ಅಸ್ಸೋಂನಲ್ಲಿ ಒಂಬತ್ತು ದಿನಗಳ ಅಂತರದಲ್ಲಿ 18 ನವಜಾತ ಶಿಶುಗಳ ಸಾವು

ಗುವಾಹತಿ, ನ.10- ಕೇವಲ ಒಂಬತ್ತು ದಿನಗಳ ಅಂತರದಲ್ಲಿ ಸುಮಾರು 18 ನವಜಾತ ಶಿಶುಗಳು ಸಾವನ್ನಪ್ಪಿರುವ ಘಟನೆ ಅಸ್ಸೋಂನಲ್ಲಿ ನಡೆದಿದೆ.
ಅಸ್ಸೋಂನ ಜೋಹ್ರಾಟ್‍ನ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದ್ದು, ವಿವಿಧ ಪ್ರಕರಗಳಲ್ಲಿ ಕಳೆದ ಒಂಭತ್ತು ದಿನಗಳಲ್ಲಿ 18 ನವಜಾತ ಶಿಶುಗಳು ಸಾವನ್ನಪ್ಪಿವೆ. ಈ ಬಗ್ಗೆ ಆಸ್ಪತ್ರೆ ಸೂಪರಿಂಟೆಂಟ್ ಸೌರವ್ ಬೊರ್ಕಾಕೋಟಿ ಅವರು ತನಿಖೆಗೆ ಆದೇಶಿಸಿದ್ದಾರೆ. ಅಂತೆಯೇ ಮಕ್ಕಳ ಸಾವು ವೈದ್ಯಕೀಯ ನಿರ್ಲಕ್ಷ್ಯದಿಂದ ಸಂಭವಿಸಿಲ್ಲ, ಯಾವುದೇ ಮೇಲ್ನೋಟಕ್ಕೆ ವೈದ್ಯರಿಂದಾಗಲಿ ಅಥವಾ ಸಿಬ್ಬಂದಿಗಳಿಂದಾಗಲಿ ಕರ್ತವ್ಯ ಲೋಪವಾಗಿಲ್ಲ. ಒಂದು ವೇಳೆ ದೋಷ ಕಂಡು ಬಂದರೆ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ.

ಆಸ್ಪತ್ರೆಗಳಿಗೆ ಕೆಲವು ಬಾರಿ ಹೆಚ್ಚಿನ ಪ್ರಮಾಣದಲ್ಲಿ ರೋಗಿಗಳು ದಾಖಲಾಗುತ್ತಾರೆ. ಈ ಸಂದರ್ಭದಲ್ಲಿ ಸಾವಿನ ಸಂಖ್ಯೆ ಕೂಡ ಹೆಚ್ಚಾಗುತ್ತದೆ. ಆದರೆ, ಪ್ರಶ್ನೆ ಎಂದರೆ ಯಾವ ಪರಿಸ್ಥಿತಿಯಲ್ಲಿ ರೋಗಿಗಳು ಆಸ್ಪತ್ರೆಗೆ ಆಗಮಿಸುತ್ತಾರೆ ಎಂಬುದು ಪ್ರಶ್ನೆ. ತೂಕ ಕಡಿಮೆ, ನಿಗದಿತ ಸಮಯಕ್ಕಿಂತ ಮೊದಲೇ ಜನನದಂತಹ ಸಾಕಷ್ಟು ಸಮಸ್ಯೆಗಳು ಮಕ್ಕಳನ್ನು ಕಾಡುತ್ತವೆ. ಇವುಗಳೂ ಕೂಡ ಮಕ್ಕಳ ಸಾವಿಗೆ ಕಾರಣವಾಗಿರಬಹುದು ಎಂದು ಅವರು ಆಭಿಪ್ರಾಯಪಟ್ಟಿದ್ದಾರೆ.
ಪ್ರಸ್ತುತ ಮಕ್ಕಳ ಸರಣಿ ಸಾವು ಪ್ರಕರಣ ಸಂಬಂಧ ಸಮಿತಿ ರಚನೆ ಮಾಡಲಾಗಿದ್ದು, ವರದಿ ಕೈ ಸೇರಿದ ಬಳಿಕ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ