ಬೆಂಗಳೂರು: ಕೇಂದ್ರ ಸಚಿವ ಅನಂತಕುಮಾರ್ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಸಂತಾಪ ಸೂಚಿಸಿದ್ದಾರೆ.
ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ, ಕರ್ನಾಟಕ ಬಿಜೆಪಿಯ ಹಿರಿಯ ಮುಖಂಡ ಅನಂತಕುಮಾರ್ (59) ಕ್ಯಾನ್ಸರ್ ನಿಂದ ಬಳಲುತ್ತಿದ್ದು, ಇಂದು ನಸುಕಿನ ಜಾವ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.
ಪ್ರಧಾನಿ ಮೋದಿ ಅವರು ಶೋಕ ಸಂದೇಶವನ್ನು ಟ್ವೀಟ್ ಮಾಡುವ ಮೂಲಕ ಅನಂತಕುಮಾರ್ ಅಗಲಿಕೆಗೆ ಸಂತಾಪ ಸೂಚಿಸಿದ್ದಾರೆ. “ಅನಂತಕುಮಾರ್ ಜೀ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ಅವರ ಪತ್ನಿ ಡಾ. ತೇಜಸ್ವಿನಿ ಜೊತೆ ಮಾತನಾಡಿದ್ದೇನೆ. ಅವರ ಕುಟುಂಬದವರಿಗೆ, ಸ್ನೇಹಿತರಿಗೆ ಮತ್ತು ಬೆಂಬಲಿಗರಿಗೆ ದುಃಖವನ್ನು ಭರಿಸುವ ಶಕ್ತಿ ಕೊಡಲಿ ಎಂದು ಪ್ರಾರ್ಥನೆ ಮಾಡಿಕೊಳ್ಳುತ್ತೇನೆ” ಎಂದು ಟ್ವೀಟ್ ಮಾಡಿದ್ದಾರೆ.
ನನ್ನ ಸಹೋದ್ಯೋಗಿ ಮತ್ತು ಸ್ನೇಹಿತ ಶ್ರೀ ಅನಂತ್ ಕುಮಾರ್ ಜಿ ಅಗಲಿಕೆಯಿಂದ ನಾನು ತುಂಬಾ ದುಃಖಿತನಾಗಿದ್ದೇನೆ. ಅವರು ಚಿಕ್ಕ ವಯಸ್ಸಿನಲ್ಲೇ ರಾಜಕೀಯ ಜೀವನವನ್ನು ಪ್ರವೇಶಿಸಿದ್ದರು. ಅನಂತ ಕುಮಾರ್ ಅವರು ಶ್ರದ್ಧೆ ಮತ್ತು ಸಹಾನುಭೂತಿಯಿಂದ ಸಮಾಜಕ್ಕೆ ಸೇವೆ ಸಲ್ಲಿಸಿದ್ದಾರೆ ಎಂದು ಬೇಸರದಿಂದ ಹೇಳಿಕೊಂಡಿದ್ದಾರೆ.
ಇತ್ತೀಚೆಗೆ ತೀವ್ರ ಅನಾರೋಗ್ಯಪೀಡಿತರಾಗಿದ್ದ ಅನಂತಕುಮಾರ್ ಅವರನ್ನು ಕಳೆದ ಎರಡು ದಿನಗಳಿಂದ ವೆಂಟಿಲೇಟರ್‍ನಲ್ಲಿ ಇಡಲಾಗಿತ್ತು. ಅನಂತಕುಮಾರ್ ಅವರು ಪತ್ನಿ, ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಇಂದು ಬೆಳಗ್ಗೆ ಪ್ರಧಾನಿ ಮೋದಿ ಬೆಂಗಳೂರಿಗೆ ಬರಲಿದ್ದಾರೆ. ಬೆಳಗ್ಗೆ 9 ಗಂಟೆಯ ನಂತರ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆಗೆ ಸಿದ್ಧತೆ ನಡೆದಿದೆ.