ಜನಾರ್ದನ್ ರೆಡ್ಡಿ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ ಹೇಳುವುದೇನು ಗೊತ್ತಾ?​

ಬೆಂಗಳೂರು: ಅಂಬಿಡೆಂಟ್ ಸಂಸ್ಥೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದ (ಇ.ಡಿ.) ಹೆಸರು ಕೇಳಿ ಬಂದಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಇ.ಡಿ. ಅಧಿಕಾರಿಗಳು, ‘ಅಂಬಿಡೆಂಟ್ ಕಂಪನಿ ವಿರುದ್ಧ ನಾವು ಯಾವುದೇ ತನಿಖೆ ನಡೆಸಿಲ್ಲ. ಹೀಗಿರುವಾಗ, ಈ ಪ್ರಕರಣದಲ್ಲಿ ನಿರ್ದೇಶನಾಲಯದ ಹೆಸರು ಏಕೆ ಬಂತೋ ಗೊತ್ತಾಗುತ್ತಿಲ್ಲ’ ಎಂದು ಹೇಳಿದ್ದಾರೆ.
ಈ ಬಗ್ಗೆ ಮಾತನಾಡಿದ ಇ.ಡಿ.ಅಧಿಕಾರಿಯೊಬ್ಬರು, ‘ಫರೀದ್ ಯಾವುದೇ ಏಜೆನ್ಸಿಗೆ ಮಾಹಿತಿ ನೀಡದೇ ಗೌಪ್ಯವಾಗಿ ದುಬೈನಲ್ಲಿ ಒಂದು ಕಂಪನಿ ಪ್ರಾರಂಭಿಸಿದ್ದರು. ಅಲ್ಲಿ ವಿದೇಶಿ ಕರೆನ್ಸಿ ಬದಲಾವಣೆಯ ವಹಿವಾಟು ನಡೆಯುತ್ತಿತ್ತು. ಅದನ್ನು ‘ಫೋರೆಕ್ಸ್ ಟ್ರೇಡಿಂಗ್’ ಎಂದು ಕರೆಯಲಾಗುತ್ತದೆ. ನಾವು ಆ ಕಂಪನಿ ವಿರುದ್ಧ ತನಿಖೆ ನಡೆಸಿದ್ದೆವೋ ಹೊರತು, ಆ್ಯಂಬಿಡೆಂಟ್ ಕಂಪನಿ ವಿರುದ್ಧವಲ್ಲ’ ಎಂದು ಸ್ಪಷ್ಟಪಡಿಸಿದರು.

‘ವಿದೇಶಿ ಕಂಪನಿ ಬಗ್ಗೆ ಮಾಹಿತಿ ಬರುತ್ತಿದ್ದಂತೆಯೇ ಜನವರಿಯಲ್ಲಿ ನಗರದ ಕಚೇರಿ ಮೇಲೆ ದಾಳಿ ನಡೆಸಿ ದಾಖಲೆ ಪರಿಶೀಲಿಸಲಾಗಿತ್ತು. ಆಗ, ದುಬೈ ಕಂಪನಿಯಲ್ಲಿ  4 ಕೋಟಿ ರೂ. ವ್ಯವಹಾರ ನಡೆದಿರುವುದು ಗಮನಕ್ಕೆ ಬಂದಿತ್ತು. ಹೀಗಾಗಿ, ‘ಫೆಮಾ ಆ್ಯಕ್ಟ್‌ನ (ವಿದೇಶಿ ವಿನಿಮಯ ವ್ಯವಹಾರ ಉಲ್ಲಂಘನೆ ಕಾಯಿದೆ) ನಿಯಮಗಳನ್ನು ಉಲ್ಲಂಘಿಸಿದ್ದೀರಾ. ನಿಮಗೆ ಯಾಕೆ ದಂಡ ವಿಧಿಸಬಾರದು’ ಎಂದು ಫರೀದ್‌ಗೆ ನೋಟಿಸ್ ನೀಡಿದ್ದೆವು. ಈ ಬಗ್ಗೆ ವಿಚಾರಣೆ ಎದುರಿಸಿದ್ದ ಅವರು, ತಪ್ಪು ಒಪ್ಪಿಕೊಂಡು  2 ಕೋಟಿ ರೂ. ದಂಡ ಕಟ್ಟಿದ್ದರು. ಈ ಮೂಲಕ ಪ್ರಕರಣ ಇತ್ಯರ್ಥವಾಗಿತ್ತು’ಎನ್ನುತ್ತಾರೆ ಅವರು.
‘ದುಬೈ ಕಂಪನಿಯ ತನಿಖೆ ವೇಳೆ ಫರೀದ್‌ ನಗರದಲ್ಲೂ ಅಕ್ರಮವಾಗಿ ಅಬಿಡೆಂಟ್ ಹೆಸರಿನಲ್ಲಿ ಕಂಪನಿ ನಡೆಸುತ್ತಿರುವುದು ಗಮನಕ್ಕೆ ಬಂದಿತ್ತು. ಈ ಬಗ್ಗೆ ಆರ್‌ಬಿಐಗೆ ಪತ್ರ ಬರೆದು ಮಾಹಿತಿ ನೀಡಿದ್ದೆವು. ಆ ನಂತರ, ‘ಅಂಬಿಡೆಂಟ್ ಕಂಪನಿ ವಿರುದ್ಧ ಗ್ರಾಹಕರು ದೂರುಗಳನ್ನು ಕೊಟ್ಟಿದ್ದಾರಂತೆ. ಆ ಕಂಪನಿ ವಿರುದ್ಧ ಕೆಪಿಐಡಿ (ಕರ್ನಾಟಕ ಪ್ರೊಟೆಕ್ಷನ್ ಆಫ್ ಇಂಟರೆಸ್ಟ್ ಆಫ್ ಡೆಪಾಸಿಟ್ ಫೈನಾನ್ಶಿಯಲ್) ಕಾಯ್ದೆಯಡಿ ಯಾಕೆ ಕ್ರಮ ತೆಗೆದುಕೊಳ್ಳಬಾರದು’ ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಆರ್‌ಬಿಐ ಪತ್ರ ಬರೆದಿತ್ತು’ ಎನ್ನುತ್ತಾರೆ ಅಧಿಕಾರಿಗಳು.
ಅದರ ಬೆನ್ನಲ್ಲೇ ಮುಖ್ಯಕಾರ್ಯದರ್ಶಿ ಅವರು ತಮ್ಮ ಜಿಲ್ಲೆಗಳ ವ್ಯಾಪ್ತಿಯಲ್ಲಿ ‘ಅಂಬಿಡೆಂಟ್’ ಕಂಪನಿ ವಿರುದ್ಧ ಯಾವುದಾದರೂ ಪ್ರಕರಣಗಳು ದಾಖಲಾಗಿವೆಯೇ ಎಂದು ಪೊಲೀಸರಿಂದ ಹಾಗೂ ಜಿಲ್ಲಾಧಿಕಾರಿಗಳಿಂದ ಮಾಹಿತಿ ಕೋರಿದ್ದರು. ಆಗ ದೇವರಜೀವನಹಳ್ಳಿ ಠಾಣೆಯಲ್ಲಿ ದೂರುಗಳು ದಾಖಲಾಗಿರುವುದು ಗೊತ್ತಾಗಿತ್ತು. ಈ ಬೆಳವಣಿಗೆಗಳ ನಂತರ ಪ್ರಕರಣ ಸಿಸಿಬಿಗೆ ವರ್ಗಾವಣೆಯಾಗಿತ್ತು. ಆದರೆ, ಇ.ಡಿ ಹೆಸರು ತಂದಿರುವುದು ಸರಿಯಲ್ಲ. ಈ ಬಗ್ಗೆ ಸಿಸಿಬಿಗೆ ಮಾಹಿತಿ ಕೋರುತ್ತೇವೆ’ ಎಂದು ಹೇಳಿದರು.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ