ವಿಚಾರಣೆ ಬಳಿಕ ರಾತ್ರಿ ಸಿಸಿಬಿ ಕಚೇರಿಯಲ್ಲೇ ಮಲಗಿದ ಜನಾರ್ದನ ರೆಡ್ಡಿ; ಇಂದು ಬೆಳಗ್ಗೆ ಮತ್ತೆ ವಿಚಾರಣೆ ಆರಂಭ

ಬೆಂಗಳೂರುಆಂಬಿಡೆಂಟ್ ಲಂಚ ಪ್ರಕರಣದಲ್ಲಿ ಆರೋಪಿಯಾಗಿರುವ ಮಾಜಿ ಸಚಿವ ಜನಾರ್ದನ ರೆಡ್ಡಿಯನ್ನು ನಿನ್ನೆ ಸಂಜೆಯಿಂದ ವಿಚಾರಣೆ ನಡೆಸಿದ್ದ ಸಿಸಿಬಿ ಪೊಲೀಸರು ರಾತ್ರಿ ಕಚೇರಿಯಲ್ಲೇ ಉಳಿಸಿಕೊಂಡಿದ್ದರು. ರಾತ್ರಿ ಸಿಸಿಬಿ ಕಚೇರಿಯಲ್ಲೇ ಮಲಗಿದ್ದ ರೆಡ್ಡಿಯ ಜೊತೆಗೆ ಆಂಬಿಡೆಂಟ್​ ಮಾಲಿಕ ಫರೀದ್ ಅವರ ವಿಚಾರಣೆಯನ್ನು ಇಂದು ಬೆಳಗ್ಗೆ ಮತ್ತೆ ಅಧಿಕಾರಿಗಳು ಕೈಗೆತ್ತಿಕೊಳ್ಳಲಿದ್ದಾರೆ.
ನಾಲ್ಕೈದು ದಿನಗಳಿಂದ ತಲೆಮರೆಸಿಕೊಂಡಿದ್ದ ಜನಾರ್ದನ ರೆಡ್ಡಿಗಾಗಿ ಬೆಂಗಳೂರು, ಹೈದರಾಬಾದ್​ ಸೇರಿದಂತೆ ಹಲವಾರು ಕಡೆ ಹುಡುಕಾಟ ನಡೆಸಿದ್ದ ಸಿಸಿಬಿ ಪೊಲೀಸರು ಬರಿಗೈಯಲ್ಲಿ ವಾಪಾಸಾಗಿದ್ದರು. ಆದರೆ, ನಿನ್ನೆ ಇದ್ದಕ್ಕಿದ್ದಂತೆ ತಮ್ಮ ಆಪ್ತ ಅಲಿಖಾನ್​ ಮತ್ತು ವಕೀಲರ ಜೊತೆ ಸಿಸಿಬಿ ಕಚೇರಿಯಲ್ಲಿ ಪ್ರತ್ಯಕ್ಷರಾದ ರೆಡ್ಡಿ ವಿಚಾರಣೆಗೆ ಸಹಕರಿಸುವುದುಆಗಿ ಹೇಳಿದ್ದರು. ಸುಮಾರು 4 ಗಂಟೆಯಿಂದ ರೆಡ್ಡಿಯ ವಿಚಾರಣೆ ಆರಂಭಿಸಿದ ಸಿಸಿಬಿ ಅಧಿಕಾರಿಗಳು 10 ಗಂಟೆಗೂ ಹೆಚ್ಚು ಕಾಲ ಜನಾರ್ದನ ರೆಡ್ಡಿಯವರಿಂದ ಅಗತ್ಯ ಮಾಹಿತಿ ಪಡೆದುಕೊಂಡಿದ್ದಾರೆ. ಇಂದು ಬೆಳಗ್ಗೆ 9 ಗಂಟೆಯಿಂದ ಮತ್ತೆ ವಿಚಾರಣೆ ಆರಂಭವಾಗಲಿದೆ.
ಹೇಳಿಕೆ ದಾಖಲಿಸಿಕೊಂಡ ಪೊಲೀಸರು:
ಮಧ್ಯರಾತ್ರಿಯವರೆಗೂ ವಿಚಾರಣೆ ಮುಂದುವರೆದಿದ್ದರಿಂದ ಸಿಸಿಬಿ ಕಚೇರಿಯಲ್ಲೇ ರೆಡ್ಡಿ ಮಲಗಿಕೊಳ್ಳಬೇಕಾಯಿತು. ವಿಚಾರಣೆ ವೇಳೆ ಜನಾರ್ದನ ರೆಡ್ಡಿ, ಫರೀದ್​ ಮತ್ತು ರೆಡ್ಡಿ ಆಪ್ತ ಅಲಿಖಾನ್​ ಹೇಳಿಕೆಯಲ್ಲಿ ವ್ಯತ್ಯಾಸ ಕಂಡು ಬರುತ್ತಿದೆ. ಹೀಗಾಗಿ, ಪ್ರಕರಣದ ಕುರಿತು ಸಿಸಿಬಿಗೆ ಸೂಕ್ತ ಸಾಕ್ಷ್ಯಾಧಾರಗಳ ಕೊರತೆ ಹಿನ್ನೆಲೆಯಲ್ಲಿ ಸಿಸಿಬಿ ಎಸಿಪಿ ಸುಬ್ರಹ್ಮಣ್ಯ ನೇತೃತ್ವದ ತಂಡ ಮತ್ತೋರ್ವ ವ್ಯಕ್ತಿಯನ್ನು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದಾರೆ. ಆ ವ್ಯಕ್ತಿ ಯಾರೆಂಬ ಬಗ್ಗೆ ಸಿಸಿಬಿ ಪೊಲೀಸರು ಗುಟ್ಟು ಬಿಟ್ಟು ಕೊಟ್ಟಿಲ್ಲ. ಜನಾರ್ದನ ರೆಡ್ಡಿ ಬಂಧನಕ್ಕೆ ಬೇಕಾದ ಎಲ್ಲ ಸಾಕ್ಷ್ಯಾಧಾರಗಳನ್ನು ಅಧಿಕಾರಿಗಳು ಕಲೆಹಾಕುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ನಿನ್ನೆ ಸತತ 10 ಗಂಟೆಗಳ ಕಾಲ ನಡೆದ ರೆಡ್ಡಿಯ ವಿಚಾರಣೆಯ ಹೇಳಿಕೆಗಳನ್ನು ಲಿಖಿತ ರೂಪದಲ್ಲಿ ಮತ್ತು ವಿಡಿಯೋ ಚಿತ್ರೀಕರಣದ ಮೂಲಕ ಸಿಸಿಬಿ ಅಧಿಕಾರಿಗಳು ದಾಖಲಿಸಿಕೊಂಡಿದ್ದಾರೆ.
ಫರೀದ್ವಿಚಾರಣೆ ಮುಕ್ತಾಯ:
ನಿನ್ನೆ ಸಂಜೆ 6 ಗಂಟೆಯ ವೇಳೆಗೆ ಜನಾರ್ದನ ರೆಡ್ಡಿಯವರ ಜೊತೆಗೆ ಆಂಬಿಡೆಂಟ್​ ಕಂಪನಿಯ ಮಾಲೀಕ ಫರೀದ್​ ಅವರ ವಿಚಾರಣೆಯನ್ನೂ ನಡೆಸಲಾಯಿತು. ಡಿಸಿಪಿ ಗಿರೀಶ್​ ಅವರು ರೆಡ್ಡಿ ಮತ್ತು ಫರೀದ್ ಅವರನ್ನು ಒಟ್ಟಿಗೇ ಕೂರಿಸಿ ಪ್ರಶ್ನೆಗಳನ್ನು ಕೇಳಿದರು. 6 ಗಂಟೆಗಳ ಕಾಲ ವಿಚಾರಣೆ ನಡೆಸಿದ ಅಧಿಕಾರಿಗಳು ಫರೀದ್​ ಅವರನ್ನು ಮನೆಗೆ ಕಳುಹಿಸಿಕೊಟ್ಟರು. ಆದರೆ, ಜನಾರ್ದನ ರೆಡ್ಡಿಯ ವಿಚಾರಣೆ ಮುಗಿಯದ ಕಾರಣ ಮಧ್ಯರಾತ್ರಿ 2 ಗಂಟೆಯವರೆಗೂ ಪ್ರಶ್ನೆಗಳನ್ನು ಎದುರಿಸಬೇಕಾಯಿತು. ಈ ವೇಳೆ, ತಮ್ಮ ಪರ ವಕೀಲರ ಕಡೆಯಿಂದ ಬಂದ ಚಪಾತಿಯನ್ನು ತಿಂದ ಜನಾರ್ದನ ರೆಡ್ಡಿ ಮಧ್ಯರಾತ್ರಿಯ ವೇಳೆ ಹಸಿವಾಗುತ್ತದೆ ಎಂದು ಪೊಲೀಸರಿಗಾಗಿ ತಂದಿದ್ದ ಗೀರೈಸ್​ ಸೇವಿಸಿ, ಸಿಸಿಬಿ ಕಚೇರಿಯ ವೇಟಿಂಗ್​ ರೂಂನಲ್ಲೇ ಮಲಗಿಕೊಂಡರು.
ಇಂದು ಕೂಡ ವಿಚಾರಣೆ:
ನಿನ್ನೆ ಮಧ್ಯರಾತ್ರಿಯವರೆಗೂ ಜನಾರ್ದನ ರೆಡ್ಡಿಯವರ ವಿಚಾರಣೆ ನಡೆದಿದ್ದರೂ ಇನ್ನೂ ಕೆಲವಷ್ಟು ಮಾಹಿತಿಗಳ ಕೊರತೆ ಹಾಗೂ ಫರೀದ್​- ಜನಾರ್ದನ ರೆಡ್ಡಿಯವರ ಹೇಳಿಕೆಗಳಲ್ಲಿ ವ್ಯತ್ಯಾಸ ಉಂಟಾಗುತ್ತಿರುವ ಹಿನ್ನೆಲೆಯಲ್ಲಿ ಇಂದು ಕೂಡ ಸಿಸಿಬಿ ಪೊಲೀಸರು ವಿಚಾರಣೆ ಮುಂದುವರಿಸಲಿದ್ದಾರೆ. ಫರೀದ್​ ಕೂಡ ಇಂದು ವಿಚಾರಣೆಗೆ ಮತ್ತೆ ಹಾಜರಾಗಲಿದ್ದಾರೆ. ಒಂದು ಕಾಲದಲ್ಲಿ ಸರ್ಕಾರವನ್ನೇ ತನ್ನ ನಿಯಂತ್ರಣದಲ್ಲಿ ಇಟ್ಟುಕೊಂಡಿದ್ದ ಗಣಿ ಧಣಿ ಜನಾರ್ದನ ರೆಡ್ಡಿಗೆ ಮತ್ತೆ ಬಂಧನದ ಭೀತಿ ಎದುರಾಗಿದೆ.

ಅಲಿಖಾನ್ಸ್ವಾಮಿನಿಷ್ಠೆ:
ಆಂಬಿಡೆಂಟ್​ ಪ್ರಕರಣದಲ್ಲಿ ಈಗಾಗಲೇ ಜಾಮೀನು ಪಡೆದಿರುವ ರೆಡ್ಡಿ ಆಪ್ತ ಅಲಿಖಾನ್​ ಕೂಡ ನಿನ್ನೆ ವಿಚಾರಣೆಗೆ ಹಾಜರಾಗಿದ್ದರು. ವಿಚಾರಣೆ ಮುಗಿದ ಬಳಿಕ ಮನೆಗೆ ಹೋಗಬಹುದೆಂದು ಅವರನ್ನು ಹೊರಗೆ ಕಳುಹಿಸಿದರೂ ‘ನಮ್ಮ ಬಾಸ್​ ಇಲ್ಲೇ ಇದ್ದಾರೆ. ನಾನೂ ಅವರೊಂದಿಗೆ ರಾತ್ರಿ ಇಲ್ಲೇ ಇರುತ್ತೇನೆ’ ಎಂದು ಪೊಲೀಸರ ಬಳಿ ಮನವಿ ಮಾಡಿಕೊಂಡು ಸಿಸಿಬಿ ಕಚೇರಿಯಲ್ಲಿ ರೆಡ್ಡಿ ಜೊತೆಗೆ ಅಲಿಖಾನ್​ ಕೂಡ ವೇಟಿಂಗ್​ ರೂಂನಲ್ಲೇ ಮಲಗಿಕೊಂಡರು.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ