ಬೆಂಗಳೂರು, ನ.12- ತಮ್ಮ ಇಳಿ ವಯಸ್ಸಿನಲ್ಲಿ ಬಾಲ್ಯ ಕಳೆದ ಹುಟ್ಟೂರಾದ ದೇವನಹಳ್ಳಿ ಸಮೀಪದ ಹೆಗ್ಗನಹಳ್ಳಿಯಲ್ಲಿ ಕಾಲ ಕಳೆಯಬೇಕೆಂಬ ಅನಂತಕುಮಾರ್ ಅವರ ಆಸೆ ಕೊನೆಗೂ ಈಡೇರಲಿಲ್ಲ.
13ನೆ ವಯಸ್ಸಿನವರೆಗೂ ಹೆಗ್ಗನಹಳ್ಳಿಯಲ್ಲಿ ಸಾಮಾನ್ಯ ಜೀವನ ಸಾಗಿಸಿದ ಅನಂತಕುಮಾರ್ ಅವರು ನಂತರ ಅವರ ಕುಟುಂಬ ಹುಬ್ಬಳ್ಳಿಗೆ ವಲಸೆ ಹೋಗಿತ್ತು.
ಆದರೂ ಅನಂತಕುಮಾರ್ ಅವರಿಗೆ ತಾವು ಹುಟ್ಟಿ , ಬೆಳೆದ ಊರು ಮತ್ತು ತಮ್ಮ ಹಳೆಯ ಮನೆಯ ಬಗ್ಗೆ ಅಪಾರ ಅಭಿಮಾನವಿತ್ತು. ಹೀಗಾಗಿ ತಮ್ಮ ಇಳಿ ವಯಸ್ಸಿನಲ್ಲಿ ತಮ್ಮ ಹುಟ್ಟೂರಲ್ಲೇ ನೆಲೆಸುವ ಇಂಗಿತ ವ್ಯಕ್ತಪಡಿಸಿದ್ದರು.
ಆದರೆ ವಿಧಿ ಆಟವೇ ಬೇರೆಯಾಗಿತ್ತು. ಅವರ ಆಸೆ ಪೂರೈಕೆಗೂ ಮುನ್ನವೇ ಕಾಲನ ಕರೆಗೆ ಅನಂತಕುಮಾರ್ ಓಗೊಟ್ಟರು. ತಮ್ಮೂರಲ್ಲಿ ಹುಟ್ಟಿ ಬೆಳೆದ ಅನಂತಕುಮಾರ್ ಅವರ ಬಗ್ಗೆ ಹೆಗ್ಗನಹಳ್ಳಿಯ ಜನರಿಗೆ ವಿಶೇಷ ಒಲವಿತ್ತು. ಇದೀಗ ಅವರ ನಿಧನದಿಂದ ಇಡೀ ಗ್ರಾಮವೇ ದುಃಖದ ಮಡುವಿನಲ್ಲಿ ಮುಳುಗಿದೆ.
ನಮ್ಮೂರಲ್ಲಿ ಆಟ ಆಡಿಕೊಂಡು ಬೆಳೆದ ಯುವಕ ಇಂದು ಇಡೀ ದೇಶವೇ ಹೆಮ್ಮೆ ಪಡುವಂತಹ ಸ್ಥಾನ ಪಡೆದು ಇಹ ಲೋಕ ತ್ಯಜಿಸಿರುವುದರಿಂದ ಹೆಗ್ಗನಹಳ್ಳಿಯಲ್ಲಿ ಅನಂತಕುಮಾರ್ ಅವರ ಸ್ಮರಣಾರ್ಥ ಅನಾಥಾಶ್ರಮ ಸ್ಥಾಪಿಸಲು ಸ್ಥಳೀಯರು ತೀರ್ಮಾನಿಸಿದ್ದಾರೆ.
ಹೆಗ್ಗನಹಳ್ಳಿಯಲ್ಲಿ ಇಂದಿಗೂ ಅನಂತಕುಮಾರ್ ಅವರ ಸ್ವಂತ ಹೆಂಚಿನ ಮನೆ ಮತ್ತು ಸಂಬಂಧಿಕರ ಮನೆಗಳಿವೆ. ಸಮಯ ಸಿಕ್ಕಾಗಲೆಲ್ಲಾ ತಮ್ಮೂರಿಗೆ ತೆರಳಿ ಊರಿನವರ ಕಷ್ಟ ಸುಖ ವಿಚಾರಿಸುತ್ತಿದ್ದರು.
ಎರಡು ತಿಂಗಳ ಹಿಂದೆಯಷ್ಟೇ ದಂಪತಿ ಸಮೇತ ಊರಿಗೆ ಆಗಮಿಸಿದ್ದ ಅನಂತಕುಮಾರ್ ಅವರು ಊರಿನ ಆಂಜನೇಯ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದನ್ನು ಸ್ಮರಿಸಿಕೊಂಡು ಕಣ್ಣೀರಿಡುತ್ತಿದ್ದಾರೆ ಹೆಗ್ಗನಹಳ್ಳಿ ಜನ.