ಕೊಲಂಬೋ: : ಶ್ರೀಲಂಕಾದಲ್ಲಿ ಮತ್ತೊಂದು ದಿಢೀರ್ ರಾಜಕೀಯ ಡ್ರಾಮಾ ನಡೆದು, ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಅವರು ಲಂಕಾ ಸಂಸತನ್ನೇ ವಿಸರ್ಜಿಸಿದ್ದಾರೆ. ಇದರೊಂದಿಗೆ ಪ್ರಧಾನಿಯಾಗಿ ಲಂಕಾ ಆಡಳಿತಕ್ಕೆ ಕಂಬ್ಯಾಕ್ ಮಾಡಿದ್ದ ಮಹಿಂದ ರಾಜಪಕ್ಸ ಅವರ ಅಧಿಕಾರ ಅರಳುವ ಮುನ್ನವೇ ಮೊಟಕುಗೊಂಡಿದೆ. ಕೆಲ ದಿನಗಳ ಹಿಂದೆ ಮೈತ್ರಿಪಾಲ ಸಿರಿಸೇನಾ ಅವರು ಶ್ರೀಲಂಕಾದ ಪ್ರಧಾನಿಯಾಗಿದ್ದ ರನಿಲ್ ವಿಕ್ರಮಸಿಂಘೆ ಅವರನ್ನ ಕೆಳಗಿಳಿಸಿ ರಾಜಪಕ್ಸ ಅವರಿಗೆ ಪ್ರಧಾನಿ ಪಟ್ಟ ಕಟ್ಟಿದ್ದರು. ಆದರೆ, ಸರಕಾರಕ್ಕೆ ಅಗತ್ಯ ಬಹುಮತ ಗಳಿಸಲು ಅಸಾಧ್ಯವಾದ ಹಿನ್ನೆಲೆಯಲ್ಲಿ ಲೋಕಸಭೆಯನ್ನು ವಿಸರ್ಜಿಸುವುದು ಲಂಕಾ ಅಧ್ಯಕ್ಷರಿಗೆ ಅನಿವಾರ್ಯವಾಗಿತ್ತು. ಇದರೊಂದಿಗೆ ಲಂಕಾದ 225 ಸದಸ್ಯಬಲದ ಲೋಕಸಭೆ ಇವತ್ತು ಮಧ್ಯರಾತ್ರಿಗೆ ಅಂತ್ಯವಾಗಲಿದೆ. ಈ ಸಂಬಂಧ ಅಧ್ಯಕ್ಷ ಸಿರಿಸೇನ ಅವರು ಅಧಿಕೃತ ಪ್ರಕಟಣೆ ಹೊರಡಿಸಿದ್ದಾರೆ.
ಜನವರಿ ತಿಂಗಳಲ್ಲಿ ಚುನಾವಣೆ ನಡೆಯುವ ಸಾಧ್ಯತೆ ಇದೆ ಎನ್ನಲಾಗಿದೆ. 2015ರಲ್ಲಿ ಚುನಾವಣೆಯಲ್ಲಿ ಅಯ್ಕೆಯಾಗಿದ್ದ ಈ ಲೋಕಸಭೆಯ ಅವಧಿ 2020ರವರೆಗೂ ಇದೆ. ಈಗ 2 ವರ್ಷಕ್ಕೆ ಮುನ್ನವೇ ಚುನಾವಣೆ ಎದುರಿಸುವ ಸಂದರ್ಭ ಬಂದಿದೆ.
ರಾನಿಲ್ ವಿಕ್ರೆಮೆಸಿಂಘೆ ಅವರು ಈಗಲೂ ತಾವೇ ಅಧಿಕೃತ ಪ್ರಧಾನಿ ಎಂದು ಹೇಳುತ್ತಿದ್ದಾರೆ. ಲಂಕಾ ಅಧ್ಯಕ್ಷರು ತಮ್ಮನ್ನು ಪ್ರಧಾನಿ ಸ್ಥಾನದಿಂದ ತೆಗೆದುಹಾಕಿದ್ದು ಅಸಾಂವಿಧಾನಿಕ ಕ್ರಮವಾಗಿದೆ. ಬಹುಮತ ಇಲ್ಲದೆಯೇ ಪ್ರಧಾನಿಯನ್ನು ವಜಾಗೊಳಿಸಲು ಸಾಧ್ಯವಿಲ್ಲ ಎಂಬುದು ವಿಕ್ರಮಸಿಂಘೆ ಅವರ ವಾದವಾಗಿತ್ತು. ವಿಕ್ರಮಸಿಂಘೆ ಅವರ ಜಾಗಕ್ಕೆ ಬಂದ ಮಹಿಂದ ರಾಜಪಕ್ಸ ಅವರು ಲೋಕಸಭೆಯಲ್ಲಿ ವಿಶ್ವಾಸಮತ ಪರೀಕ್ಷೆ ಎದುರಿಸಿ ಜಯಿಸುವುದು ಅಗತ್ಯವಿತ್ತು. ಆದರೆ, ಅಧ್ಯಕ್ಷ ಮೈತ್ರಿಪಾಲ ನೇತೃತ್ವದ ಮೈತ್ರಿಕೂಟಕ್ಕೆ ಅಷ್ಟು ಬಹುಮತ ಇಲ್ಲದಿರುವುದರಿಂದ ವಿಶ್ವಾಸಮತ ಪರೀಕ್ಷೆಯಲ್ಲಿ ರಾಜಪಕ್ಸ ಪಾಸಾಗುವುದು ಅಸಾಧ್ಯವೆನ್ನಲಾಗಿದೆ. ಇದೇ ವೇಳೆ, ರಾನಿಲ್ ವಿಕ್ರಮಸಿಂಘೆ ಅವರು ವಿಶ್ವಾಸಮತ ಯಾಚನೆಗೆ ಮುಂದಾಗಿದ್ದರೂ ಅವರ ಬೇಡಿಕೆಯನ್ನ ಅಧ್ಯಕ್ಷರು ತಳ್ಳಿಹಾಕಿದ್ದಾರೆ.