ಬೆಂಗಳೂರು,ನ.9- ಮೂರು ಲೋಕಸಭೆ ಹಾಗೂ ಎರಡು ವಿಧಾನಸಬಾ ಕ್ಷೇತ್ರಗಳ ಉಪಚುನಾವಣೆ ಹಿನ್ನೆಲೆಯಲ್ಲಿ ಮುಂದೂಡಲ್ಪಟ್ಟಿದ್ದ ಪ್ರಸಕ್ತ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಸಮಾರಂಭವು ಇದೇ 15ರಂದು ನಡೆಯಲಿದೆ.
ಈ ಹಿಂದೆ ನ.1ರಂದು ನಿಗದಿಯಂತೆ ಕನ್ನಡ ರಾಜ್ಯೋತ್ಸವದಂದೇ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಬೇಕಿತ್ತು. ಆದರೆ ಬಳ್ಳಾರಿ, ಮಂಡ್ಯ, ಶಿವಮೊಗ್ಗ ಲೋಕಸ ಭಾ ಮತ್ತು ರಾಮನಗರ, ಜಮಖಂಡಿ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯ ನೀತಿಸಂಹಿತೆ ಜಾರಿಯಿದ್ದರಿಂದ ಸಮಾರಂಭವನ್ನು ಮುಂದೂಡಲಾಗಿತ್ತು.
ಇದೀಗ ಐದು ಕ್ಷೇತ್ರಗಳ ಫಲಿತಾಂಶ ಪ್ರಕಟಗೊಂಡು ನೀತಿ ಸಂಹಿತೆ ಅವಧಿ ಮುಗಿದಿರುವ ಕಾರಣ ರಾಜ್ಯ ಸರ್ಕಾರ ನ.15ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಹಮ್ಮಿಕೊಂಡಿದೆ.
ಸಾಹಿತ್ಯ, ಸಿನಿಮಾ, ಕ್ರೀಡೆ, ಸಮಾಜಸೇವೆ, ಪತ್ರಿಕೋದ್ಯಮ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ 63 ಮಂದಿ ಸಾಧಕರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ. ತಾಯಿ ಭುವನೇಶ್ವರಿಯ ಪ್ರತಿಮೆ, ನಗದು, ಫಲಕ, ಶಾಲು ಹಾಗೂ ಪ್ರಮಾಣಪತ್ರ ನೀಡಿ ಸನ್ಮಾನಿಸುವುದು ವಾಡಿಕೆಯಾಗಿದೆ.
ಈ ಬಾರಿ 63ನೇ ರಾಜ್ಯೋತ್ಸವವಾಗಿರುವ ಹಿನ್ನೆಲೆಯಲ್ಲಿ ಅಷ್ಟೇ ಸಂಖ್ಯೆಯ ಸಾಧಕರಿಗೆ ಪ್ರಶಸ್ತಿ ನೀಡಲಾಗುವುದು ಎಂದು ಸರ್ಕಾರದ ಮೂಲಗಳು ತಿಳಿಸಿವೆ.
ಇತ್ತೀಚಿನ ವರ್ಷಗಳಲ್ಲಿ ರಾಜ್ಯೋತ್ಸವ ಪ್ರಶಸ್ತಿ ನೀಡಲು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಅಧ್ಯಕ್ಷತೆಯಲ್ಲಿ ಸಮಿತಿಯೊಂದನ್ನು ರಚನೆ ಮಾಡಲಾಗುತ್ತದೆ. ಈ ಸಮಿತಿಯಲ್ಲಿ ಕೆಲವು ವಿವಿಧ ಕ್ಷೇತ್ರಗಳ ಸದಸ್ಯರನ್ನು ನೇಮಕ ಮಾಡಲಾಗುತ್ತದೆ.ಈ ಸಮಿತಿಯು ನೀಡುವ ಪಟ್ಟಿಯನ್ನೇ ಸರ್ಕಾರ ರಾಜ್ಯೋತ್ಸವ ಪ್ರಶಸ್ತಿಗೆ ಪರಿಗಣಿಸುತ್ತದೆ.