ಬೆಂಗಳೂರು, ನ.6- ಭಾರೀ ಸದ್ದು ಮಾಡುವ ಹಾಗೂ ಸರಣಿ ಪಟಾಕಿ ಸಿಡಿಸುವುದನ್ನು ನಗರದಲ್ಲಿ ನಿಷೇಧಿ ಸಲಾಗಿದೆ. ಕಡಿಮೆ ಹಾನಿಕಾರಕ ಪಟಾಕಿ ಸಿಡಿಸಲು ರಾತ್ರಿ 8 ಗಂಟೆಯಿಂದ 10 ಗಂಟೆಯವರೆಗೂ ಮಾತ್ರ ಅವಕಾಶ ಕಲ್ಪಿಸಲಾಗಿದ್ದು, ಮುಂಜಾಗ್ರತಾ ಕ್ರಮವಾಗಿ ಪಾಲಿಕೆಯ ಎಲ್ಲಾ ಆಸ್ಪತ್ರೆಗಳಲ್ಲೂ ತುರ್ತು ಚಿಕಿತ್ಸಾ ಘಟಕಗಳನ್ನು ತೆರೆಯಲಾಗಿದೆ.
ಪಟಾಕಿ ಸಿಡಿತದಿಂದ ಹೊರ ಬರುವ ಅಪಾಯಕಾರಿ ಅನಿಲ ಉತ್ಪತ್ತಿಯಿಂದ ಮಕ್ಕಳ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರಿ ಶ್ವಾಸಕೋಶ ಸಂಬಂಧ ಕಾಯಿಲೆಗಳು ಕಾಣಿಸಿಕೊಳ್ಳುವುದರಿಂದ ಅತಿ ಹೆಚ್ಚು ಶಬ್ದ ಮಾಡಲು ಪಟಾಕಿಗಳನ್ನು ಸಿಡಿಸದಂತೆ ಬಿಬಿಎಂಪಿ ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದೆ.
ಅತಿ ಹೆಚ್ಚು ಶಬ್ದ ಉಂಟು ಮಾಡುವ ಮತ್ತು ಸರಣಿ ಪಟಾಕಿಗಳನ್ನು ಸಿಡಿಸುವುದರಿಂದ ಶಬ್ದ ಮಾಲಿನ್ಯ ಹಾಗೂ ಘನ ತ್ಯಾಜ್ಯ ಹೆಚ್ಚಾಗುವುದರಿಂದ ಸರ ಪಟಾಕಿಯಂತಹ ಭಾರೀ ಶಬ್ದ ಮಾಡುವ ಪಟಾಕಿಗಳನ್ನು ಸೇರಿಸಲಾಗಿದೆ.
ಪಟಾಕಿ ಸಿಡಿಸಲು ಮೀಸಲಿಟ್ಟಿರುವ ಅವಧಿಯಲ್ಲಿ ಮಕ್ಕಳು ಪಟಾಕಿ ಸಿಡಿಸುವಾಗ ಸುರಕ್ಷತೆಯ ಬಗ್ಗೆ ಪೆÇೀಷಕರು ಹೆಚ್ಚು ಕಾಳಜಿ ವಹಿಸಬೇಕು ಎಂದು ಪಾಲಿಕೆ ಸಲಹೆ ನೀಡಿದೆ.
ಹಬ್ಬದ ದಿನಗಳಲ್ಲಿ ಪಾದಚಾರಿ ಮಾರ್ಗಗಳ ಮೇಲೆ ಪೂಜಾ ಸಾಮಗ್ರಿಗಳನ್ನು ಮಾರಾಟ ಮಾಡುವುದು, ಪಟಾಕಿ ಮಳಿಗೆ ತೆರೆಯುವುದಕ್ಕೆ ಅವಕಾಶ ನೀಡಿಲ್ಲ. ವ್ಯಾಪಾರ ಮಾಡಲು ಅನುಮತಿ ಇರುವ ಪ್ರದೇಶದಲ್ಲಿ ಮಾರಾಟದ ನಂತರ ಸಂಗ್ರಹವಾಗುವ ತ್ಯಾಜ್ಯ ವಸ್ತುಗಳನ್ನು ವ್ಯಾಪಾಸ್ಥರೇ ತೆರವುಗೊಳಿಸಿ ಸಹಕರಿಸಬೇಕು ಎಂದು ಕೇಳಿಕೊಳ್ಳಲಾಗಿದೆ.
ಎಲ್ಲೆಂದರಲ್ಲಿ ಪಟಾಕಿ ಸಿಡಿಸುವುದು ಹಾಗೂ ರಸ್ತೆಗಳಲ್ಲೇ ತ್ಯಾಜ್ಯ ಉಳಿಸಿ ಹೋಗುವವರನ್ನು ಪತ್ತೆ ಹಚ್ಚಿ ಅವರ ವಿರುದ್ಧ ಕ್ರಮ ಕೈಗೊಳ್ಳಲು ಬಿಬಿಎಂಪಿ ಇಂಜಿನಿಯರ್ ಮತ್ತು ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
ಮುನ್ನೆಚ್ಚರಿಕೆ: ಸಾರ್ವಜನಿಕರು ತಾವು ಸಿಡಿಸುವ ಪಟಾಕಿ ತ್ಯಾಜ್ಯಗಳನ್ನು ಒಂದೆಡೆ ಸಂಗ್ರಹಿಸಿ ಪಾಲಿಕೆಯ ತಳ್ಳುವ ಗಾಡಿಗಳಲ್ಲಿ ಹಾಕಬೇಕು.
ದೀಪಾವಳಿ ಅಲ್ಲದೆ ಯಾವುದೇ ಹಬ್ಬ-ಹರಿದಿನಗಳಲ್ಲಿ ರಾತ್ರಿ 8 ಗಂಟೆಯಿಂದ 10 ಗಂಟೆಯವರೆಗೂ ಮಾತ್ರ ಪಟಾಕಿ ಹಚ್ಚಬೇಕು. ಬಿಬಿಎಂಪಿ ಎಂಜಿನಿಯರ್ ಮತ್ತು ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಮೋರಿಯಲ್ಲಿ ನೀರು ಸರಾಗವಾಗಿ ಹರಿದು ಹೋಗಲು ಅಡ್ಡಿಪಡಿಸುವ ಕಾಗದ, ಪ್ಲಾಸ್ಟಿಕ್ ಮತ್ತಿತರ ವಸ್ತುಗಳನ್ನು ತೆರವುಗೊಳಿಸಬೇಕು.
ಸ್ವಚ್ಛತಾ ಸಿಬ್ಬಂದಿ ರಸ್ತೆ ಶುಚಿಗೊಳಿಸುವ ಸಂದರ್ಭದಲ್ಲಿ ಸಾರ್ವಜನಿಕರು ರಸ್ತೆ ಮೇಲೆ ನಿಲ್ಲಿಸಿರುವ ತಮ್ಮ ವಾಹನಗಳನ್ನು ತೆರವುಗೊಳಿಸಿ ಶುಚಿತ್ವಕ್ಕೆ ಅವಕಾಶ ಕಲ್ಪಿಸಿಕೊಡಬೇಕು.
247 ಸೇವೆ: ಸಾರ್ವಜನಿಕರು ಪಟಾಕಿ ಸಿಡಿಸುವ ಸಂದರ್ಭದಲ್ಲಿ ಆಕಸ್ಮಿಕ ಅವಘಡಕ್ಕೆ ಒಳಗಾದಲ್ಲಿ ಅಂತಹವರಿಗೆ ಸಕಾಲಕ್ಕೆ ಸೂಕ್ತ ಚಿಕಿತ್ಸೆ ನೀಡಲು ಸಜ್ಜಾಗಿರುವಂತೆ ಪಾಲಿಕೆಯ ಎಲ್ಲಾ ಹೆರಿಗೆ ಆಸ್ಪತ್ರೆಗಳಲ್ಲಿ 247 ಪ್ರಾಥಮಿಕ ತುರ್ತು ಚಿಕಿತ್ಸಾ ಘಟಕ ಸ್ಥಾಪಿಸಿ ಅಗತ್ಯ ವೈದ್ಯ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ಆಯಾ ವಾರ್ಡ್ಗಳ ಕಾರ್ಯಪಾಲಕ ಅಭಿಯಂತರರು ತಮ್ಮ ತಮ್ಮ ವಾರ್ಡ್ ಗಳಲ್ಲಿ ಪಾಲಿಕೆಯಿಂದ ಕೈಗೊಳ್ಳುವ ಸ್ವಚ್ಛತಾ ಕಾರ್ಯಕ್ರಮದ ಮೇಲ್ವಿಚಾರಣೆ ನಡೆಸುತ್ತಾರೆ. ಪಟಾಕಿ ಸಿಡಿಸುವ ಸಂಬಂಧ ಯಾವುದೇ ದೂರುಗಳಿದ್ದಲ್ಲಿ ನಿಯಂತ್ರಣ ಕೊಠಡಿ 22660000 ಅಥವಾ 22221188 ದೂರವಾಣಿ ಸಂಖ್ಯೆಗಳನ್ನು ಸಂಪರ್ಕಿಸುವಂತೆ ಬಿಬಿಎಂಪಿ ಆಯುಕ್ತ ಮಂಜುನಾಥ ಪ್ರಸಾದ್ ಅವರು ಮನವಿ ಮಾಡಿಕೊಂಡಿದ್ದಾರೆ.
ಚಿಕಿತ್ಸೆ ನೀಡುವಲ್ಲಿ ವಿಳಂಬವಾದರೆ ಕ್ರಮ:ಮುಂಜಾಗ್ರತಾ ಕ್ರಮವಾಗಿ ಪಾಲಿಕೆಯ ಎಲ್ಲಾ ರೆಫರಲ್ ಮತ್ತು ಹೆರಿಗೆ ಆಸ್ಪತ್ರೆಗಳಲ್ಲಿ ಪ್ರಥಮ ಚಿಕಿತ್ಸಾ ಘಟಕಗಳನ್ನು ತೆರೆಯಲಾಗಿದ್ದು , ಪಟಾಕಿ ಅನಾಹುತದಿಂದ ಆಸ್ಪತ್ರೆಗೆ ದಾಖಲಾಗುವ ರೋಗಿಗಳಿಗೆ ಅಗತ್ಯ ಚಿಕಿತ್ಸೆ ನೀಡಬೇಕು. ಕರ್ತವ್ಯ ಪಾಲಿಸುವಲ್ಲಿ ಲೋಪ-ದೋಷ ಕಂಡು ಬಂದಲ್ಲಿ ಸಂಬಂಧಪಟ್ಟ ವೈದ್ಯಕೀಯ ಸಿಬ್ಬಂದಿ ಮೇಲೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಬಿಬಿಎಂಪಿಯ ಮುಖ್ಯ ಆರೋಗ್ಯಾಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.
ಹಬ್ಬದ ಸಂದರ್ಭದಲ್ಲಿ ಪಟಾಕಿ ಅನಾಹುತದಿಂದ ಆಸ್ಪತ್ರೆಗೆ ಬರುವ ರೋಗಿಗಳಿಗೆ ಅಗತ್ಯವಿರುವ ಪ್ರಥಮ ಚಿಕಿತ್ಸೆ ನೀಡಬೇಕು. ಹೆಚ್ಚಿನ ಚಿಕಿತ್ಸೆ ಅವಶ್ಯವಿದ್ದಲ್ಲಿ ಬೇರೆ ಆಸ್ಪತ್ರೆಗಳಿಗೆ ರೋಗಿಗಳನ್ನು ದಾಖಲಿಸಲು ಸಲಹೆ ನೀಡಬೇಕು ಎಂದು ವೈದ್ಯ ಸಿಬ್ಬಂದಿಗಳಿಗೆ ಮನವಿ ಮಾಡಿಕೊಳ್ಳಲಾಗಿದೆ.