ನಗರದ ರಸ್ತೆಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸುವಿಕೆಯಿಂದ ಅಪರಾಧ ಚಟುವಟಿಕೆಗಳ ನಿಯಂತ್ರಣ ಸಾಧ್ಯ, ಶಾಸಕ ವಿ.ಸೋಮಣ್ಣ:

ಬೆಂಗಳೂರು, ನ.7- ನಗರದ ರಸ್ತೆಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸುವುದರಿಂದ ಅಪರಾಧ ಚಟುವಟಿಕೆಗಳನ್ನು ಹತ್ತಿಕ್ಕಲು ಸಾಧ್ಯವಾಗುತ್ತಿದೆ ಎಂದು ಶಾಸಕ ವಿ.ಸೋಮಣ್ಣ ಅಭಿಪ್ರಾಯಪಟ್ಟರು.

ಗೋವಿಂದರಾಜನಗರ ವಾರ್ಡ್‍ನಲ್ಲಿ ಎಲ್ಲ ರಸ್ತೆ, ಬೀದಿ ಬದಿಗಳಲ್ಲಿ ಅಳವಡಿಸಲಾಗಿರುವ ಸಿಸಿ ಕ್ಯಾಮೆರಾಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.

ಗೋವಿಂದರಾಜನಗರ ವಾರ್ಡ್‍ನಲ್ಲಿ ಆ್ಯಕ್ಟ್ ಸಂಸ್ಥೆಯ ಸಹಯೋಗದಲ್ಲಿ 175 ಸಿಸಿ ಕ್ಯಾಮೆರಾ ಅಳವಡಿಸಲಾಗುತ್ತಿದೆ. ಇದೇ ರೀತಿ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ಎಲ್ಲ ವಾರ್ಡ್‍ಗಳಲ್ಲೂ ಅಳವಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಭರವಸೆ ನೀಡಿದರು.

ಇಡೀ ವಾರ್ಡ್‍ಗೆ ಸಿಸಿ ಕ್ಯಾಮೆರಾ ಅಳವಡಿಸಲಾಗಿದ್ದು, ಪಾಲಿಕೆ ಸದಸ್ಯರ ಕಚೇರಿಯಲ್ಲಿ ನಿರ್ಮಿಸಲಾಗಿರುವ ನಿಯಂತ್ರಣ ಕೊಠಡಿಯಲ್ಲಿ ಕುಳಿತುಕೊಂಡೇ ಇಡೀ ವಾರ್ಡ್‍ನ ಸಿಸಿ ಕ್ಯಾಮೆರಾದ ದೃಶ್ಯಾವಳಿಗಳನ್ನು ಗಮನಿಸಬಹುದಾಗಿದೆ ಎಂದು ಸೋಮಣ್ಣ ವಿವರಿಸಿದರು.
ಈ ರೀತಿ ಸಿಸಿ ಕ್ಯಾಮೆರಾ ಅಳವಡಿಸುವುದರಿಂದ ಸರಗಳ್ಳತನ, ಸಮಾಜಘಾತುಕ ಚಟುವಟಿಕೆ, ಗೂಂಡಾ ಚಟುವಟಿಕೆ, ವಾಹನ ಕಳ್ಳತನ ಮತ್ತಿತರ ಅಪರಾಧ ಕೃತ್ಯಗಳನ್ನು ತಪ್ಪಿಸಬಹುದು ಎಂದು ಹೇಳಿದರು.

ಬಿಬಿಎಂಪಿ ಸದಸ್ಯ ಉಮೇಶ್‍ಶೆಟ್ಟಿ ಮಾತನಾಡಿ, ಪ್ರತಿನಿತ್ಯ ಸಿಸಿ ಕ್ಯಾಮೆರಾದ ದೃಶ್ಯಾವಳಿಗಳನ್ನು ಗಮನಿಸಲಾಗುವುದು. ಯಾವುದೇ ಪ್ರದೇಶದಲ್ಲಿ ಕಾನೂನು ಬಾಹಿರ ಚಟುವಟಿಕೆಗಳು ಸಂಭವಿಸಿದರೆ ಕೂಡಲೇ ಪೆÇಲೀಸರಿಗೆ ಮಾಹಿತಿ ನೀಡಲಾಗುವುದು ಎಂದರು.
ಸಾರ್ವಜನಿಕರ ಸುರಕ್ಷತೆ, ರಕ್ಷಣೆ ಪ್ರತಿಯೊಬ್ಬ ಜನಪ್ರತಿನಿಧಿಯ ಆದ್ಯ ಕರ್ತವ್ಯ. ಹೀಗಾಗಿ ನಾಗರಿಕರ ಅನುಕೂಲಕ್ಕಾಗಿ ಇಡೀ ವಾರ್ಡ್‍ನಾದ್ಯಂತ ಸಿಸಿ ಕ್ಯಾಮೆರಾ ಅಳವಡಿಸಿದ್ದೇವೆ. ಇನ್ನು ಮುಂದೆ ಯಾವುದೇ ಸಮಯದಲ್ಲಿ ಮಹಿಳೆಯರು ಮತ್ತು ಮಕ್ಕಳು ತಮ್ಮ ಪ್ರದೇಶದಲ್ಲಿ ಮುಕ್ತವಾಗಿ ಸಂಚರಿಸಬಹುದಾಗಿದೆ ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಅರುಣ್ ಸೋಮಣ್ಣ ಮತ್ತಿತರರು ಹಾಜರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ