ಬೆಂಗಳೂರು, ನ.6-ಐದು ಕ್ಷೇತ್ರಗಳ ಉಪಚುನಾವಣೆಯ ಫಲಿತಾಂಶ ಜೆಡಿಎಸ್-ಕಾಂಗ್ರೆಸ್ನ ಮೈತ್ರಿ ಕೂಟವನ್ನು ಗಟ್ಟಿಗೊಳಿಸಿದ್ದು, ಬಿಜೆಪಿಯ ಅಧಿಕಾರ ದಾಹಕ್ಕೆ ತಕ್ಕ ಪಾಠ ಕಲಿಸಿದೆ ಎಂದು ಕಾಂಗ್ರೆಸ್ ಹೇಳಿದೆ.
ಕೆಪಿಸಿಸಿ ಕಚೇರಿಯಲ್ಲಿಂದು ಪಕ್ಷದ ರಾಜ್ಯಾಧ್ಯಕ್ಷ ದಿನೇಶ್ ಗುಂಡೂರಾವ್, ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಉಸ್ತುವಾರಿ ನಾಯಕರಾದ ಕೆ.ಸಿ.ವೇಣುಗೋಪಾಲ್ ಅವರು ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಉಪಚುನಾವಣೆಗಳಲ್ಲಿ ಮೈತ್ರಿ ಕೂಟಗಳ ಗೆಲುವಿಗೆ ಹರ್ಷ ವ್ಯಕ್ತಪಡಿಸಿ ಮತದಾರರಿಗೆ ಅಭಿನಂದನೆ ಸಲ್ಲಿಸಿದರು.
ದಿನೇಶ್ ಗುಂಡೂರಾವ್ ಮಾತನಾಡಿ, 2018 ವಿಧಾನಸಭೆ ಚುನಾವಣೆ ನಂತರ ನಡೆದ ಜಯನಗರ ಮತ್ತು ಆರ್.ಆರ್.ನಗರ ವಿಧಾನಸಭಾ ಚುನಾವಣೆ, ಬಿಜಾಪುರ, ಬಾಗಲಕೋಟೆ ಸ್ಥಳೀಯ ಸಂಸ್ಥೇಗಳ ಚುನಾವಣೆ ಈಶಾನ್ಯ ಪದವೀಧರ ಕ್ಷೇತ್ರಗಳ ಚುನಾವಣೆಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದೆ. ಇತ್ತೀಚೆಗೆ ನಡೆದ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಒಂದು ಸಾವಿರಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆಲ್ಲುವ ಮೂಲಕ ಕಾಂಗ್ರೆಸ್ ನಂಬರ್ ಒನ್ ಸ್ಥಾನದಲ್ಲಿತ್ತು. ಈಗ ಐದು ಕ್ಷೇತ್ರಗಳ ಉಪಚುನಾವಣೆಯಲ್ಲಿ ನಾಲ್ಕರಲ್ಲಿ ಮೈತ್ರಿ ಕೂಟದ ಅಭ್ಯರ್ಥಿಗಳು ಗೆಲ್ಲುವ ಮೂಲಕ ಜೆಡಿಎಸ್-ಕಾಂಗ್ರೆಸ್ನ ಮೈತ್ರಿ ಕೂಟಕ್ಕೆ ಜನತೆ ಬೆನ್ನುತಟ್ಟಿದ್ದಾರೆ.
ಬಿಜೆಪಿಗೆ ಕೇವಲ ಸೋಲಾಗಿಲ್ಲ. ಭಾರೀ ಅಂತರದಲ್ಲಿ ಮುಖಭಂಗವಾಗಿದೆ. ರಾಮನಗರದಲ್ಲಿ ಠೇವಣಿ ಕಳೆದುಕೊಂಡಿದ್ದು, ಮಂಡ್ಯದಲ್ಲೂ ಅದೇ ಪರಿಸ್ಥಿತಿ ಇದೆ. ಮುಂದಿನ ಲೋಕಸಭೆ ಚುನಾವಣೆಯಲ್ಲಿ 28ರ ಪೈಕಿ 28ರಲ್ಲೂ ನಾವು ಗೆಲುತ್ತೇವೆ ಎಂದು ಹೇಳಿದರು.
ಬಿಜೆಪಿಯವರ ಅಹಂಕಾರ, ಪ್ರಚೋದನಾಕಾರಿ ಮಾತುಗಳಿಗೆ, ಸುಳ್ಳು ಪ್ರಚಾರಕ್ಕೆ ಜನ ಬೆಂಬಲ ನೀಡಿಲ್ಲ. ಜನಪರವಾಗಿ ಒಂದು ದಿನವೂ ಮಾತನಾಡದ ಬಿಜೆಪಿಯವರು ಕೇವಲ ಅಧಿಕಾರ ದಾಹದ ಹಿಂದೆ ಬಿದ್ದಿದ್ದರು. ಅದಕ್ಕಾಗಿ ಜನ ತಕ್ಕ ಪಾಠ ಕಲಿಸಿದ್ದಾರೆ. ಕೇಂದ್ರದಿಂದ ರಾಜ್ಯಕ್ಕೆ ಯಾವುದೇ ನೆರವನ್ನು ತರದೆ ಇಲ್ಲಿಯೂ ಜನಪರವಾಗಿ ಮಾತನಾಡದೆ ಕೇವಲ ಜನರ ದಾರಿ ತಪ್ಪಿಸುತ್ತಿದ್ದ ಬಿಜೆಪಿಗೆ ತಕ್ಕ ಪಾಠ ಕಲಿಸಿದ್ದಾರೆ. ಜೆಡಿಎಸ್-ಕಾಂಗ್ರೆಸ್ ಪಕ್ಷಗಳ ಮುಖಂಡರು ಜಂಟಿ ಪ್ರಚಾರ ಮಾಡಿದ್ದು, ಕಾರ್ಯಕರ್ತರು ಒಟ್ಟಾಗಿ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದು, ಒಗ್ಗಟ್ಟುಪ್ರದರ್ಶನದಿಂದ ಉತ್ತಮ ಫಲಿತಾಂಶ ಬಂದಿದೆ ಎಂದರು.
ಬಿಜೆಪಿಯ ಅಬ್ಬರ ತಣ್ಣಗಾಗುತ್ತಿದೆ. 2019ರ ಲೋಕಸಭೆ ಚುನಾವಣೆಯಲ್ಲಿ ಸಂಪೂರ್ಣವಾಗಿ ಸೋಲಿಸಿ ಬಿಜೆಪಿಯನ್ನು ದಕ್ಷಿಣ ಭಾರತದ ರಾಜ್ಯದಿಂದಲೇ ಓಡಿಸುತ್ತೇವೆ. ಇನ್ನು ಮುಂದಾದರೂ ಬಿಜೆಪಿಯವರು ಕಾಂಗ್ರೆಸ್ ಮುಕ್ತ ಭಾರತ ಎಂದು ಹೇಳುವುದನ್ನು ಬಿಡಲಿ ಎಂದು ಹೇಳಿದರು.
ಮೈತ್ರಿ ಸರ್ಕಾರ ರಚನೆಯಾದಾಗಿನಿಂದಲೂ ಬಿಜೆಪಿಯವರು ಆಪರೇಷನ್ ಕಮಲದ ಹೆಸರಿನಲ್ಲಿ ಕಾರ್ಯಾಚರಣೆ ಆರಂಭಿಸಿದ್ದಾರೆ. ಆದರೆ ಅವರ ಪ್ರಯತ್ನ ಯಶಸ್ವಿಯಾಗಿಲ್ಲ. ಬಿಜೆಪಿಯ ಮಿಷನ್ ಕೆಟ್ಟು ಹೋಗಿದೆ. ಅದು ಸರಿಹೋಗುತ್ತಿಲ್ಲ, ಸರಿಪಡಿಸಲು ಒಳ್ಳೆ ಮೆಕಾನಿಕ್ ಸಿಗುತ್ತಿಲ್ಲ ಎಂದು ದಿನೇಶ್ಗುಂಡೂರಾವ್ ಲೇವಡಿ ಮಾಡಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರು, ಮಿತ್ರ ಕೂಟದ ಒಳ್ಳೆಯ ಕೆಲಸಗಳಿಗೆ ಜನ ಮುದ್ರೆ ಒತ್ತಿದ್ದಾರೆ. ಮುಂದಿನ ಚುನಾವಣೆಗೂ ಉತ್ತಮ ಸಂದೇಶ ನೀಡಿದ್ದಾರೆ. ನನ್ನ ಪ್ರಕಾರ 5ಕ್ಕೆ ಐದೂ ಕ್ಷೇತ್ರಗಳನ್ನು ನಾವು ಗೆದ್ದಿದ್ದೇವೆ. ಶಿವಮೊಗ್ಗದಲ್ಲಿ ಮುಂದೆ 3 ಲಕ್ಷ ಮತಗಳ ಅಂತರದಲ್ಲಿ ಗೆದ್ದಿದ್ದರು. ಈಗ ಅದು 52 ಸಾವಿರ ಹಂತಕ್ಕೆ ಬಂದು ನಿಂತಿದೆ. ಬಳ್ಳಾರಿ ಕಾಂಗ್ರೆಸ್ನ ಭದ್ರಕೋಟೆಯಾಗಿತ್ತು, ಅದು ಮರು ವಶ ಆಗಿದೆ. ಜಮಖಂಡಿಯಲ್ಲೂ ಭಾರೀ ಅಂತರದಿಂದ ಗೆದ್ದಿದ್ದೇವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಮಾತನಾಡಿ, ರಾಜ್ಯ ನಾಯಕರು ಒಟ್ಟಾಗಿ ಕೆಲಸ ಮಾಡಿದರ ಪರಿಣಾಮ ಮಿತ್ರ ಕೂಟದ ಅಭ್ಯರ್ಥಿಗಳು ಗೆದ್ದಿದ್ದಾರೆ. ಮುಂದಿನ ಚುನಾವಣೆಯಲ್ಲೂ ಇದೇ ರೀತಿ ಮೈತ್ರಿ ಮುಂದುವರೆಯಲಿದೆ ಎಂದು ಹೇಳಿದರು.
ಚುನಾವಣೆ ಫಲಿತಾಂಶಕ್ಕಾಗಿ ಕೆಪಿಸಿಸಿ ಕಚೇರಿಯಲ್ಲಿ ಸಿಹಿ ಹಂಚಿ ಪಟಾಕಿ ಸಿಡಿಸಿ ಸಂಭ್ರಮಿಸಲಾಯಿತು.