ವಾಷಿಂಗ್ಟನ್, ನ.10-ಮುಂದಿನ ವಾರ ಸಿಂಗಪುರ್ನಲ್ಲಿ ನಡೆಯಲಿರುವ ಅಸಿಯಾನ್ ಶೃಂಗಸಭೆ ವೇಳೆ ಅಮರಿಕ ಉಪಾಧ್ಯಕ್ಷ ಮೈಕ್ ಪೆನ್ಸ್ ಮತ್ತು ಪ್ರಧಾನಮಂತ್ರಿ ನರೇಂದ್ರ ಮೋದಿ ನಡುವೆ ಮಹತ್ವದ ದ್ವಿಪಕ್ಷೀಯ ಮಾತುಕತೆಗೆ ವೇದಿಕೆ ಸಜ್ಜಾಗಿದೆ.
ಪೆನ್ಸ್ ಮತ್ತು ಮೋದಿ ನಡುವೆ ರಕ್ಷಣಾ ಸಹಕಾರ ಸೇರಿದಂತೆ ದ್ವಿಪಕ್ಷೀಯ ಸಂಬಂಧ ಬಲವರ್ಧನೆಗಾಗಿ ಪ್ರಮುಖ ಸಮಾಲೋಚನೆ ನಡೆಯಲಿದೆ ಎಂದು ಶ್ವೇತಭವನ ತಿಳಿಸಿದೆ.
ಇಂಡೋ-ಪೆಸಿಫಿಕ್ ಪ್ರಾಂತ್ಯದಲ್ಲಿ ಭಾರತದ ಪಾತ್ರಕ್ಕೆ ಆಗಸವು ಮಿತಿ ಇಲ್ಲ (ನವದೆಹಲಿ ಪಾತ್ರಕ್ಕೆ ಸೀಮಿತ ಇಲ್ಲ) ಎಂಬ ಸ್ಪಷ್ಟ ಮಾತನ್ನು ಸಹ ವೈಟ್ಹೌಸ್ ಅಧಿಕಾರಿಗಳು ಹೇಳಿದ್ದಾರೆ. ಈ ಮೂಲಕ ಈ ಪ್ರಾಂತ್ಯದಲ್ಲಿನ ಸಮಸ್ಯೆಗಳ ಇತ್ಯರ್ಥಕ್ಕೆ ಭಾರತದ ಪಾತ್ರ ಮಹತ್ವದ್ದು ಎಂಬುದನ್ನು ಅಮೆರಿಕ ಸ್ಪಷ್ಟಪಡಿಸಿದೆ.
ಸಿಂಗಪುರ್ನಲ್ಲಿ ಮುಂದಿನ ವಾರ ಆಸಿಯಾನ್ ಮತ್ತು ಪೂರ್ವ ಏಷ್ಯಾ ಶೃಂಗಸಭೆ ನಡೆಯಲಿದೆ. ಇದೇ ಸಂದರ್ಭದಲ್ಲಿ ಅಮೆರಿಕ ಉಪಾಧ್ಯಕ್ಷರು ಜಪಾನ್, ಆಸ್ಟ್ರೇಲಿಯಾ, ಸಿಂಗಪುರ್ ಮತ್ತು ಪಪುವಾ ನ್ಯೂ ಗಿನಿ-ಈ ನಾಲ್ಕು ದೇಶಗಳಿಗೆ ಭೇಟಿ ನೀಡುವ ಕಾರ್ಯಕ್ರಮವಿದೆ.