
ಬೆಂಗಳೂರು,ನ.9- ಚಳಿಗಾಲದ ಬೆಳಗಾವಿ ಅಧಿವೇಶನದಲ್ಲಿ ಶಿಕ್ಷಕರ ವರ್ಗಾವಣೆ ಕಾಯ್ದೆಯಲ್ಲಿರುವ ಅವೈಜ್ಞಾನಿಕ ನಿಯಮಗಳನ್ನು ತಿದ್ದುಪಡಿ ಮಾಡಬೇಕು, 2017-18ನೇ ಸಾಲಿನ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆಯಯನ್ನು ಮುಂದುವರೆಸಬೇಕೆಂದು ಒತ್ತಾಯಿಸಿ ಕರ್ನಾಟಕ ರಾಜ್ಯ ಶಿಕ್ಷಕರ ಹೋರಾಟ ಸಮಿತಿ ನೇತೃತ್ವದಲ್ಲಿ ಶಿಕ್ಷಕರು ಪ್ರತಿಭಟನೆ ಪ್ರಾರಂಭಿಸಿದ್ದಾರೆ.
ಕಳೆದ 2-3 ವರ್ಷಗಳಿಂದ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ಸ್ಥಗಿತವಾಗಿತ್ತು. ಆದರೆ 2017-18ನೇ ಸಾಲಿನಲ್ಲಿ ಶಿಕ್ಷಕರ ವರ್ಗಾವಣೆ ಆರಂಭವಾದಾಗ ಶಿಕ್ಷಕರಲ್ಲಿ ಸಂತಸ ಮೂಡಿತ್ತು. ಆದರೆ ಮುಖ್ಯಮಂತ್ರಿಗಳು ಶೈಕ್ಷಣಿಕ ಮಧ್ಯ ವರ್ಷದಲ್ಲಿ ವರ್ಗಾವಣೆ ಪ್ರಕ್ರಿಯೆ ಬೇಡ, ಮುಂದಿನ ವರ್ಷ ನಡೆಯಲಿ ಎಂದು ಅಧಿಕಾರಿಗಳಿಗೆ ಸೂಚಿಸಿರುವುದರಿಂದ ನಿರಾಸೆಯಾಗಿದೆ ಎಂದು ಸಿತಿಯ ಗೌರವಾಧ್ಯಕ್ಷ ಪವಾಡೆಪ್ಪ, ಧ್ಯಕ್ಷ ಮಾಲತೇಶ ಬಬ್ಬಜ್ಜಿ ಮತ್ತಿತರರು ತಿಳಿಸಿದ್ದಾರೆ.
ಯಾವುದೇ ಕಾರಣಕ್ಕೂ ವರ್ಗಾವಣೆ ಪ್ರಕ್ರಿಯೆ ನಿಲ್ಲಿಸಬಾರದು. ಕೌನ್ಸಿಲಿಂಗ್‍ನ್ನು ಈ ವರ್ಷವೇ ಮುಗಿಸಬೇಕು. ಮುಂದಿನ ಶೈಕ್ಷಣಿಕ ವರ್ಷದ ಆರಂಭದಲ್ಲಿ ವರ್ಗವಾದ ಶಾಲೆಗಳಿಗೆ ಶಿಕ್ಷಕರನ್ನು ನಿಯೋಜಿಸಬೇಕು ಎಂದು ಮುಖ್ಯಮಂತ್ರಿಗಳಲ್ಲಿ ಅವರು ಮನವಿ ಮಾಡಿದ್ದಾರೆ.
ಪ್ರತಿಭಟನೆಯಲ್ಲಿ ಮಹಿಳಾ ಶಿಕ್ಷಕಿಯೊಬ್ಬರು ಹಸುಗೂಸಿನೊಂದಿಗೆ ಪಾಲ್ಗೊಂಡಿದಿದ್ದು ಮನ ಕಲಕುವಂತಿತ್ತು.