ಬೆಂಗಳೂರು, ನ.5-ಸನಾತನ ಕಾಲದ ದೊಡ್ಡ ಕೊಡುಗೆಯಾದ ಆಯುರ್ವೇದವನ್ನು ಇಂದಲ್ಲ ನಾಳೆ ಅನಿವಾರ್ಯವಾಗಿ ಅನುಸರಿಸುವ ಪರಿಸ್ಥಿತಿ ಬರುತ್ತದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಎಸ್.ಶಿವಾನಂದಪಾಟೀಲ್ ಅಭಿಪ್ರಾಯಪಟ್ಟರು.
ನಗರದ ಸರ್ಕಾರಿ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ನಡೆದ 3ನೇ ಅಂತಾರಾಷ್ಟ್ರೀಯ ಆಯುರ್ವೇದ ದಿನಾಚರಣೆ ಮತ್ತು ವಿಶೇಷ ಅಂಚೆ ಲಕೋಟೆ ಬಿಡುಗಡೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಇಂದು ನಾವೆಲ್ಲ ಅಲೋಪತಿ ಚಿಕಿತ್ಸೆಯತ್ತ ಹೊರಳಿದ್ದೇವೆ. ಆದರೆ ಇಂದಲ್ಲ, ನಾಳೆ ಆಯುರ್ವೇದವನ್ನೇ ಬಳಸುವ ಅನಿವಾರ್ಯ ಪರಿಸ್ಥಿತಿ ಬರುತ್ತದೆ. ಪಾರಂಪರಿಕವಾದ ಈ ಪದ್ಧತಿಯಿಂದ ಉತ್ತಮ ಚಿಕಿತ್ಸೆ ಸಾಧ್ಯವಿದೆ. ಅಲೋಪತಿಯಲ್ಲಿ ತಕ್ಷಣಕ್ಕೆ ಚಿಕಿತ್ಸೆ ಸಿಗಬಹುದು. ಆದರೆ ಆಯುರ್ವೇದದಿಂದ ನಿಧಾನಗತಿಯಲ್ಲಿ ಚಿಕಿತ್ಸೆ ದೊರೆತರೂ ಪರಿಣಾಮಕಾರಿಯಾಗಿರುವ ಜೊತೆಗೆ ಸುರಕ್ಷಿತ ಪದ್ಧತಿ ಇದಾಗಿದೆ ಎಂದು ಪ್ರತಿಪಾದಿಸಿದರು.
ವಿಜ್ಞಾನ ಒಂದು ಕಡೆ, ಆಯುರ್ವೇದ ಒಂದು ಕಡೆ ಇದೆ. ವಿಜ್ಞಾನ ಅಲೋಪತಿ ಚಿಕಿತ್ಸೆಯನ್ನು ಅಪ್ಪಿಕೊಂಡಿದೆ. ಆಯುರ್ವೇದ ಸನಾತನ ವಿದ್ಯೆಯನ್ನು ಒಪ್ಪಿಕೊಂಡಿದೆ. ಆಯುರ್ವೇದ ಚಿಕಿತ್ಸಾ ಪದ್ಧತಿ ಪುನರುಜ್ಜೀವನಕ್ಕೆ ಕರ್ನಾಟಕ ಆಯುರ್ವೇದ ಮಹಾವಿದ್ಯಾಲಯ ಸಾಕಷ್ಟು ಕೊಡುಗೆ ನೀಡಿದೆ ಎಂದು ಹೇಳಿದರು.
ಯಾವುದೇ ಪದ್ಧತಿಯ ಚಿಕಿತ್ಸೆಯಲ್ಲಿ ರೋಗ ಗುಣಪಡಿಸುವ ಖಾತ್ರಿ ಸಿಕ್ಕರೆ ಅಂತಹ ಚಿಕಿತ್ಸೆಯತ್ತ ಜನ ಹೋಗುತ್ತಾರೆ ಎಂದ ಅವರು, ಸರ್ಕಾರದಿಂದ ಆಯುರ್ವೇದ ಪದ್ಧತಿಗೆ ಹೆಚ್ಚಿನ ನೆರವು ನೀಡಲು ಸಿದ್ಧವಿದೆ. ಇದನ್ನು ನೈಸರ್ಗಿಕ ಪಂಚಭೂತಗಳಲ್ಲಿ ಸಿಗುವ ವಸ್ತುಗಳಿಂದ ನೀಡುವ ಚಿಕಿತ್ಸೆಯಾಗಿದ್ದು, ಹೆಚ್ಚು ಉಪಯುಕ್ತಕರವಾದದ್ದು ಎಂದರು.
1200 ವರ್ಷಗಳ ಇತಿಹಾಸ ಹೊಂದಿರುವ ಈ ಪದ್ಧತಿಗೆ ಇನ್ನಷ್ಟು ಪ್ರಾಮುಖ್ಯತೆ ಸಿಗುವಂತೆ ಮಾಡಬೇಕಿದೆ. ತಾವು ಸಚಿವರಾದ ನಂತರ ಆಯುಷ್ ಇಲಾಖೆಗೆ ಆಯುಕ್ತರ ನೇಮಕ ಮಾಡಲಾಗಿದೆ. ಸಾಕಷ್ಟು ಅಭಿವೃದ್ಧಿ ಕೆಲಸಗಳೂ ಆಗುತ್ತಿವೆ ಎಂದು ತಿಳಿಸಿದರು.
ಕೆಪಿಸಿಸಿ ಅಧ್ಯಕ್ಷ ದಿನೇಶ್ಗುಂಡೂರಾವ್ ಮಾತನಾಡಿ, ಅಲೋಪತಿ ಕೃತಕ ಸೃಷ್ಟಿಯ ವೈದ್ಯಕೀಯ ಪದ್ಧತಿ. ಆಯುರ್ವೇದ ನಿಸರ್ಗದತ್ತವಾದ ಪದ್ಧತಿ. ಚಿಕಿತ್ಸಾ ಪದ್ಧತಿಯ ಬಗ್ಗೆ ಹಲವಾರು ಗೊಂದಲಗಳಿವೆ. ಆದರೆ ಇಡೀ ವಿಶ್ವವೇ ನೈಸರ್ಗಿಕ ಚಿಕಿತ್ಸೆಯತ್ತ ಮುಖ ಮಾಡುತ್ತಿದೆ. ಇದು ಅಭಿವೃದ್ಧಿಗೆ ಮುನ್ನುಡಿ.
ವಿಶ್ವವಿದ್ಯಾನಿಲಯದಲ್ಲಿ ಉಂಟಾಗಿರುವ ಮೂಲಭೂತ ಕೊರತೆ ಬಗ್ಗೆ ತಮ್ಮ ಗಮನಕ್ಕೆ ಬಂದಿದೆ. ಅದನ್ನು ಹಂತ ಹಂತವಾಗಿ ಬಗೆಹರಿಸುತ್ತೇವೆ. ಭಾಗಶಃ ರಸ್ತೆಗಳೂ ಸೇರಿದಂತೆ ಎಲ್ಲಾ ಸೌಲಭ್ಯಗಳನ್ನು ಒದಗಿಸುತ್ತೇವೆ. ಮುಂದಿನ ದಿನಗಳಲ್ಲಿ ಮತ್ತೊಮ್ಮೆ ಕಾಲೇಜಿಗೆ ಬರುತ್ತೇನೆ ಎಂದು ಹೇಳಿದರು.
ಬೆಂಗಳೂರು ಪೆÇೀಸ್ಟ್ ಮಾಸ್ಟರ್ ಜನರಲ್ ಕರ್ನಲ್ ಅರವಿಂದ್ ವರ್ಮಾ, ಸರ್ಕಾರಿ ಆಯುರ್ವೇದ ವಿವಿಯ ಡಾ.ಎಸ್.ಅಹಲ್ಯಾ, ಆಯುಷ್ ಇಲಾಖೆ ಆಯುಕ್ತರಾದ ಮೀನಾಕ್ಷಿ ನೇಗಿ ಮತ್ತಿತರರು ಉಪಸ್ಥಿತರಿದ್ದರು.