ಬೆಂಗಳೂರು, ನ.6- ರಾಜ್ಯದ ಉಪಚುನಾವಣೆ ಫಲಿತಾಂಶದ ಮೂಲಕ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರಕ್ಕೆ ಜನ ಬೆಂಬಲಿಸಿ ಆಶೀರ್ವಾದ ನೀಡಿದ್ದಾರೆ ಎಂದು ಬಣ್ಣಿಸಿದ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್ ಮುಂದಿನ ಲೋಕಸಭಾ ಚುನಾವಣೆಗೆ ಈ ಫಲಿತಾಂಶ ದಿಕ್ಸೂಚಿಯಾಗಿದೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಳ್ಳಾರಿಯಲ್ಲಿ ಬಿಜೆಪಿಯ ಭದ್ರಕೋಟೆ ಛಿದ್ರವಾಗಿದ್ದರೆ, ಶಿವಮೊಗ್ಗದಲ್ಲಿ ಫಲಿತಾಂಶ ಬಿಜೆಪಿ ಕಡೆ ಇದ್ದರೂ ಪಕ್ಷದಲ್ಲಿ ಬಿರುಕು ಕಾಣಿಸಿಕೊಂಡಿದೆ. 2019ರ ಲೋಕಸಭಾ ಚುನಾವಣೆಗೆ ಈ ಫಲಿತಾಂಶ ಮುನ್ನುಡಿ ಬರೆದಿದೆ ಎಂದು ಹೇಳಿದರು.
ಕಿರು ಸಮರದಲ್ಲಿ ಆಶೀರ್ವಾದ ಮಾಡಿದ ಜನತೆಗೆ ಕೃತಜ್ಞತೆ ಸಲ್ಲಿಸಿದ ಅವರು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ನಾಯಕತ್ವಕ್ಕೆ ಬೆಂಬಲ ಸಿಕ್ಕಿದೆ. ಮಾಜಿ ಪ್ರಧಾನಿ ದೇವೇಗೌಡರ ಚಾಣಾಕ್ಷ ಹಾಗೂ ಜಾಣತನ ನಡೆ ಚುನಾವಣೆಯಲ್ಲಿ ಯಶಸ್ವಿಯಾಗಲು ಕಾರಣ. ಬಳ್ಳಾರಿ ಚುನಾವಣಾ ಪ್ರಚಾರದ ಸಂದರ್ಭದಲ್ಲೇ ಹಿಂದಿನದನ್ನು ಮರೆತು ಒಗ್ಗೂಡಿ ನಡೆಯೋಣ ಎಂಬ ಅವರ ಮಾತಿಗೆ ಮನ್ನಣೆ ದೊರೆತಿದೆ. ಕಾಂಗ್ರೆಸ್ನವರೂ ಸೇರಿದಂತೆ ಉಭಯ ಪಕ್ಷಗಳ ನಾಯಕರು ಹಾಗೂ ಕಾರ್ಯಕರ್ತರ ಶ್ರಮದಿಂದ ಚುನಾವಣೆಯಲ್ಲಿ ಗೆಲುವು ಉಂಟಾಗಿದೆ ಎಂದು ಹೇಳಿದರು.
37ರ ಮುಂದೆ 79 ಶರಣಾಗಿದೆ ಎಂದು ಜೆಡಿಎಸ್ಗೆ ಅಧಿಕಾರ ನೀಡಿದ್ದಕ್ಕಾಗಿ ಛೇಡಿಸುತ್ತಿದ್ದ ಬಿಜೆಪಿಯವರು ಆಪರೇಷನ್ ಕಮಲಕ್ಕೂ ಮುಂದಾಗಿದ್ದರು. ಅದಕ್ಕೂ ಇದೀಗ ತೆರೆ ಬಿದ್ದಿದೆ. ಬಳ್ಳಾರಿಯ ಸೋಲು, ಪ್ರಧಾನಿ ಮೋದಿ ಅವರ ಸೋಲು ಸಾಂವಿಧಾನಿಕ ವ್ಯವಸ್ಥೆಯನ್ನು ಕೇಂದ್ರ ಸರ್ಕಾರ ಹಾಳು ಮಾಡುತ್ತಿರುವುದನ್ನು ಸಹಿಸದ ಜನ ಚುನಾವಣೆ ಮೂಲಕ ತಿರುಗೇಟು ನೀಡಿದ್ದಾರೆ.
ಜನವರಿ ಅಂತ್ಯ ಅಥವಾ ಫೆಬ್ರವರಿಯಲ್ಲಿ ಲೋಕಸಭೆ ಚುನಾವಣೆ ನಡೆಯುವ ಸಾಧ್ಯತೆ ಇದೆ. ಇಂದಿನ ಈ ಮೈತ್ರಿಯ ಗೆಲುವು ಲೋಕಸಭಾ ಚುನಾವಣೆಗೂ ಅಡಿಗಲ್ಲಾಗಿದೆ ಎಂದು ವ್ಯಾಖ್ಯಾನಿಸಿದರು.
ದೀಪಾವಳಿ ಹಾಗೂ ನರಕ ಚತುರ್ದಶಿ ಸಂದರ್ಭದಲ್ಲಿ ಮತದಾರರು ಉತ್ತಮ ಸಂದೇಶವನ್ನೇ ನೀಡಿದ್ದಾರೆ. ರಾಜ್ಯದ ಸಮ್ಮಿಶ್ರ ಸರ್ಕಾರದ ಗೆಲುವಿನ ಮೂಲಕ ದೇಶಕ್ಕೆ ಸಮ್ಮಿಶ್ರ ಸರ್ಕಾರ ಬೇಕು ಎಂಬ ಸಂದೇಶ ರವಾನಿಸಿದೆ.
ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ನಿರೀಕ್ಷಿತ ಫಲಿತಾಂಶ ದೊರೆಯದಿದ್ದರೂ ಮುಂದಿನ ಚುನಾವಣೆಯಲ್ಲಿ ಆಗಿರುವ ಲೋಪಗಳನ್ನು ಸರಿಪಡಿಸಿಕೊಳ್ಳುವ ಪ್ರಯತ್ನ ಮಾಡಲಾಗುವುದು. ಐದು ಉಪಚುನಾವಣೆಗಳ ಪೈಕಿ ಕಾಂಗ್ರೆಸ್ ಹಾಗೂ ಜೆಡಿಎಸ್ ತಲಾ ಎರಡು ಕ್ಷೇತ್ರಗಳಲ್ಲಿ ಜಯಗಳಿಸಿವೆ ಎಂದರು.