ನವದೆಹಲಿ, ನ.7-ಕೇಂದ್ರ ಸರ್ಕಾರ ಮತ್ತು ಭಾರತೀಯ ರಿಸರ್ವ್ ಬ್ಯಾಂಕ್(ಆರ್‍ಬಿಐ) ನಡುವೆ ನಡೆಯುತ್ತಿರುವ ಜಟಾಪಟಿ ಸಂದರ್ಭದಲ್ಲೇ ಈ ಹಿಂದೆ ಆರ್‍ಬಿಐ ಗೌರ್ನರ್, ಕೇಂದ್ರದ ಹಣಕಾಸು ಸಚಿವರೂ ಆಗಿದ್ದ ಖ್ಯಾತ ಅರ್ಥಶಾಸ್ತ್ರಜ್ಞ ಮತ್ತು ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಪುಸ್ತಕವೊಂದರಲ್ಲಿ ಬ್ಯಾಂಕ್ ಮತ್ತು ಕೇಂದ್ರದ ಅಧಿಕಾರ ವ್ಯಾಪ್ತಿಗಳ ಬಗ್ಗೆ ಹೇಳಿರುವ ಮಾತುಗಳು ಈ ಸಂದರ್ಭದಲ್ಲಿ ಉಲ್ಲೇಖಾರ್ಹವಾಗಿದೆ.
ಆರ್‍ಬಿಐ ಗೌರ್ನರ್ ಪರಮಾಧಿಕಾರಿಯಲ್ಲ. ಅವರು ಕೇಂದ್ರದ ಹಣಕಾಸು ಸಚಿವರಿಗಿಂತ ಹೆಚ್ಚಿನ ಅಧಿಕಾರ ಹೊಂದಿರುವುದಿಲ್ಲ. ಭಾರತೀಯ ರಿಸರ್ವ್ ವ್ಯಾಂಕ್‍ನ ಗೌರ್ನರ್ ಎಂದಿಗೂ ವಿತ್ತ ಮಂತ್ರಿಗಿಂತಲೂ ಸುಪ್ರೀಂ ಅಲ್ಲವೇ ಅಲ್ಲ ಎಂದು ಡಾ. ಸಿಂಗ್ ಹೇಳಿದ್ದಾರೆ.
ತಮ್ಮ ಮಗಳು ಮತ್ತು ಖ್ಯಾತ ಲೇಖಕಿ ದಾಮನ್ ಸಿಂಗ್ 2014ರಲ್ಲಿ ಬರೆದಿರುವ ಸ್ಟ್ರಿಕ್‍ಟ್ಲಿ ಪರ್ಸನಲ್ : ಮನಮೋಹನ್ ಸಿಂಗ್ ಅಂಡ್ ಗುರುಶರಣ್ ಎಂಬ ಪುಸ್ತಕದಲ್ಲಿ ಮಾಜಿ ಪ್ರಧಾನಿ ಇದನ್ನು ತಿಳಿಸಿದ್ದಾರೆ.
ತಾವು ಆರ್‍ಬಿಐ ಗೌರ್ನರ್ ಆಗಿದ್ದಾಗ ಕೆಲವು ಸನ್ನಿವೇಶಗಳನ್ನು ಅವರು ಉಲ್ಲೇಖಿಸಿದ್ದಾರೆ.
ಅಲ್ಲಿ ಯಾವಾಗಲೂ ಕೊಡು ಮತ್ತು ತೆಗೆದುಕೊಳ್ಳುವಿಕೆ(ಗೀವ್ ಅಂಡ್ ಟೇಕ್) ಇರುತ್ತದೆ. ನಾನು ಸರ್ಕಾರವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕಿತ್ತು. ಅಲ್ಲಿ ಕೇಂದ್ರದ ಹಣಕಾಸು ಸಚಿವರೇ ಪರಮಾಧಿಕಾರ ಹೊಂದಿರುತ್ತಾರೆ. ಆರ್‍ಬಿಐ ಗೌರ್ನರ್ ವಿತ್ತ ಮಂತ್ರಿಗಿಂತ ಮೇಲ್ಪಟ್ಟವರಲ್ಲ. ಹಣಕಾಸು ಸಚಿವರು ಹೇಳಿದ್ದನ್ನು ಅವರು ಪಾಲಿಸಬೇಕಾಗುತ್ತದೆ. ಸಚಿವರ ಮಾತನ್ನು ಮಾನ್ಯ ಮಾಡದಿರಲು ಸಾಧ್ಯವಿಲ್ಲ ಎಂಬ ತನ್ನ ಸ್ವಯಂ ಅನುಭವವನ್ನು ಪುಸ್ತಕದಲ್ಲಿ ತಿಳಿಸಿದ್ದಾರೆ.