ಬೆಂಗಳೂರು, ನ.9- ರಸ್ತೆಗಳ ಗುಣಮಟ್ಟದ ವಿಚಾರದಲ್ಲಿ ರಾಜಿಯಾಗುವುದಿಲ್ಲ ಎಂದು ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ತಿಳಿಸಿದರು.
ಲೋಕೋಪಯೋಗಿ, ಬಂದರು, ಒಳಸಾರಿಗೆ ಇಲಾಖೆ ವಿಧಾನಸೌಧದ ಮುಂಭಾಗ ನಡೆದ ಯೋಜನೆ ಮತ್ತು ಆಸ್ತಿ ನಿರ್ವಹಣೆ ಕೇಂದ್ರ ಕಾರ್ಯಾಚರಣೆ ಹಾಗೂ ತಂತ್ರಾಂಶ ಕೈಪಿಡಿ ಬಿಡುಗಡೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ರಸ್ತೆಗಳ ಗುಣಮಟ್ಟ ನಿರ್ವಹಣೆಗೆ ಅತ್ಯಾಧುನಿಕ ಯಂತ್ರ ಹಾಗೂ ಸಾಧನಗಳನ್ನು ಬಳಸಲಾಗುತ್ತಿದೆ. ಕೈಪಿಡಿಯಲ್ಲಿನ ಅಂಶಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರಬೇಕೆಂದು ಸೂಚಿಸಿದರು.
ಸೇತುವೆ ತಪಾಸಣಾ ವಾಹನದಿಂದ ಸೇತುವೆ ನಿರ್ಮಾಣಗೊಂಡಿರುವ ಆಳ ಮತ್ತು ಗುಣ ಮಟ್ಟವನ್ನು ಅಳೆಯಲು ಸಾಧ್ಯವಾಗುತ್ತಿದೆ. ರಸ್ತೆ ಗುಣಮಟ್ಟ ಪರಿಶೀಲನಾ ಯಂತ್ರದಿಂದ ಪ್ರತಿ ನಿತ್ಯ 40 ಕಿ.ಮೀ ನಷ್ಟು ರಸ್ತೆಗಳನ್ನು ಪರಿಶೀಲಿಸಲು ಸಾಧ್ಯವಿದೆ. ಅಂತಹ ಸಾಮಥ್ರ್ಯವನ್ನು ಆ ಯಂತ್ರ ಪಡೆದಿದ್ದು, ಬಳಕೆ ಮಾಡಲಾಗುತ್ತಿದೆ.
ರಾಜ್ಯ ಹಾಗೂ ರಾಷ್ಟ್ರೀಯ ಹೆದ್ದಾರಿಗಳಲ್ಲಿ ವಿವಿಧ ಕಾಮಗಾರಿಗಳನ್ನು ಹಂತ ಹಂತವಾಗಿ ಕೈಗೆತ್ತಿಕೊಳ್ಳಲಾಗುತ್ತಿದ್ದು, ರಾಜ್ಯ ಹೆದ್ದಾರಿಯಲ್ಲಿ 4900 ಕಿ.ಮೀ. ರಸ್ತೆಯನ್ನು ಅಭಿವೃದ್ಧಿಗೊಳಿಸಲಾಗುತ್ತಿದ್ದು, ಮೂರು ವರ್ಷದ ಅವಧಿಯಲ್ಲಿ ಸುಮಾರು 8400 ಕೋಟಿ ರೂ. ವೆಚ್ಚದಲ್ಲಿ ಈ ಕಾಮಗಾರಿ ನಡೆಸಲಾಗುತ್ತಿದೆ. ಅದೇ ರೀತಿ 1500 ಕಿ.ಮೀ. ಉದ್ದದ ರಸ್ತೆಯನ್ನು ಕೇಶಿಪ್ ನಾಲ್ಕನೇ ಹಂತದಲ್ಲಿ ನಡೆಸಲಾಗುತ್ತಿದ್ದು, ಇದಕ್ಕಾಗಿ 6000 ಕೋಟಿ ವೆಚ್ಚ ಮಾಡಲಾಗುತ್ತಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ 2900 ಕೋಟಿ ರೂ.ಗಳಲ್ಲಿ ಕಾಮಗಾರಿ ನಡೆಸಲಾಗುತ್ತಿದೆ ಎಂದು ವಿವರಣೆ ನೀಡಿದರು.
ಸಚಿವ ಆರ್.ವಿ.ದೇಶಪಾಂಡೆ ಮಾತನಾಡಿ, ಸೇತುವೆ ತಪಾಸಣೆ ವಾಹನ ಮೊದಲ ಬಾರಿಗೆ ರಾಜ್ಯದಲ್ಲಿ ಕಾರ್ಯ ನಿರ್ವಹಿಸಲು ಆರಂಭಿಸಿದೆ. ರಸ್ತೆಗಳ ಗುಣಮಟ್ಟ ಕುಸಿಯುತ್ತಿದ್ದು, ಇದರ ನಿರ್ವಹಣೆಗಾಗಿ ರೇವಣ್ಣ ಅವರು ಯಂತ್ರಗಳ ಮೂಲಕ ಅದರ ಸುರಕ್ಷತೆ ಕಾಪಾಡಲು ಮುಂದಾಗಿರುವುದು ಉತ್ತಮ ಕೆಲಸ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಮಲೆನಾಡು ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಹೆಚ್ಚು ಕಾಂಕ್ರೀಟ್ ರಸ್ತೆಗಳನ್ನು ನಿರ್ಮಿಸುವಂತೆ ಇದೇ ವೇಳೆ ಸಚಿವರು ಸಲಹೆ ಮಾಡಿದರು.
ಸರ್ಕಾರದ ಮುಖ್ಯಕಾರ್ಯದರ್ಶಿ ವಿಜಯ್ಭಾಸ್ಕರ್, ಲೋಕೋಪಯೋಗಿ ಇಲಾಖೆಯ ಹೆಚ್ಚುವರಿ ಮುಖ್ಯಕಾರ್ಯದರ್ಶಿ ರಜನೀಸ್ ಗೋಯಲ್, ಮುಖ್ಯಕಾರ್ಯದರ್ಶಿ ಡಾ.ಕೃಷ್ಣಾರೆಡ್ಡಿ, ಮಾಜಿ ಸಚಿವ ರೋಷನ್ ಬೇಗ್, ಏಷ್ಯಾ ಅಭಿವೃದ್ಧಿ ಬ್ಯಾಂಕ್ನ ಅಧಿಕಾರಿಗಳು ಮತ್ತು ರಾಜ್ಯದ ತಂಡದ ಅಧಿಕಾರಿಗಳು ಉಪಸ್ಥಿತರಿದ್ದರು.