ವಾಷಿಂಗ್ಟನ್,ನ.7-ಜಾಗತಿಕ ವಾಣಿಜ್ಯರಂಗದಿಂದ ಇರಾನ್ ದೇಶವನ್ನು ಪ್ರತ್ಯೇಕಿಸುವ ನಿಟ್ಟಿನಲ್ಲಿ ಬಿಗಿ ನಿಷೇಧಗಳನ್ನು ಹೇರಿರುವ ಅಮೆರಿಕ, ಇರಾನ್ನಲ್ಲಿನ ಚಾಬಹಾರ್ ಬಂದರು ಅಭಿವೃದ್ದಿಗಾಗಿ ಭಾರತಕ್ಕೆ ಈ ನಿಷೇಧದಿಂದ ಕೆಲವು ರಿಯಾಯಿತಿಗಳನ್ನು ನೀಡಿದೆ.
ಗಲ್ಫ್ ಆಫ್ ಓಮಾನ್ನಲ್ಲಿನ ಚಾಬಹಾರ್ ಬಂದರನ್ನು ಅಭಿವೃದ್ಧಿ ಪಡಿಸುವಲ್ಲಿ ಭಾರತ ವಹಿಸಿರುವ ಮಹತ್ತರ ಪಾತ್ರವನ್ನು ವಾಷಿಂಗ್ಟನ್ ಮಾನ್ಯ ಮಾಡಿರುವುದಕ್ಕೆ ಈ ರಿಯಾಯಿತಿ ಸಾಕ್ಷಿಯಾಗಿದೆ.
ಅಷ್ಟೇ ಅಲ್ಲದೆ ಈ ಬಂದರನ್ನು ಅಫ್ಘಾನಿಸ್ತಾನವನ್ನು ಜೋಡಿಸುವಲ್ಲಿ ಭಾರತ ಕೈಗೊಂಡಿರುವ ರೈಲು ಮಾರ್ಗ ನಿರ್ಮಾಣ ಕಾರ್ಯಕ್ಕೂ ಅಮೆರಿಕ ಕೆಲವು ರಿಯಾಯಿತಿಗಳನ್ನು ನೀಡಿದೆ.
ಇರಾನ್ ಮೇಲಿನ ಅಮೆರಿಕದ ಕಟ್ಟು ನಿಟ್ಟಿನ ನಿಷೇಧಗಳು ಜಾರಿಗೆ ಬಂದ ಒಂದು ದಿನದ ತರುವಾಯ ವಾಷಿಂಗ್ಟನ್, ಭಾರತಕ್ಕೆ ನೀಡಿರುವ ನಿಷೇದ-ರಿಯಾಯಿತಿಗಳು ಟ್ರಂಪ್ ಆಡಳಿತೆಯ ಅತ್ಯಾಶ್ಚರ್ಯದ ಕ್ರಮವೆಂದು ವಿಶ್ಲೇಷಕರಿಂದ ಪರಿಗಣಿತವಾಗಿದೆ.
ಸಮರ ತ್ರಸ್ತ ಅಫ್ಘಾನಿಸ್ಥಾನವನ್ನು ಅಭಿವೃದ್ಧಿಪಡಿಸುವ ದಿಶೆಯಲ್ಲಿ ಇರಾನ್ನಲ್ಲಿನ ಚಾಬಹಾರ್ ಬಂದರು ಅಮೆರಿಕ ಮತ್ತು ಭಾರತಕ್ಕೆ ಅತ್ಯಂತ ವ್ಯೂಹಾತ್ಮಕ ಮಹತ್ವದ ಬಂದರು ಆಗಿರುವುದೇ ವಾಷಿಂಗ್ಟನ್ ನಿಷೇಧ-ರಿಯಾಯಿತಿಗೆ ಕಾರಣವೆಂದು ತಿಳಿಯಲಾಗಿದೆ.