ನವದೆಹಲಿ, ನ.7- ಕಳೆದ 2016ರಲ್ಲಿ ನೋಟು ಅಮಾನ್ಯೀಕರಣಗೊಳಿಸುವಾಗ ವಿರೋಧ ವ್ಯಕ್ತಪಡಿಸದೆ ಒಳ್ಳೆಯದು ಎಂದು ಹೇಳಿದ್ದ ರಿಸರ್ವ್ ಬ್ಯಾಂಕ್, ಈಗ ಸರ್ಕಾರ 3.6 ಲಕ್ಷ ಕೋಟಿ ಹಣವನ್ನು ವಾಪಸ್ ತೆಗೆದುಕೊಳ್ಳುವಾಗ ವಿರೋಧ ವ್ಯಕ್ತಪಡಿಸುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
ತಾವು ಮಾಡಿರುವ ಆರ್ಥಿಕ ಅವ್ಯವಸ್ಥೆ ಸರಿಪಡಿಸಲು ಆರ್‍ಬಿಐ ನಿಂದ 36 ಲಕ್ಷ ಕೋಟಿ ಹಣ ಬಯಸಿದ್ದಾರೆ ಎಂದು ರಾಹುಲ್ ಗಾಂಧಿ ಊರ್ಜಿತ್ ಪಟೇಲ್ ಹೆಸರು ಹೇಳದೆ ಟ್ವೀಟ್ ಮಾಡಿದ್ದಾರೆ.
ದೇಶಕ ಆರ್ಥಿಕ ಸಾರ್ವಭೌಮತ್ವದ ಜತೆಗೆ ಕೇಂದ್ರ ಸರ್ಕಾರ ಆಟವಾಡುತ್ತಿದೆ ಎಂದು ಕಾಂಗ್ರೆಸ್ ವಕ್ತಾರ ಮನೀಷ್ ತಿವಾರಿ ಆರೋಪಿಸಿದ್ದಾರೆ. ಆರ್‍ಬಿಐನಲ್ಲಿ ಮೀಸಲಾಗಿರುವ ಮೂರನೆ ಒಂದರಷ್ಟು ಹಣವನ್ನು 2019ರ ಲೋಕಸಭೆ ಚುನಾವಣೆಗಾಗಿ ಬಳಸಿಕೊಳ್ಳಲಿದೆ ಎಂದು ಆರೋಪಿಸಿದ್ದಾರೆ.
ಸ್ವತಂತ್ರ ಭಾರತದ ಇತಿಹಾಸದಲ್ಲಿ ಈ ರೀತಿಯ ಘಟನೆ ಯಾವತ್ತೂ ನಡೆದಿರಲಿಲ್ಲ. ಅಷ್ಟು ಪ್ರಮಾಣದಲ್ಲಿ ರಿಸರ್ವ್ ಬ್ಯಾಂಕ್ ನಿಂದ ಹಣಕ್ಕಾಗಿ ಬೇಡಿಕೆ ಇಟ್ಟಿದ್ದಾರೆ ಎಂದು ಆರೋಪಿಸಿದ್ದಾರೆ.
ಒಂದು ವೇಳೆ ಈ ಪ್ರಸ್ತಾವನೆ ನೆರವೇರಿದ್ದೇ ಆದರೆ ಇದು ಗ್ರೇಟ್ ಇಂಡಿಯನ್ ಬ್ಯಾಂಕ್ ದರೋಡೆ ಎಂದು ಹೇಳಿದ್ದಾರೆ.
ಏರುತ್ತಿರುವ ಹಣಕಾಸಿನ ಕೊರತೆ ನಿಯಂತ್ರಿಸಲು ಕೇಂದ್ರ ಸರ್ಕಾರ ಅಸಮರ್ಥವಾಗಿದೆ ಎಂದು ಹೀಯಾಳಿಸಿದ್ದಾರೆ.