ಯೋಜನೆಗಳನ್ನು ಜನರಿಗೆ ತಲುಪಿಸುವುದು ಸರ್ಕಾರಿ ಅಧಿಕಾರಿಗಳ ಕರ್ತವ್ಯ: ಉಪ ಮುಖ್ಯಮಂತ್ರಿ

ಬೆಂಗಳೂರು, ನ.4- ಸರ್ಕಾರಿ ಯೋಜನೆಗಳನ್ನು ಜನರಿಗೆ ತಲುಪಿಸುವುದು ಸರ್ಕಾರಿ ಅಧಿಕಾರಿಗಳ ಕರ್ತವ್ಯ. ಈ ವಿಷಯದಲ್ಲಿ ನಿರ್ಲಕ್ಷ್ಯವಹಿಸುವುದನ್ನು ಸಹಿಸಲು ಸಾಧ್ಯವಿಲ್ಲ ಎಂದು ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಎಚ್ಚರಿಕೆ ನೀಡಿದ್ದಾರೆ.

ಬೆಂಗಳೂರು ನಗರ ಜಿಲ್ಲಾ ಪಂಚಾಯತ್ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿಂದು ಪ್ರಗತಿ ಪರಿಶೀಲನೆ ನಡೆಸಿದ ಅವರು, ಜಿಲ್ಲಾಧಿಕಾರಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಂದ ಹಿಡಿದು ಡಿ ದರ್ಜೆ ನೌಕರರವರೆಗೂ ಎಲ್ಲರೂ ಪ್ರಾಮಾಣಿಕವಾಗಿ ಕೆಲಸ ಮಾಡಬೇಕು. ನೌಕರರು, ಅಧಿಕಾರಿಗಳು ಸರಿಯಾಗಿ ಕೆಲಸ ಮಾಡದಿದ್ದರೆ ಸರ್ಕಾರಕ್ಕೆ ಕೆಟ್ಟ ಹೆಸರು ಬರುತ್ತದೆ ಎಂದು ಹೇಳಿದರು.

ಮುಂದಿನ ದಿನಗಳಲ್ಲಿ ಇನ್ನೊಮ್ಮೆ ಪ್ರಗತಿ ಪರಿಶೀಲನೆ ನಡೆಸಲಾಗುವುದು. ಆಗ ಸಾರ್ವಜನಿಕರು ತಮ್ಮ ಕೆಲಸ ಆಗಿಲ್ಲ ಎಂದು ದೂರು ನೀಡಿದರೆ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಕುಡಿಯುವ ನೀರು, ಗ್ರಾಮೀಣಾಭಿವೃದ್ಧಿ ಇಲಾಖೆಗೆ ಸಂಬಂಧಿಸಿದ ಸೌಲಭ್ಯಗಳನ್ನು ಜನರಿಗೆ ತಲುಪಿಸಲು ಹೆಚ್ಚಿನ ಒತ್ತು ನೀಡಬೇಕು ಎಂದು ತಾಕೀತು ಮಾಡಿದ ಅವರು, ಶುದ್ಧ ಕುಡಿಯುವ ನೀರಿನ ಘಟಕಗಳ ಬಗ್ಗೆ ಮಾಹಿತಿ ಕೇಳಿದರು.

ಆಗ ಅಧಿಕಾರಿಗಳು ಲಿಖಿತವಾಗಿ ನೀಡಿದ ಮಾಹಿತಿಗೂ ಸಭೆಯಲ್ಲಿ ಹೇಳಿದ ಮಾಹಿತಿಗೂ ವ್ಯತ್ಯಾಸ ಕಂಡುಬಂದಿದ್ದರಿಂದ ಗರಂ ಆದ ಪರಮೇಶ್ವರ್, ಸಂಬಂಧಪಟ್ಟ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಎಸ್‍ಸಿ ಎಸ್‍ಟಿ ಅನುದಾನದಲ್ಲಿ 18 ಶುದ್ಧ ನೀರಿನ ಘಟಕ ಆರಂಭವಾಗಬೇಕಾಗಿತ್ತು. ಆದರೆ ಕೇವಲ 4 ಘಟಕಗಳು ಸ್ಥಾಪನೆಯಾಗಿರುವುದನ್ನು ಸಭೆಯಲ್ಲಿ ಪ್ರಸ್ತಾಪಿಸಿದ ಪರಮೇಶ್ವರ್, ಅಧಿಕಾರಿಗಳ ವಿರುದ್ಧ ಹರಿಹಾಯ್ದರು. ಕಾಲಮಿತಿಯಲ್ಲಿ ಘಟಕ ಸ್ಥಾಪಿಸುವಂತೆ ಸೂಚಿಸಿದರು.

ಬೆಂಗಳೂರು ನಗರ ಜಿಲ್ಲೆಯಲ್ಲಿ 21 ಡೆಂಗ್ಯು ಪಾಸಿಟಿವ್ ಪ್ರಕರಣ ದಾಖಲಾಗಿದ್ದು, ಎಚ್1ಎನ್1 55 ಪ್ರಕರಣ ಕಂಡುಬಂದಿವೆ. ಅದರಲ್ಲಿ ಮೂವರು ಸಾವನ್ನಪ್ಪಿದ್ದಾರೆ ಎಂದು ಸಭೆಗೆ ಮಾಹಿತಿ ನೀಡಲಾಯಿತು.

ಬೆಂಗಳೂರು ದಕ್ಷಿಣದಲ್ಲಿ ಒಟ್ಟು 2951 ಶಾಲೆಗಳಿದ್ದು, 8.60 ಲಕ್ಷ ಮಕ್ಕಳು ಓದುತ್ತಿದ್ದಾರೆ. 885 ಪ್ರಾಥಮಿಕ ಸರ್ಕಾರಿ ಶಾಲೆಗಳಿದ್ದು, ಅವುಗಳಲ್ಲಿ 35 ಶಾಲೆಗಳ ದುರಸ್ತಿ ಆಗಬೇಕಾಗಿದೆ. 28 ಶಾಲೆಗಳನ್ನು ಮರು ನಿರ್ಮಾಣವಾಗಬೇಕಾಗಿದೆ ಎಂದು ಸಭೆಗೆ ಮಾಹಿತಿ ನೀಡಲಾಯಿತು.

ಸರ್ಕಾರಿ ವೈದ್ಯರು ಸರಿಯಾದ ಸಮಯಕ್ಕೆ ಆಸ್ಪತ್ರೆಗೆ ಬರುವುದಿಲ್ಲ. ಇದರಿಂದ ರೋಗಿಗಳಿಗೆ ತೊಂದರೆಯಾಗುತ್ತಿದೆ ಎಂದು ಸದಸ್ಯರು ಸಚಿವರ ಗಮನಕ್ಕೆ ತಂದರು. ಸೇವೆಯಲ್ಲಿ ನಿರ್ಲಕ್ಷ್ಯ ತೋರುವ ವೈದ್ಯಾಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳುವುದಾಗಿ ಪರಮೇಶ್ವರ್ ಭರವಸೆ ನೀಡಿದರು.
ಸಭೆಯಲ್ಲಿ ನಗರ ಜಿಲ್ಲಾ ಪಂಚಾಯತ್ ಅಧ್ಯಕ್ಷ ಮುನಿರಾಜು, ಶಾಸಕರಾದ ಎಸ್.ಟಿ.ಸೋಮಶೇಖರ್, ವಿಧಾನ ಪರಿಷತ್ ಸದಸ್ಯ ಅ.ದೇವೇಗೌಡ, ಜಿಲ್ಲಾಧಿಕಾರಿ ವಿಜಯಶಂಕರ್ ಮತ್ತಿತರರು ಪಾಲ್ಗೊಂಡಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ