
ನವದೆಹಲಿ: ಇದೇ ನವೆಂಬರ್ 12ರಿಂದ ಡಿಸೆಂಬರ್ 7ವರೆಗೂ ಯಾವುದೇ ರೀತಿಯ ಮತದಾನೋತ್ತರ ಸಮೀಕ್ಷೆ ನಡೆಸದಂತೆ ಕೇಂದ್ರ ಚುನಾವಣಾ ಆಯೋಗ ನಿಷೇಧ ಹೇರಿದೆ.
ಛತ್ತೀಸ್ ಘಡ, ಮಧ್ಯ ಪ್ರದೇಶ, ಮಿಜೋರಾಂ, ರಾಜಸ್ಥಾನ ಮತ್ತು ತೆಲಂಗಾಣ ಸೇರಿದಂತೆ ಪಂಚ ರಾಜ್ಯಗಳ ವಿಧಾನಸಭೆ ಚುನಾವಣೆ ಹಿನ್ನಲೆಯಲ್ಲಿ ಚುನಾವಣಾ ಆಯೋಗ ಈ ಮಹತ್ವದ ನಿರ್ಧಾರ ಕೈಗೊಂಡಿದ್ದು, ಮುದ್ರಣ ಅಥವಾ ವಿದ್ಯುನ್ಮಾನ ಮಾಧ್ಯಮಗಳು ಮತದಾನೋತ್ತರ ಸಮೀಕ್ಷೆಗಳನ್ನು ಪ್ರಕಟ ಮಾಡುವುದಾಗಲೀ, ಪ್ರಸಾರ ಮಾಡುವುದಾಗಲೀ ಮಾಡುವಂತಿಲ್ಲ ಎಂದು ಚುನಾವಣಾ ಆಯೋಗ ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ.
ಅಂತೆಯೇ, ಜನಪ್ರತಿನಿಧಿ ಕಾಯ್ದೆ 1951ರ 126(1)(ಬಿ) ಕಲಂನಂತೆ ಚುನಾವಣಾ ಫಲಿತಾಂಶ, ಅಭಿಪ್ರಾಯ ಸಮೀಕ್ಷೆ ಮತ್ತಿತರ ಯಾವುದೇ ಸಮೀಕ್ಷೆಯನ್ನು ಮುದ್ರಣ ಹಾಗೂ ವಿದ್ಯುನ್ಮಾನ ಮಾಧ್ಯಮಗಳಲ್ಲಿ ಪ್ರದರ್ಶನ ಮಾಡುವುದಕ್ಕೂ ನಿರ್ಬಂಧ ಹೇರಲಾಗಿದೆ.
ಪಂಚರಾಜ್ಯಗಳಲ್ಲಿ ಮೊದಲು ಛತ್ತೀಸ್‌ಗಢದಲ್ಲಿ ನವೆಂಬರ್ 12 ಮತ್ತು ನವೆಂಬರ್ 20 ಎರಡು ಹಂತದಲ್ಲಿ ಮತದಾನ ನಡೆಯಲಿದೆ. ಮಧ್ಯಪ್ರದೇಶ ಮತ್ತು ಮಿಜೋರಾಂನಲ್ಲಿ ನವೆಂಬರ್ 28ಕ್ಕೆ, ತೆಲಂಗಾಣದಲ್ಲಿ ಡಿಸೆಂಬರ್ 7ಕ್ಕೆ ಚುನಾವಣೆ ನಡೆಯಲಿದೆ.