ಅಹಮದಾಬಾದ್, ನ.7- ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಫೈಜಾಬಾದ್ ಜಿಲ್ಲೆಯನ್ನು ಅಯೋಧ್ಯೆ ಎಂದು ಮರು ನಾಮಕರಣ ಮಾಡಿದ ಬೆನ್ನಲ್ಲೆ ಗುಜರಾತ್ನ ಅಹಮದಾಬಾದ್ ನಗರವನ್ನು ಕರ್ಣವತಿ ಎಂದು ಹೆಸರು ಬದಲಾವಣೆ ಮಾಡಲು ಸಿದ್ಧವಿರುವುದಾಗಿ ಗುಜರಾತ್ ಸರ್ಕಾರ ಹೇಳಿದೆ.
ಗಾಂಧಿನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಗುಜರಾತ್ ಉಪಮುಖ್ಯಮಂತ್ರಿ ನಿತಿನ್ ಪಟೇಲ್, ಕಾನೂನು ಅಡಚಣೆಗಳು ಎದುರಾದರೆ ಅಗತ್ಯ ಬೆಂಬಲ ಪಡೆದು ಅಹಮದಾಬಾದ್ ನಗರದ ಹೆಸರು ಬದಲಾವಣೆ ಮಾಡಲಾಗುವುದು ಎಂದು ತಿಳಿಸಿದರು.
ಅಹಮದಾಬಾದ್ಗೆ ಕರ್ಣವತಿ ಎಂದು ಮರುನಾಮಕರಣ ಮಾಡಬೇಕೆಂದು ಜನರು ಬಯಸುತ್ತಿದ್ದಾರೆ. ಒಂದು ವೇಳೆ ಎಲ್ಲಾ ಕಾನೂನು ತೊಡಕುಗಳು ನಿವಾರಣೆಯಾದರೆ ಹೆಸರು ಬದಲಾವಣೆ ಮಾಡಲು ಸದಾ ಸಿದ್ಧರಿದ್ದೇವೆ ಎಂದರು.
ಕ್ರಿ. ಶ.11ನೆ ಶತಮಾನದಲ್ಲಿ ಚಾಲುಕ್ಯ ದೊರೆ ಕರ್ಣ ಸಬರಿಮತಿ ನದಿ ದಂಡೆಯ ಮೇಲೆ ಕರ್ಣವತಿ ನಗರವನ್ನು ಸ್ಥಾಪಿಸಿದ್ದರು. ಆದರೆ, ಸುಲ್ತಾನ ಅಹಮದ್ ಷಾ ಕ್ರಿ.ಶ.1411ರಲ್ಲಿ ಕರ್ಣವತಿ ನಗರದ ಹೆಸರು ಬದಲಾಯಿಸಿ ಅಹಮದಾಬಾದ್ ಎಂದು ಮರುನಾಮಕರಣ ಮಾಡಿದ್ದರು.
ಅಹಮದಾಬಾದ್ ನಗರದ ಹೆಸರು ಬದಲಾವಣೆ ಮಾಡುವ ವಿಚಾರ ಆಡಳಿತಾರೂಢ ಬಿಜೆಪಿ ಸರ್ಕಾರದ ರಾಜಕೀಯ ಗಿಮಿಕ್ ಎಂದು ಗುಜರಾತ್ ಕಾಂಗ್ರೆಸ್ ಘಟಕದ ವಕ್ತಾರ ಮನೀಷ್ ದೋಷಿ ಆರೋಪಿಸಿದ್ದಾರೆ.
ಹಿಂದೂಗಳ ಮತ ಪಡೆಯುವ ನಿಟ್ಟಿನಲ್ಲಿ ಅಯೋಧ್ಯೆಯಲ್ಲಿ ರಾಮಮಂದಿರ, ಅಹಮದಾಬಾದ್ ನಗರವನ್ನು ಕರ್ಣವತಿ ನಗರ ಎಂದು ಮರು ನಾಮಕರಣ ಮಾಡುವ ನಾಟಕವಾಡುತ್ತಿದೆ ಎಂದು ಅವರು ಹೇಳಿದ್ದಾರೆ.