ಬೆಂಗಳೂರು, ನ.9- ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಇಂದಿನಿಂದ ಮೂರು ದಿನಗಳ ಕಾಲ ವಿಶ್ರಾಂತಿ ಪಡೆಯಲಿದ್ದಾರೆ. ವೈದ್ಯರ ಸಲಹೆ ಮೇರೆಗೆ ಕುಟುಂಬ ಸದಸ್ಯರೊಂದಿಗೆ ಸಿಎಂ ವಿಶ್ರಾಂತಿ ಪಡೆಯಲಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಮೈಸೂರು ಜಿಲ್ಲೆಯ ಖಾಸಗಿ ಸ್ಥಳದಲ್ಲಿ ಮೂರು ದಿನಗಳ ಕಾಲ ವಾಸ್ತವ್ಯ ಹೂಡಲಿರುವುದರಿಂದ ಯಾವುದೇ ಅಧಿಕೃತ ಕಾರ್ಯಕ್ರಮಗಳು ಇರುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.
ಉಪ ಚುನಾವಣೆ ಪ್ರಚಾರದ ನಂತರ ವಿಶ್ರಾಂತಿ ಪಡೆಯುವಂತೆ ಮುಖ್ಯಮಂತ್ರಿಗೆ ವೈದ್ಯರು ಸಲಹೆ ಮಾಡಿದ್ದರು. ಅದರಂತೆ ಸಿಎಂ ವಿಶ್ರಾಂತಿ ಪಡೆಯುತ್ತಿದ್ದಾರೆ.
ನಾಳೆ ನಡೆಯಲಿರುವ ಟಿಪ್ಪು ಸುಲ್ತಾನ್ ಜಯಂತಿಯಲ್ಲೂ ಕೂಡ ಮುಖ್ಯಮಂತ್ರಿ ಪಾಲ್ಗೊಳ್ಳುತ್ತಿಲ್ಲ. ಕಳೆದ ಮೂರು ದಿನಗಳಿಂದಲೂ ಸರ್ಕಾರಿ ಕಾರ್ಯಕ್ರಮಗಳಲ್ಲಿ ಅಷ್ಟಾಗಿ ಮುಖ್ಯಮಂತ್ರಿ ತೊಡಗಿಸಿಕೊಂಡಿರಲಿಲ್ಲ. ಸರ್ಕಾರಿ ರಜೆ ಇದ್ದುದ್ದರಿಂದ ಸರ್ಕಾರದ ಅಧಿಕೃತ ಕಾರ್ಯಕ್ರಮಗಳು ನಿಗದಿಯಾಗಿರಲಿಲ್ಲ.
ಇಂದು ಮೈಸೂರು ಜಿಲ್ಲೆಗೆ ತೆರಳಿರುವ ಮುಖ್ಯಮಂತ್ರಿಯವರು ಭಾನುವಾರ ಸಂಜೆ ಬೆಂಗಳೂರಿಗೆ ವಾಪಸಾಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಕುಮಾರಸ್ವಾಮಿ ಅವರೊಂದಿಗೆ ಶಾಸಕಿ ಹಾಗೂ ಕುಮಾರಸ್ವಾಮಿ ಅವರ ಪತ್ನಿ ಅನಿತಾ ಕುಮಾರಸ್ವಾಮಿ, ಪುತ್ರ ನಿಖಿಲ್ ಕುಮಾರಸ್ವಾಮಿ ಅವರು ಕೂಡ ಮೂರು ದಿನಗಳ ಕಾಲ ಸಿಎಂ ಜತೆ ಇರಲಿದ್ದಾರೆ.