ಬೆಂಗಳೂರು, ನ.7- ಬೆಳಕಿನ ಹಬ್ಬ ದೀಪಾವಳಿಯ ಮೊದಲ ದಿನವೇ ಇಬ್ಬರು ಅಮಾಯಕರು ತಮ್ಮ ಕಣ್ಣಿನ ಬೆಳಕನ್ನೇ ಕಳೆದುಕೊಂಡು ಅಂಧಕಾರಕ್ಕೆ ತುತ್ತಾಗುವ ಸಾಧ್ಯತೆಗಳಿವೆ.
ಡಿಜೆ ಹಳ್ಳಿಯ ಸಾಯಿದಾಬಾನು ಹಾಗೂ ಬೊಮ್ಮನಹಳ್ಳಿಯ ಆರು ವರ್ಷದ ಬಾಲಕಿ ದಿವ್ಯಾ ಅವರ ಕಣ್ಣಿಗೆ ಪಟಾಕಿ ಸಿಡಿದ ಹಿನ್ನೆಲೆಯಲ್ಲಿ ಮಿಂಟೋ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.
ಎಷ್ಟೇ ಎಚ್ಚರಿಕೆ ವಹಿಸುವಂತೆ ಮುನ್ಸೂಚನೆ ನೀಡುತ್ತಿದ್ದರೂ ದೀಪಾವಳಿ ಸಂದರ್ಭದಲ್ಲಿ ಪಟಾಕಿ ಉಂಟುಮಾಡುವ ಹಾವಳಿಗಳಿಗೆ ಕಡಿವಾಣ ಹಾಕಲು ಸಾಧ್ಯವಾಗುತ್ತಿಲ್ಲ.
ನಿನ್ನೆ ಒಂದೇ ದಿನ ನಗರದಲ್ಲಿ 12ಕ್ಕೂ ಹೆಚ್ಚು ಮಂದಿಗೆ ಪಟಾಕಿ ಸಿಡಿತದಿಂದ ಕಣ್ಣಿಗೆ ಹಾನಿಯಾಗಿದ್ದು, ಇವರಲ್ಲಿ ಸಾಯಿದಾಬಾನು ಮತ್ತು ದಿವ್ಯಾ ಅವರು ದೃಷ್ಟಿ ಕಳೆದುಕೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ.
ಯಾರೋ ಸಿಡಿಸಿದ ಪಟಾಕಿ ಕಿಡಿ ಈ ಎರಡು ಕಂದಮ್ಮಗಳು ದೃಷ್ಟಿಯನ್ನೇ ಕಳೆದುಕೊಳ್ಳುವ ಸಾಧ್ಯತೆಯಿದ್ದು, ಚಿಕಿತ್ಸೆ ಮುಂದುವರಿಸಲಾಗಿದೆ ಎಂದು ಮಿಂಟೋ ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ.
ಇದುವರೆಗೂ ಮಿಂಟೋ ಆಸ್ಪತ್ರೆಗೆ 9 ಮಂದಿ ದಾಖಲಾಗಿದ್ದು, ಇಬ್ಬರನ್ನು ಹೊರತುಪಡಿಸಿ ಉಳಿದ ಏಳು ಮಂದಿಗೆ ಪ್ರಥಮ ಚಿಕಿತ್ಸೆ ನೀಡಿ ಕಳುಹಿಸಲಾಗಿದೆ.
ಅದೇ ರೀತಿ ನಾರಾಯಣ ನೇತ್ರಾಲಯದಲ್ಲಿ ಮೂರು ಮಂದಿ ಪಟಾಕಿಯಿಂದ ಕಣ್ಣಿಗೆ ಹಾನಿ ಮಾಡಿಕೊಂಡು ಚಿಕಿತ್ಸೆ ಪಡೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ರಾಜರಾಜೇಶ್ವರಿನಗರದ ಬಂಗಾರಪ್ಪನಗರ ನಿವಾಸಿ ಭರತ್ ಎಂ., ಎಚ್ಎಸ್ಆರ್ ಲೇಔಟ್ನ ಮಹಮ್ಮದ್ ಗುಲಾಂ ರಬ್ಬಾನಿ, ಗಂಗೊಂಡನಹಳ್ಳಿಯಲ್ಲಿಯ ಶಬ್ಬೀರ್, ಎಜಿಎಸ್ ಬಡಾವಣೆಯ ಗಾಯತ್ರಿ ಮತ್ತಿತರರು ಕಣ್ಣಿಗೆ ಹಾನಿ ಮಾಡಿಕೊಂಡು ಚಿಕಿತ್ಸೆ ಪಡೆದುಕೊಂಡಿದ್ದಾರೆ.
ಬಿಟಿಎಂ ಬಡಾವಣೆಯಲ್ಲಿ ಸಿಡಿಸಿದ ಪಟಾಕಿ ಕಿಡಿಯಿಂದ ರಸ್ತೆಯಲ್ಲಿ ಬಿದ್ದಿದ್ದ ತ್ಯಾಜ್ಯಕ್ಕೆ ಬೆಂಕಿ ತಗುಲಿ ಆ ಬೆಂಕಿಯ ಕೆನ್ನಾಲಿಗೆಗೆ ಮರ ಸುಟ್ಟು ಹೋಗಿದ್ದು, ಅದೃಷ್ಟವಶಾತ್ ಯಾವುದೇ ಹಾನಿ ಸಂಭವಿಸಿಲ್ಲ.
ಪ್ರತಿ ದೀಪಾವಳಿ ಹಬ್ಬದಂದು ಪಟಾಕಿ ಹಚ್ಚುವಾಗ ಮುನ್ನೆಚ್ಚರಿಕೆ ವಹಿಸುವಂತೆ ಎಷ್ಟೇ ಎಚ್ಚರಿಕೆ ನೀಡುತ್ತಿದ್ದರೂ ವರ್ಷ ವರ್ಷ ಪಟಾಕಿ ಹಾನಿಯಿಂದ ಕಣ್ಣಿಗೆ ಗಾಯ ಮಾಡಿಕೊಳ್ಳುತ್ತಿರುವವರ ಸಂಖ್ಯೆ ದ್ವಿಗುಣಗೊಳ್ಳುತ್ತಲೇ ಇದೆ.
ಇತ್ತೀಚೆಗೆ ಪಟಾಕಿಯಿಂದ ಉಂಟಾಗುವ ಅನಾಹುತಗಳ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿದೆ. ಹೀಗಾಗಿ ಎಲ್ಲೆಂದರಲ್ಲಿ ಪಟಾಕಿ ಸಿಡಿಸುವುದಕ್ಕೂ ಕಡಿವಾಣ ಬಿದ್ದಿದೆ. ಆದರೆ ಈ ಬಾರಿಯೂ 12ಕ್ಕೂ ಹೆಚ್ಚು ಮಂದಿಗೆ ಕಣ್ಣಿಗೆ ಹಾನಿಯಾಗಿರುವುದು ದುರದೃಷ್ಟವೇ ಸರಿ.