ಶಬರಿಮಲೆ ಅಯ್ಯಪ್ಪ ಸ್ವಾಮಿ ದರ್ಶನ ಪಡೆಯಲು 550 ಮಹಿಳೆಯರಿಂದ ಆನ್ ಲೈನ್ ಮೂಲಕ ನೊಂದಾವಣೆ

ತಿರುವನಂತಪುರಂ: ಮುಂದಿನವಾರ ತೆರೆಯಲ್ಪಡುವ ಶಬರಿಮಲೆ ಅಯ್ಯಪ್ಪ ಸ್ವಾಮಿ ದರ್ಶನ ಪಡೆಯಲು 10 ರಿಂದ 50 ರ ವಯಸ್ಸಿನ ಒಟ್ಟು 550 ಮಹಿಳೆಯರು ಆನ್ ಲೈನ್ ಮೂಲಕ ನೊಂದಾವಣೆ ಮಾಡಿಕೊಂಡಿದ್ದಾರೆ.

ಶಬರಿಮಲೆಗೆ ಮಹಿಳೆಯರ ಪ್ರವೇಶ ಕುರಿತ ಸುಪ್ರೀಂ ಕೋರ್ಟ್ ತೀರ್ಪಿನ ವಿರುದ್ಧ ಸಾಕಷ್ಟು ಪ್ರತಿಭಟನೆಗಳು ನಡೆಯುತ್ತಿದ್ದು ಇದರ ನಡುವೆಯೇ ಕೇರಳ ಪೋಲೀಸರ ಸಮ್ಮುಖದಲ್ಲಿ ಒಟ್ಟು 550 ಮಹಿಳೆಯರು ಅಯ್ಯಪ್ಪನ ದರ್ಶನಕ್ಕಾಗಿ ನೊಂದಾವಣೆ ಮಾಡಿಸಿದ್ದಾರೆ.

ಪ್ರತಿ ವರ್ಷವೂ ಮಂಡಲ ಪೂಜೆಯ ಸಮಯದಲ್ಲಿ ಶಬರಿಮಲೆಯ ಅಯ್ಯಪ್ಪ ಸ್ವಾಮಿ ದರ್ಶನ ಪಡೆಯಲು ಕೇರಳ ಪೋಲೀಸರು ಆನ್ ಲೈನ್ ಮೂಲಕ ಬುಕ್ಕಿಂಗ್ ವ್ಯವಸ್ಥೆಯನ್ನು ಕಲ್ಪಿಸುತ್ತಾರೆ. ಭಕ್ತಾದಿಗಳು ತಮಗೆ ಅನುಕೂಲವಾಗುವ ದಿನದಂದು ಸ್ವಾಮಿಯ ದರ್ಶನಕ್ಕಾಗಿ ಸಮಯವನ್ನು ಕಾಯ್ದಿರುವ ಸೌಲಭ್ಯ ಇದಾಗಿದೆ. ಇದು ತಿರುಪತಿಯಲ್ಲಿ ತಿಮ್ಮಪ್ಪನ ದರ್ಶನಕ್ಕೆ ಹೇಗೆ ಆನ್ ಲೈನ್ ದರ್ಶನ ಕಾಯ್ದಿರಿಸುವ ವ್ಯವಸ್ಥೆ ಇದೆಯೋ ಹಾಗೆಯೇ ಕಾರ್ಯನಿರ್ವಹಿಸುತ್ತದೆ.

ಈ ಮಧ್ಯೆ ಅಯ್ಯಪ್ಪ ಸ್ವಾಮಿ ದರ್ಶನಕ್ಕಾಗಿ ನೊಂದಾಯಿಸಿದ್ದ ಮಹಿಳೆಯರ ಗುರುತನ್ನು ಪೋಲೀಸರು ಎಲ್ಲಿಯೂ ಬಹಿರಂಗಪಡಿಸಿಲ್ಲ. ಇಷ್ಟಕ್ಕೂ ವೆಬ್ ಸೈಟ್ ನಲ್ಲಿ ಸಹ ನೊಂದಾವಣ್ಮೆ ಮಾಡುವಾಗ ಅವರ ಗುರುತನ್ನು ಎಲ್ಲಿಯೂ ಕೇಳಲಾಗುವುದಿಲ್ಲ.

ಕಳೆದ ಕೆಲ ವರ್ಷಗಳಿಂದ ಈ ವ್ಯವಸ್ಥೆ ಜಾರಿಯಲ್ಲಿದೆ.ಶಬರಿಮಲೆಗೆ ಎಲ್ಲಾ ವಯೋಮಾನದ ಮಹಿಳೆಯರ ಪ್ರವೇಶಕ್ಕೆ ಅವಕಾಶ ನೀಡಿ ಸುಪ್ರೀಂ ಕೋರ್ಟ್ ತೀರ್ಪು ನೀಡಿದ ಎರಡು ತಿಂಗಳ ಬಳಿಕ ಈ ಸಾಲಿನ ಆನ್ ಲೈನ್ ದರ್ಶನ ನೊಂದಣಿ ವ್ಯವಸ್ಥೆಯನ್ನು ಪರಿಚಯಿಸಲಾಗುತ್ತಿದೆ.

ಕಳೆದ ಎರಡು ತಿಂಗಳಿನಲ್ಲಿ ಎರಡು ಬಾರಿ ಅಯ್ಯಪ್ಪ ಸ್ವಾಮಿ ದೇವಸ್ಥಾನ ಭಕ್ತರಿಗಾಗಿ ತೆರೆಯಲ್ಪಟ್ಟಿದ್ದರೂ ನಿಷೇಧಿತ ವಯೋಮಾನದ ಯಾವೊಬ್ಬ ಮಹಿಳೆ ಸಹ ಸ್ವಾಮಿಯ ದರ್ಶನ ಪಡೆಯುವುದಕ್ಕೆ ಸಾಧ್ಯವಾಗಿರಲಿಲ್ಲ. ಅಲ್ಲದೆ ಸುಪ್ರೀಂ ತೀರ್ಪಿನ ವಿರುದ್ಧ ಕೆಲ ಹಿಂದೂ ಪರ ಸಂಘಟನೆಗಳು ಸೇರಿದಂತೆ ಸಾವಿರಾರು ಜನರು ನಿರಂತರ ಪ್ರತಿಭಟನೆ ನಡೆಸುತ್ತಾ ಮಹಿಳೆಯರನ್ನು ದರ್ಶನಕ್ಕೆ ತೆರಳದಂತೆ ತಡೆಯುತ್ತಿದ್ದರು.

550 women register online for entry to Sabarimala temple

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ