ಸಿದ್ಧ ಉಡುಪು ಕಾರ್ಖಾನೆಗಳಲ್ಲಿ ಮಹಿಳೆಯರಿಗೆ ಕಿರುಕುಳ: ತನಿಖೆಗೆ ಸಮಿತಿ ರಚಿಸಲು ಆಗ್ರಹ

Varta Mitra News

ಬೆಂಗಳೂರು, ನ.11- ಸಿದ್ಧ ಉಡುಪು ಕಾರ್ಖಾನೆಗಳಲ್ಲಿ ಮಹಿಳೆಯರ ಕಿರುಕುಳದ ಬಗ್ಗೆ ತನಿಖೆ ನಡೆಸಲು ಸಮಿತಿಯನ್ನು ರಚಿಸಬೇಕು ಎಂದು ಲೇಖಕಿ ಡಾ.ವಿಜಯಾ ಒತ್ತಾಯಿಸಿದರು.

ರಾಜಾಜಿನಗರದ ಆಕೃತಿ ಪುಸ್ತಕ ಮಳಿಗೆಯಲ್ಲಿ ನಡೆದ ಕನ್ನಡ ಮತ್ತು ಭಾರತೀಯ ಸಿನಿಮಾಗಳಲ್ಲಿ ಮಹಿಳೆಯ ಚಿತ್ರಣ, ಮೀ ಟೂ ಹಿನ್ನೆಲೆಯಲ್ಲಿ ಸ್ತ್ರೀ ಶೋಷಣೆ ಮತ್ತು ಸ್ತ್ರೀ ಸಮಾನತೆ-ಹಲವು ಚಿಂತನೆಗಳು ಕುರಿತ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಗಾರ್ಮೆಂಟ್ಸ್ ಕಾರ್ಖಾನೆಗಳ ಆಡಳಿತ ಮಂಡಳಿ ಮಹಿಳೆಯರನ್ನೊಳಗೊಂಡ ಸಮಿತಿ ರಚಿಸಬೇಕು. ಆ ಸಮಿತಿ ಮಹಿಳೆಯರ ಮೇಲೆ ನಡೆಯುವ ಲೈಂಗಿಕ ದೌರ್ಜನ್ಯ, ಕಿರುಕುಳದ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಸಬೇಕು. ಸಿನಿಮಾ ಮತ್ತು ಗಾರ್ಮೆಂಟ್ಸ್‍ಗಳಲ್ಲಿ ಹೆಚ್ಚು ಕಿರುಕುಳ ನಡೆಯುತ್ತಿದೆ ಎಂದು ಆರೋಪಿಸಿದರು.
ಶೋಷಣೆ ವಿರುದ್ಧ ಮಹಿಳೆಯರು ಧ್ವನಿ ಎತ್ತಬೇಕು. ಲೈಂಗಿಕ ಕಿರುಕುಳ ಪ್ರಕರಣಗಳಲ್ಲಿ ತಪ್ಪಿತಸ್ಥರಿಗೆ ಶೀಘ್ರ ಶಿಕ್ಷೆಯಾಗಬೇಕು. ಶೋಷಣೆ ವಿರುದ್ಧ ಮಹಿಳೆ ದೂರು ನೀಡುವುದರಲ್ಲಿ ಸತ್ಯಾಂಶವಿರುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.

ನೊಂದ ಮಹಿಳೆಯರ ನೆರವಿಗೆ ಲೇಖಕಿಯರ ಸಂಘ ಇರುತ್ತದೆ ಎಂದರು.
ಲೇಖಕಿ ಎಚ್.ಎಸ್.ಶ್ರೀಮತಿ ಮಾತನಾಡಿ, ಮಾಹಿತಿ-ತಂತ್ರಜ್ಞಾನದ ಯುಗದಲ್ಲೂ ಮಹಿಳೆಯರ ಸುರಕ್ಷತೆ ಸಮರ್ಪಕವಾಗಿ ಸಿಗುತ್ತಿಲ್ಲ. ಮಹಿಳೆಯರ ದೌರ್ಜನ್ಯದ ವಿರುದ್ಧ ನಡೆಯುವ ಹೋರಾಟಗಳು ತೀವ್ರವಾಗಬೇಕು. ಅವು ಸಮುದಾಯದ ಚಳುವಳಿಯಾಗಬೇಕು. ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯಗಳು ನಡೆಯುತ್ತಲೇ ಬಂದಿವೆ. ಮಹಿಳೆ ಏಕಾಂಗಿಯಾಗಿ ಹೇಳಿಕೊಳ್ಳುವಂತಹ ಸಮುದಾಯದ ಧ್ವನಿಯಾಗಬೇಕು. ಮೀ ಟೂ ಆಂದೋಲನ ತೀವ್ರವಾಗಬೇಕು ಎಂದು ಹೇಳಿದರು.

ಪತ್ರಕರ್ತೆ ಅರ್ಚನ ನಾಥನ್ ಮಾತನಾಡಿ, ಮೀ ಟೂ ಆಂದೋಲನದಲ್ಲಿ ತನಿಖಾಧಿಕಾರಿಗಳು ನೊಂದವರ ನೋವು ಅರಿವು ನ್ಯಾಯ ಒದಗಿಸಬೇಕು. ಸಿನಿಮಾಗಳಲ್ಲಿ ಮಹಿಳೆಯನ್ನು ನೋಡುವ ದೃಷ್ಟಿಕೋನ ಬದಲಾಗಬೇಕು. ಮಹಿಳಾ ನಿರ್ದೇಶಕಿಯರು ಹೆಚ್ಚಿನ ಸಂಖ್ಯೆಯಲ್ಲಿ ಮುಂದೆ ಬರಬೇಕಾದ ಅಗತ್ಯವಿದೆ. ಸಿನಿಮಾಗಳ ಲವ್ ಸ್ಟೋರಿಯಲ್ಲಿ ಮಹಿಳೆಯರ ಶೋಷಣೆ ಇರುವುದನ್ನು ಗಮನಿಸಬಹುದಾಗಿದೆ ಎಂದು ಅಭಿಪ್ರಾಯಪಟ್ಟರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ