ಹೊಸದಿಲ್ಲಿ: ದೇಶ ವಿಭಜನೆಯ ಸಂದರ್ಭದಲ್ಲಿ ಭಾರತ ಬಿಟ್ಟು ತೆರಳಿದ ವ್ಯಕ್ತಿಗಳು ಮತ್ತು ಸಂಸ್ಥೆಗಳಿಗೆ ಸೇರಿದ ‘ಶತ್ರುಗಳ ಆಸ್ತಿಗಳ’ ಷೇರುಗಳನ್ನು ಮಾರಾಟ ಮಾಡಲು ಸರಕಾರ ನಿರ್ಧರಿಸಿದೆ. ಶತ್ರುಗಳ ಆಸ್ತಿಯ ಪಾಲಕನಾಗಿ ಸರಕಾರ ಹೊಂದಿರುವ ಷೇರುಗಳನ್ನು ಹೂಡಿಕೆ ಹಿಂತೆಗೆತದ ಭಾಗವಾಗಿ ಮಾರಾಟ ಮಾಡಲು ನಿರ್ಧರಿಸಲಾಗಿದೆ ಎಂದು ಕಾನೂನು ಸಚಿವ ರವಿಶಂಕರ್ ಪ್ರಸಾದ್ ತಿಳಿಸಿದರು.
ಗುರುವಾರ ನಡೆದ ಸಂಪುಟ ಸಭೆಯಲ್ಲಿ ಈ ಬಗ್ಗೆ ನಿರ್ಧರಿಸಲಾಗಿದೆ ಎಂದು ಅವರು ಸುದ್ದಿಗಾರರಿಗೆ ಮಾಹಿತಿ ನೀಡಿದರು.
ಪ್ರಚಲಿತ ಮಾರುಕಟ್ಟೆ ಬೆಲೆ ಅನುಸಾರ ಈ ಆಸ್ತಿಗಳ ಒಟ್ಟು ಮೌಲ್ಯ ಅಂದಾಜು 3,000 ಕೋಟಿ ರೂ.ಗಳಷ್ಟಾಗಿದೆ. ಶತ್ರುಗಳ ಆಸ್ತಿ ಎಂಬ ವಿಶೇಷ ವಿಭಾಗವನ್ನು ರದ್ದುಪಡಿಸಲು ಸರಕಾರ ಇತ್ತೀಚೆಗೆ ಹೊಸ ಕಾಯ್ದೆ ರೂಪಿಸಿತ್ತು.
ಸದ್ಯದ ಪ್ರಸ್ತಾವದಂತೆ ಕೇವಲ ಷೇರುಗಳನ್ನಷ್ಟೇ ಮಾರಾಟ ಮಾಡಲು ನಿರ್ಧರಿಸಿದ್ದರೂ, ಲಖನೌದಲ್ಲಿರುವ ರಾಜಾ ಮಹ್ಮೂದಾಬಾದ್ನ ಬೃಹತ್ ಪ್ರಮಾಣದ ಆಸ್ತಿಗಳ ವಾರಸುದಾರರು ಕೋರ್ಟ್ ಮೆಟ್ಟಿಲೇರಿದ್ದಾರೆ.
ಒಟ್ಟು 996 ಕಂಪನಿಗಳ 20,000ಕ್ಕೂ ಹೆಚ್ಚು ಷೇರುದಾರರು ಇಂತಹ 6.5 ಕೋಟಿ ಷೇರುಗಳನ್ನು ಹೊಂದಿದ್ದಾರೆ. ಇವುಗಳ ಪೈಕಿ 588 ಕಂಪನಿಗಳು ಈಗಲೂ ಸಕ್ರಿಯವಾಗಿವೆ. ಇವುಗಳ ಪೈಕಿ 139 ಕಂಪನಿಗಳ ಷೇರುಗಳ ಮಾರಾಟಕ್ಕೆ ಪಟ್ಟಿ ಸಿದ್ಧಪಡಿಸಲಾಗಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.
ಪ್ರತಿಪಕ್ಷಗಳ ಆಕ್ಷೇಪದಿಂದಾಗಿ ಪ್ರಸ್ತುತ ಹೊಸ ಕಾಯ್ದೆ ಸಂಸತ್ತಿನಲ್ಲಿ ನನೆಗುದಿಯಲ್ಲಿದೆ. ಹೀಗಾಗಿ ಸುಗ್ರೀವಾಜ್ಞೆ ಮೂಲಕ ಹೊಸ ಕಾಯ್ದೆ ಜಾರಿಗೊಳಿಸಲಾಗಿದೆ.
‘ದಶಕಗಳಿಂದ ಉಪಯೋಗವಿಲ್ಲದೆ ಬಿದ್ದಿರುವ ಶತ್ರುಗಳ ಚರಾಸ್ತಿಗಳ ಮಾರಾಟದಿಂದ ಬರುವ ಹಣವನ್ನು ಜನೋಪಯೋಗಿ ಕಾರ್ಯಕ್ರಮಗಳಿಗೆ ಬಳಸಲಾಗುತ್ತದೆ’ ಎಂದು ಸಚಿವ ಪ್ರಸಾದ್ ತಿಳಿಸಿದರು.
ಇದರಿಂದ ಬಂಡವಾಳ ಹಿಂತೆಗೆತದ ಆದಾಯ ಸ್ವೀಕೃತಿ ಹೆಚ್ಚಲಿದ್ದು, 80,000 ಕೋಟಿ ರೂಗಳ ಗುರಿ ತಲುಪಲು ನೆರವಾಗಲಿದೆ ಎಂದು ನಿರೀಕ್ಷಿಸಲಾಗಿದೆ.
ಪ್ರಚಲಿತ ಆರ್ಥಿಕ ವರ್ಷದ 7 ತಿಂಗಳು ಈಗಾಗಲೇ ಮುಗಿದಿದ್ದು, ಸರಕಾರ ಈ ವರೆಗೆ 10,000 ಕೋಟಿ ರೂ.ಗಳನ್ನು ಮಾತ್ರ ಬಂಡವಾಳ ಹಿಂತೆಗೆತದಿಂದ ಗಳಿಸಿದೆ. ಹೀಗಾಗಿ ಒಟ್ಟಾರೆ ವಿತ್ತೀಯ ಕೊರತೆಯನ್ನು ನಿಭಾಯಿಸಲು ಸರಕಾರ ಬಹಳಷ್ಟು ಹೆಣಗಾಡಬೇಕಿದೆ.