ಬೆಂಗಳೂರು: ಕೇಂದ್ರ ಸಚಿವ ಅನಂತ್ಕುಮಾರ್ ನಿಧನರಾಗಿದ್ದು, ಅವರ ನಿಧನಕ್ಕೆ ಎಲ್ಲೆಡೆ ಶೋಕ ವ್ಯಕ್ತವಾಗಿದೆ. ಅನಂತ್ಕುಮಾರ್ ಅವರ ಹಿನ್ನೆಲೆಯೇನು? ರಾಜಕೀಯದಲ್ಲಿ ಅವರು ನಡೆದ ಬಂದ ಹಾದಿಯ ಬಗ್ಗೆ ಇಲ್ಲಿದೆ ಮೆಲುಕು.
1959 ರ ಜುಲೈ 22 ರಂದು ಹೆಚ್.ಎನ್ ನಾರಾಯಣ ಶಾಸ್ತ್ರಿ ಮತ್ತು ಗಿರಿಜಾ ಶಾಸ್ತ್ರಿ ದಂಪತಿಗೆ ಜನಿಸಿದ್ದ ಅನಂತ್ ಕುಮಾರ್ ಹುಬ್ಬಳ್ಳಿಯ ಕೆ.ಎಸ್. ಕಲಾ ಕಾಲೇಜಿನಲ್ಲಿ ಪದವಿ ಮತ್ತು ಜೆಎಸ್ಎಸ್ ಕಾನೂನು ಕಾಲೇಜಿನಲ್ಲಿ ಎಲ್ಎಲ್ಬಿ ಮುಗಿಸಿದ್ದರು.
ಡಾ.ತೇಜಸ್ವಿನಿ ಅವರೊಂದಿಗೆ ವಿವಾಹ ಆಗಿದ್ದು ಐಶ್ವರ್ಯ ಮತ್ತು ವಿಜೇತ ಎನ್ನುವ ಇಬ್ಬರು ಪುತ್ರಿಯರನ್ನು ಅನಂತ್ಕುಮಾರ್ ಹೊಂದಿದ್ದರು.
ವಿದ್ಯಾರ್ಥಿ ದಿಸೆಯಲ್ಲಿಯೇ ನಾಯಕತ್ವದ ಗುಣವನ್ನು ಅಳವಡಿಸಿಕೊಂಡು ಎಬಿವಿಪಿ ಸಂಘಟನೆಯಲ್ಲಿ ತೊಡಗಿಕೊಂಡು ಇಂದಿರಾಗಾಂಧಿ ಹೇರಿದ್ದ ತುರ್ತು ಪರಿಸ್ಥಿತಿಯಲ್ಲಿ ನೂರಾರು ವಿದ್ಯಾರ್ಥಿಗಳೊಂದಿಗೆ ಜೈಲು ಸೇರಿದ್ದರು. ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ನ ರಾಜ್ಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿ 1985 ರಲ್ಲಿ ಎಬಿವಿಪಿಯ ರಾಷ್ಟ್ರೀಯ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದರು.1986 ರಲ್ಲಿ ಎಬಿವಿಪಿ ಮೂಲಕ ಬಿಜೆಪಿಗೆ ಸೇರ್ಪಡೆಯಾದ ಅನಂತ್ ಕುಮಾರ್ ರಾಜ್ಯ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಸ್ಥಾನದ ಜವಾಬ್ದಾರಿ ನಿರ್ವಹಿಸಿದರು.
ಅವರ ಸಂಘಟನಾ ಚತುರತೆ ನೋಡಿದ ನಾಯಕರು 1996 ರಲ್ಲಿ ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿಯಾಗಿ ನೇಮಕಗೊಳಿಸಿದರು.
1996 ರಲ್ಲಿ ನಡೆದ 11 ನೇ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ನಂತರ 1998 ರಲ್ಲಿ ನಡೆದ ಚುನಾವಣೆಯಲ್ಲಿಯೂ ಮರು ಆಯ್ಕೆಯಾಗಿ ಅಟಲ್ ಬಿಹಾರಿ ವಾಜಪೇಯಿ ಸಂಪುಟದಲ್ಲಿ ನಾಗರಿಕ ವಿಮಾನಯಾನ ಸಚಿವರಾಗಿದ್ದರು. ಅತಿ ಕಿರಿಯ ಸಚಿವ ಎನ್ನುವ ಹೆಗ್ಗಳಿಕೆಗೂ ಪಾತ್ರರಾಗಿದ್ದರು.
1999 ರಲ್ಲಿ ಮೂರನೇ ಬಾರಿಗೆ ಲೋಕಸಭೆಗೆ ಆಯ್ಕೆಯಾಗಿ ಎನ್ಡಿಎ ಸರ್ಕಾರದಲ್ಲಿ ನಗರಾಭಿವೃದ್ಧಿ, ಪ್ರವಾಸೋದ್ಯಮ, ಯುವಜನ ಸೇವೆ ಮತ್ತು ಕ್ರೀಡೆ, ಸಂಸ್ಕೃತಿ ಸೇರಿದಂತೆ ವಿವಿಧ ಖಾತೆಗಳ ಜವಾಬ್ದಾರಿ ನಿರ್ವಹಿಸಿದ್ದರು.
2003 ರಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾಗಿ ನಂತರ ನಡೆದ ಚುನಾವಣೆಯಲ್ಲಿ ಬಿಜೆಪಿಯನ್ನು ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದರು. 2004 ರಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದರು. ಮಧ್ಯಪ್ರದೇಶ, ಬಿಹಾರ, ಛತ್ತೀಸ್ಗಢ ರಾಜ್ಯಗಳ ಉಸ್ತುವಾರಿ ತೆಗೆದುಕೊಂಡು ಅಲ್ಲಿ ಪಕ್ಷ ಸಂಘಟನೆ ಮಾಡಿ ಪಕ್ಷವನ್ನು ಬಲವರ್ಧಿಸಿದ್ದರು.
2014 ರ ಚುನಾವಣೆಯಲ್ಲಿ ಆರನೇ ಬಾರಿ ಸಂಸದರಾಗಿ ಆಯ್ಕೆಯಾಗಿದ್ದ ಅನಂತ್ ಕುಮಾರ್ ನರೇಂದ್ರ ಮೋದಿ ಸರ್ಕಾರದಲ್ಲಿ ಸಂಸದೀಯ ವ್ಯವಹಾರಗಳು, ರಾಸಾಯನಿಕ ಹಾಗು ರಸಗೊಬ್ಬರ ಖಾತೆ ಸಚಿವರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು.
1996 ರಲ್ಲಿ ವರಲಕ್ಷ್ಮಿ ಗುಂಡೂರಾವ್,1998 ರಲ್ಲಿ ಡಿ.ಪಿ ಶರ್ಮಾ,1999 ರಲ್ಲಿ ಬಿಕೆ ಹರಿಪ್ರಸಾದ್, 2004 ರಲ್ಲಿ ಎಂ.ಕೃಷ್ಣಪ್ಪ, 2009 ರಲ್ಲಿ ಕೃಷ್ಣ ಬೈರೇಗೌಡ ಹಾಗು 2014 ರಲ್ಲಿ ನಂದನ್ ನೀಲೆಕಣಿ ವಿರುದ್ಧ ಅನಂತ್ ಕುಮಾರ್ ಜಯಗಳಿಸಿದ್ದರು. ಆರು ಬಾರಿಯೂ ಕಾಂಗ್ರೆಸ್ ವಿರುದ್ಧವೇ ಗೆದ್ದಿದ್ದರು.
ಸ್ಥಾನಮಾನಗಳು:
2003-04 ಬಿಜೆಪಿ ರಾಜ್ಯಾಧ್ಯಕ್ಷ
2004 ಕಬ್ಬಿಣ ಮತ್ತು ಉಕ್ಕು ಸದನ ಸಮಿತಿ ಅಧ್ಯಕ್ಷ
2004 ಸಂಸದೀಯ ಸಾಮಾನ್ಯ ಉದ್ದೇಶಿತ ಸಮಿತಿ ಸದಸ್ಯ
2007 ಸಂಸದೀಯ ಹಣಕಾಸು ಸಮಿತಿ ಅಧ್ಯಕ್ಷ
2007 ಸಂಸತ್ ಆರ್ಥಿಕ ಸಲಹಾ ಸಮಿತಿ ಸದಸ್ಯ