ತೃತೀಯ ರಂಗ ನಿರ್ಮಾಣಕ್ಕೆ ವೇದಿಕೆಯಾಗಲಿದೆಯೇ ಉಪಸಮರ ಫಲಿತಾಂಶ; ಎಚ್​ಡಿಡಿ ಜತೆ ಚಂದ್ರಬಾಬು ನಾಯ್ಡು ನಡೆಸಿದ ಚರ್ಚೆ ಏನು?

ಬೆಂಗಳೂರುಉಪಚುನಾವಣೆಯ ಫಲಿತಾಂಶ ಹೊರಬಿದ್ದ ಬೆನ್ನಲ್ಲೇ ರಾಷ್ಟ್ರ ರಾಜಕೀಯದ ವಿದ್ಯಮಾನಗಳು ಗರಿಗೆದರಿವೆ. ಕರ್ನಾಟಕ ಉಪಸಮರದ ಫಲಿತಾಂಶ 2019ರ ಲೋಕಸಭೆ ಚುನಾವಣೆಗೆ ತೃತೀಯ ರಂಗ ರಚನೆಗೆ ವೇದಿಕೆ ನಿರ್ಮಿಸಿದೆ.
ಈ ಫಲಿತಾಂಶ ಮೈತ್ರಿ ಶಕ್ತಿಯನ್ನು ಅನಾವರಣಗೊಳಿಸಿದ್ದಷ್ಟೇ ಅಲ್ಲದೇ, ಜೆಡಿಎಸ್​ ವರಿಷ್ಠ ಎಚ್​.ಡಿ.ದೇವೇಗೌಡರನ್ನು ಶಕ್ತಿಯನ್ನು ಮತ್ತಷ್ಟು ಸದೃಢಗೊಳಿಸಿದೆ. ದೇಶದ ವಿವಿಧ ಪ್ರಮುಖ ಪ್ರಾದೇಶಿಕ ಪಕ್ಷಗಳ ಮುಖಂಡರು ದೇವೇಗೌಡರಿಗೆ ಕರೆ ಮಾಡಿ, ಬಿಜೆಪಿ ವಿರುದ್ಧ ದಾಖಲಿಸಿದ ಈ ಗೆಲವಿಗೆ ಅಭಿನಂದನೆ ಹೇಳಿದ್ದಾರೆ.
ಆಂಧ್ರಪ್ರದೇಶ ಸಿಎಂ‌ ಚಂದ್ರಬಾಬು ನಾಯ್ಡು ಅವರು ಎಚ್.ಡಿ‌. ದೇವೇಗೌಡ ಅವರಿಗೆ ಕರೆ ಮಾಡಿ, ಸುಮಾರು 20 ನಿಮಿಷಗಳ ಕಾಲ‌ ಮಾತುಕತೆ ನಡೆಸಿದ್ದಾರೆ. ಉಪ ಸಮರದಲ್ಲಿ ಬಿಜೆಪಿ ಮಣಿಸಿದ್ದಕ್ಕೆ ಶುಭಾಶಯ ಹೇಳಿ, 2019ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಮಣಿಸಲು ಮಹಾಮೈತ್ರಿಯೇ ತಕ್ಕ ಅಸ್ತ್ರ ಎಂಬ ಯೋಚನೆ ಮಾಡಿದ್ದಾರೆ. ಇದೇ ವೇಳೆ ತೃತೀಯರಂಗ ರಚನೆ ಬಗ್ಗೆ ಗಂಭೀರ ಚಿಂತನೆ ಕೂಡ ನಡೆದಿದ್ದು, ದೇವೇಗೌಡರ ನೇತೃತ್ವದಲ್ಲೇ ಮಹಾ ಘಟಬಂಧನ ರಚನೆಗೆ ಒತ್ತಾಯಿಸಿದ್ದಾರೆ ಎನ್ನಲಾಗಿದೆ.
ಉಪಚುನಾವಣೆ ಫಲಿತಾಂಶದ ಬಗ್ಗೆ ಹರ್ಷ ವ್ಯಕ್ತಪಡಿಸಿದ ಸಿಎಂ ನಾಯ್ಡು, ಲೋಕಸಭಾ ಚುನಾವಣೆಗೆ ಇದು ದಿಕ್ಸೂಚಿ ಎಂದು ಹೇಳಿದ್ದಾರೆ. ಈ ಮೈತ್ರಿ ಮುಂದೆಯೂ ಇರಲಿ, ನಾವೂ ಕೈ ಜೋಡಿಸುತ್ತೇವೆ. ದೇಶದ ಎಲ್ಲ ಪ್ರಾದೇಶಿಕ ಪಕ್ಷ ನಿಮ್ಮ ನಾಯಕತ್ವದಲ್ಲಿ ಒಂದಾಗಲಿ. ಎಂದು ಹೇಳಿದ್ದಾರೆ. ಇದಕ್ಕೆ ಪ್ರತಿತಿಕ್ರಿಯಿಸಿರುವ ದೇವೇಗೌಡರು ನಿಮ್ಮ ಸಹಕಾರ ಇರಲಿ, ಒಂದಾಗಿ ಹೋರಾಡೋಣ ಎಂದು ಹೇಳಿದ್ದಾರೆ.
ಇದೇ ವಿಚಾರವಾಗಿ ಚರ್ಚಿಸುವ ಸಲುವಾಗಿ ನಾಳೆ ಚಂದ್ರಬಾಬು ನಾಯ್ದು ಅವರು ಬೆಂಗಳೂರಿಗೆ ಆಗಮಿಸಿ, ಎಚ್.ಡಿ.ದೇವೇಗೌಡ ಅವರನ್ನು ಭೇಟಿಯಾಗಲಿದ್ದಾರೆ. ನಾಳೆ ಮಧ್ಯಾಹ್ನ 3 ಗಂಟೆಗೆ ಪದ್ಮನಾಭನಗರದಲ್ಲಿರುವ ದೇವೇಗೌಡರ ನಿವಾಸಕ್ಕೆ ಚಂದ್ರಬಾಬು ನಾಯ್ದು ಆಗಮಿಸಿ, ಮೂವರು ನಾಯಕರು ಮುಂದಿನ ರಾಜಕೀಯ ವಿಚಾರವಾಗಿ ಚರ್ಚಿಸಲಿದ್ದಾರೆ.

 

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ