ಬೆಂಗಳೂರು, ಸೆ.6- ಪರಸ್ಪರ ನಾಯಕರ ನಡುವೆ ಉಂಟಾದ ಹೊಂದಾಣಿಕೆ ಕೊರತೆ, ಅಭ್ಯರ್ಥಿ ಆಯ್ಕೆಯಲ್ಲಿ ಗೊಂದಲ, ಒಬ್ಬರ ವಿರುದ್ದ ಮತ್ತೊಬ್ಬರು ಕತ್ತಿ ಮಸಿಯುವಿಕೆಯ ಪರಿಣಾಮದಿಂದಾಗಿಯೇ ಉಪ ಸಮರದಲ್ಲಿ ಬಿಜೆಪಿಗೆ ಭಾರೀ ಮುಖಭಂಗವಾಗಿದೆ.
ಮತದಾನಕ್ಕೆ 3 ದಿನ ಇರುವಾಗ ರಾಮನಗರದ ಬಿಜೆಪಿ ಅಭ್ಯರ್ಥಿ ಎಲ್. ಚಂದ್ರಶೇಖರ್ ಚುನಾವಣಾ ಕಣದಿಂದ ಹಿಂದೆ ಸರಿದಾಗಲೇ ಸೋಲಿನ ಸುಳಿವು ಕಮಲ ನಾಯಕರಿಗೆ ಸಿಕ್ಕಿತ್ತು.
ಚುನಾವಣಾ ದಿನಾಂಕ ಘೋಷಣೆಯಾದ ದಿನದಿಂದ ಬಹಿರಂಗ ಪ್ರಚಾರ ಕೊನೆಗೊಳ್ಳುವವರೆಗೂ ಬಿಜೆಪಿ ನಾಯಕರಲ್ಲಿ ಒಗ್ಗಟ್ಟುಕಂಡು ಬರಲಿಲ್ಲ. ಒಬ್ಬರನ್ನು ಒಬ್ಬರು ಕಾಲು ಎಳೆಯುವುದರಲ್ಲಿ ಸಂತಸ ಪಟ್ಟರೇ ಹೊರತು ಗೆಲ್ಲಲೇಬೇಕೆಂಬ ಛಲ ಕಂಡುಬರಲಿಲ್ಲ.
ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್-ಜೆಡಿಎಸ್ ದೋಸ್ತಿಯಲ್ಲಿ ಎಷ್ಟೇ ಭಿನ್ನಮತ ಕಂಡುಬಂದರೂ ಬಿಜೆಪಿಯನ್ನು ಸೋಲಿಸಲೇ ಬೇಕು ಎಂದು ಇಟ್ಟುಕೊಂಡಿದ್ದ ಉದ್ದೇಶ ಈಡೇರಿದೆ.
ತಮ್ಮ ಪುತ್ರ ರಾಘವೇಂದ್ರರನ್ನು ಗೆಲ್ಲಿಸಬೇಕು ಎಂದು ಬಿ.ಎಸ್.ಯಡಿಯೂರಪ್ಪ ತಮ್ಮನ್ನು ಶಿವಮೊಗ್ಗಕ್ಕೆ ಸೀಮಿತಗೊಳಿಸಿಕೊಂಡರೆ, ಸಹೋದರಿಯನ್ನು ಗೆಲ್ಲಿಸಲು ಶ್ರೀರಾಮುಲು ಬಳ್ಳಾರಿಗೆ ಸೀಮಿತಗೊಂಡರು.
2ನೆ ಹಂತದ ನಾಯಕರಾದ ಕೇಂದ್ರ ಸಚಿವರಾದ ಡಿ.ವಿ.ಸದಾನಂದ ಗೌಡ, ರಮೇಶ್ ಜಿಗಜಿಣಗಿ, ಅನಂತ್ ಕುಮಾರ್ ಹೆಗ್ಡೆ ಹಾಗೂ ಸಂಸದರು ಸೇರಿದಂತೆ ಕೆಲವು ಪ್ರಮುಖರು ತಮ್ಮ ತಮ್ಮ ಕ್ಷೇತ್ರಗಳಿಗೆ ಸೀಮಿತರಾದರೆ ಹೊರತು ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಲೇ ಇಲ್ಲ.
ಜಮಖಂಡಿ ಉಸ್ತುವಾರಿ ಹೊತ್ತಿದ್ದ ಜಗದೀಶ್ ಶೆಟ್ಟರ್ ಅಭ್ಯರ್ಥಿ ಶ್ರೀಕಾಂತ್ ಕುಲಕರ್ಣಿ ನಾಮಪತ್ರ ಸಲ್ಲಿಸಿದ ನಂತರ ಕುಟುಂಬ ಸಮೇತರಾಗಿ ಯುರೋಪ್ ಪ್ರವಾಸ ಕೈಗೊಂಡು, ಕೊನೆಯ ಕ್ಷಣದಲ್ಲಿ ನಾಮಕಾವಸ್ತೆಗೆ ಪ್ರಚಾರ ನಡೆಸಿದರು.
ಇನ್ನು ಬಳ್ಳಾರಿಯಲ್ಲಿ ಜನಾರ್ದನ ರೆಡ್ಡಿ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರನ ಸಾವಿನ ಬಗ್ಗೆ ನೀಡಿದ್ದ ಹೇಳಿಕೆ ದುಬಾರಿಯಾಗಿ ಪರಿಣಮಿಸಿದೆ. ಸಿದ್ದರಾಮಯ್ಯ ರೆಡ್ಡಿ ವಿರುದ್ಧ ಭಾವನಾತ್ಮಕವಾಗಿ ತಿರುಗೇಟು ನೀಡಿದ್ದು ಜಿಲ್ಲೆಯಲ್ಲಿರುವ ಕುರುಬ ಸಮುದಾಯ ಕಾಂಗ್ರೆಸ್ ಅಭ್ಯರ್ಥಿಯನ್ನು ಬೆಂಬಲಿಸುವಂತೆ ಮಾಡಿತು.
ಜಿಲ್ಲೆಯಲ್ಲಿರುವ ವಾಲ್ಮೀಕಿ, ಲಿಂಗಾಯತ ಸಮುದಾಯದ ಮೇಲೆ ಶ್ರೀರಾಮುಲು ಹೆಚ್ಚು ಗಮನ ಹರಿಸಿದರೇ ಹೊರತು ಬೇರೆ ಸಮುದಾಯಗಳನ್ನು ನಿರ್ಲಕ್ಷ್ಯ ಮಾಡಿದ್ದು ಉಗ್ರಪ್ಪ ದಾಖಲೆಗಳ ಮತಗಳಿಂದ ಗೆಲ್ಲಲು ಸಾಧ್ಯವಾಯಿತು.
ಶಿವಮೊಗ್ಗದಲ್ಲಿ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಪ್ರಾಯಾಸದ ಗೆಲುವು ಸಾಧಿಸಿದ್ದಾರೆ. 2014ರ ಲೋಕಸಭಾ ಚುನಾವಣೆಯಲ್ಲಿ ಯಡಿಯೂರಪ್ಪ ಇಡೀ ರಾಜ್ಯದಲ್ಲಿ ಅತಿ ಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಜಿಲ್ಲೆಯಲ್ಲಿ 7 ಬಿಜೆಪಿ ಶಾಸಕರಿದ್ದರೂ ರಾಘವೇಂದ್ರ ಗೆಲುವು ಮತ್ತೊಮ್ಮೆ ವಿಮರ್ಶೆ ಮಾಡಿಕೊಳ್ಳುವಂತಹ ಪಾಠ ಕಲಿಸಿದೆ.
ಜಮಖಂಡಿಯಲ್ಲಿ ಪಕ್ಷದೊಳಗಿರುವ ಕೆಲವರು ಶ್ರೀಕಾಂತ್ ಕುಲಕರ್ಣಿ ಗೆದ್ದರೆ ಮುಂದಿನ ಚುನಾವಣೆಯಲ್ಲಿ ತಮಗೆ ಟಿಕೆಟ್ ಕೈತಪ್ಪಬಹುದೆಂಬ ಭೀತಿಯಿಂದಾಗಿ ನೆಪ ಮಾತ್ರಕ್ಕೆ ಪ್ರಚಾರ ನಡೆಸಿದರು. ಮೂಲಗಳ ಪ್ರಕಾರ, ಇಲ್ಲಿ ಬಿಜೆಪಿಯ ಒಳಹೊಡೆತವೇ ಕಾಂಗ್ರೆಸ್ಗೆ ಇಷ್ಟು ದೊಡ್ಡ ಪ್ರಮಾಣದ ಗೆಲುವಿಗೆ ಸಹಕಾರಿಯಾಗಿದೆ ಎನ್ನಲಾಗಿದೆ.
ರಾಮನಗರ ಮತ್ತು ಮಂಡ್ಯದಲ್ಲಿ ಚುನಾವಣೆಗೂ ಮುನ್ನವೇ ಬಿಜೆಪಿ ಶಸ್ತ್ರತ್ಯಾಗ ಮಾಡಿತ್ತು. ಅದರಲ್ಲೂ ರಾಮನಗರದ ಅಭ್ಯರ್ಥಿ ಎಲ್.ಚಂದ್ರಶೇಖರ್ ಚುನಾವಣಾ ಕಣದಿಂದ ಹಿಂದೆ ಸರಿದಿದ್ದು ಬಿಜೆಪಿಯಲ್ಲಿ ಎಲ್ಲವೂ ಸರಿಯಿಲ್ಲ ಎಂಬುದನ್ನು ಜಗಜ್ಜಾಹೀರು ಮಾಡಿತು.
ಉಪಚುನಾವಣೆಯಲ್ಲಿ ಗೆದ್ದು ಆಪರೇಷನ್ ಕಮಲದ ಮೂಲಕ ಅಧಿಕಾರ ಹಿಡಿಯಲು ಮುಂದಾಗಿದ್ದ ಬಿಜೆಪಿಗೆ ಈ ಫಲಿತಾಂಶ ಎಚ್ಚರಿಕೆಯ ಸಂದೇಶ ರವಾನಿಸಿರುವುದು ಸುಳ್ಳಲ್ಲ.