವಾರಿ ನಿಲೇಕಣಿ ಅವರು ಸ್ಪರ್ಧಿಯಾಗಿದ್ದರು.
ದೇಶದಲ್ಲಿ ಬೀಸಿದ ನರೇಂದ್ರ ಮೋದಿ ಅಲೆಯಿಂದಾಗಿ ಹಿಂದಿನ ದಾಖಲೆಗಳನ್ನು ಮುರಿದು 2 ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಅನಂತಕುಮಾರ್ ಗೆದ್ದು ಕೇಂದ್ರದಲ್ಲಿ ಸಚಿವರಾದರು.
ವಿಶೇಷವೆಂದರೆ ಆರೂ ಚುನಾವಣೆಗಳಲ್ಲಿಯೂ ಅನಂತಕುಮಾರ್ ಕಾಂಗ್ರೆಸ್ನಿಂದ ಒಬ್ಬೊಬ್ಬ ಅಭ್ಯರ್ಥಿಯನ್ನು ಎದುರಿಸಿ ವಿಜೇತರಾಗಿದ್ದರು.